ರೇಟಿಂಗ್ ಸಿಕ್ಕರೂ ಅಕ್ಷಯ್ ಕುಮಾರ್ ಚಿತ್ರಕ್ಕಿಲ್ಲ ಗೆಲುವು; ಕುಸಿಯಿತು ಮಾರುಕಟ್ಟೆ
ಅಕ್ಷಯ್ ಕುಮಾರ್ ನಟನೆಯ ‘ಕೇಸರಿ ಚಾಪ್ಟರ್ 2’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆ ಮೀರಿ ಹಿನ್ನಡೆ ಅನುಭವಿಸುತ್ತಿದೆ. ಉತ್ತಮ ರೇಟಿಂಗ್ ಪಡೆದಿದ್ದರೂ, ಚಿತ್ರದ ಕಡಿಮೆ ಗಳಿಕೆ ಅಕ್ಷಯ್ ಕುಮಾರ್ ಅವರ ಖ್ಯಾತಿಗೆ ಧಕ್ಕೆ ತಂದಿದೆ. ಬಾಲಿವುಡ್‌ನಲ್ಲಿ ಯಶಸ್ವಿ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ, ‘ಕೇಸರಿ 2’ ಸಹ ಅದೇ ಹಾದಿಯಲ್ಲಿ ಸಾಗುತ್ತಿದೆ ಎಂದು ಚಿತ್ರರಂಗ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಅಕ್ಷಯ್ ಕುಮಾರ್ (Akshay Kumar) ಅವರು ಇತ್ತೀಚೆಗೆ ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಅವರ ಚಿತ್ರಗಳು ಎರಡಂಕಿ ಕಾಣದೆ ಹಲವು ವರ್ಷಗಳೇ ಕಳೆದು ಹೋಗಿವೆ. ಈಗ ಅವರ ನಟನೆಯ ‘ಕೇಸರಿ ಚಾಪ್ಟರ್ 2’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗುವ ಸೂಚನೆ ಸಿಕ್ಕಿದೆ. ಅಕ್ಷಯ್ ಕುಮಾರ್, ಆರ್ ಮಾಧವನ್, ಅನನ್ಯಾ ಪಾಂಡೆ ನಟನೆಯ ಈ ಚಿತ್ರ ನಿತ್ಯ ಒಂದಂಕಿ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರ ಎರಡು ದಿನಕ್ಕೆ ಗಳಿಕೆ ಮಾಡಿದ್ದು ಕೇವಲ 17.25 ಕೋಟಿ ರೂಪಾಯಿ.
ಅಕ್ಷಯ್ ಕುಮಾರ್ ಅವರ ‘ಕೇಸರಿ’ ಸಿನಿಮಾ ಯಶಸ್ಸು ಕಂಡಿತ್ತು. 2019ರಲ್ಲಿ ಬಂದ ಚಿತ್ರದ ಸೀಕ್ವೆಲ್ ಇದಾಗಿದೆ. ಈ ಸಿನಿಮಾ ಮೊದಲ ದಿನ 7.75 ಕೋಟಿ ರೂಪಾಯಿ ಹಾಗೂ ಎರಡನೇ ದಿನ 9.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸದ್ಯ ಈಗ ಆಗುತ್ತಿರುವ ಕಲೆಕ್ಷನ್ ಅಕ್ಷಯ್ ಕುಮಾರ್ ಪಡೆಯುವ ಸಂಭಾವನೆಗೂ ಸಾಕಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇತ್ತೀಚೆಗೆ ಬಾಲಿವುಡ್‌ನಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಗೆಲ್ಲುತ್ತಿಲ್ಲ. ನೂರರಲ್ಲಿ ಒಂದು ಸಿನಿಮಾ ಮಾತ್ರ ಗೆಲ್ಲುತ್ತಿದೆ. ಅಕ್ಷಯ್ ಕುಮಾರ್ ಅವರಂಥ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಲು ಒದ್ದಾಡುತ್ತಿವೆ. ಮುಂಬೈ, ಬೆಂಗಳೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಿದೆ.
‘ಬುಕ್ ಮೈ ಶೋ’ನಲ್ಲಿ ‘ಕೇಸರಿ ಚಾಪ್ಟರ್ 2’ ಸಿನಿಮಾ ಒಳ್ಳೆಯ ರೇಟಿಂಗ್ ಪಡೆದಿದೆ. ಆರುವರೆ ಸಾವಿರ ಜನರು ಇದಕ್ಕೆ ವೋಟ್ ಮಾಡಿದ್ದು 9.4 ರೇಟಿಂಗ್ ನೀಡಿದ್ದಾರೆ. ಆದಾಗ್ಯೂ ಸಿನಿಮಾ ಮಾತ್ರ ಗೆಲ್ಲುವ ಸೂಚನೆ ಸಿಗುತ್ತಿಲ್ಲ. ಇದು ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.
ಇದನ್ನೂ ಓದಿ: ಮೊದಲ ದಿನ ‘ಕೇಸರಿ 2’ ಗಳಿಸಿದ್ದೆಷ್ಟು? ಗೆದ್ದರಾ ಅಕ್ಷಯ್ ಕುಮಾರ್
ಕರಣ್ ಸಿಂಗ್ ತ್ಯಾಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹೀರೂ ಜೋಹರ್, ಅರುಣಾ ಭಾಟಿಯಾ, ಕರಣ್ ಜೋಹರ್, ಅಪೂರ್ವ ಮೆಹ್ತಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಸೋತರೆ ಅಕ್ಷಯ್ ಕುಮಾರ್ ಸಂಭಾವನೆ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.