ಗಾಯಕಿ ಅಲ್ಕಾ ಯಾಗ್ನಿಕ್ (Alka Yagnik) ಅವರಿಗೆ ಸಿನಿಮಾ ಸಂಗೀತ ಲೋಕದಲ್ಲಿ ಇರುವ ಅನುಭವ ಅಪಾರ. 7 ಸಾವಿರಕ್ಕೂ ಅಧಿಕ ಗೀತೆಗಳಿಗೆ ಅವರು ಧ್ವನಿ ನೀಡಿದ್ದಾರೆ. 1980ರ ಕಾಲದಿಂದ ಇಂದಿನವರೆಗೂ ಅವರು ಬಹುಬೇಡಿಕೆಯ ಗಾಯಕಿ ಆಗಿಯೇ ಮಿಂಚುತ್ತಿದ್ದಾರೆ. 2022ರಲ್ಲಿ ಯೂಟ್ಯೂಬ್ನಲ್ಲಿ (YouTube) ಅತಿ ಹೆಚ್ಚು ಪ್ರಸಾರ ಕಂಡ ಹಾಡುಗಳು ಈ ಗಾಯಕಿಯದ್ದು ಎಂಬುದು ಹೆಮ್ಮೆಯ ಸಂಗತಿ. ಈ ವಿಚಾರದಲ್ಲಿ ಅವರು ಜಾಗತಿಕ ಮಟ್ಟದ ಅನೇಕ ಜನಪ್ರಿಯ ಗಾಯಕರನ್ನು ಹಿಂದಿಕ್ಕಿದ್ದಾರೆ. ಆ ಮೂಲಕ ಸತತ 3ನೇ ವರ್ಷ ಅವರು ನಂಬರ್ ಒನ್ ಪಟ್ಟ ಗಿಟ್ಟಿಸಿದ್ದಾರೆ. ಈ ಸಾಧನೆಗಾಗಿ ಅಲ್ಕಾ ಯಾಗ್ನಿಕ್ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳ ಸಂದೇಶ ಹರಿದುಬರುತ್ತಿದೆ. ಅಲ್ಕಾ ಯಾಗ್ನಿಕ್ ಕಂಠದಲ್ಲಿ ಮೂಡಿಬಂದ ಹಾಡುಗಳನ್ನು (Alka Yagnik Songs) ಮತ್ತೆ ಮತ್ತೆ ಕೇಳುವ ಮೂಲಕ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
2022ರಲ್ಲಿ ಅಲ್ಕಾ ಯಾಗ್ನಿಕ್ ಅವರ ಹಾಡುಗಳು 15.3 ಬಿಲಿಯನ್ ಬಾರಿ ವೀಕ್ಷಣೆ ಕಂಡಿವೆ. ಆ ಮೂಲಕ ಅವರು ನಂಬರ್ 1 ಸ್ಥಾನ ಪಡೆದುಕೊಂಡಿದ್ದಾರೆ. ಪ್ರತಿ ದಿನ ಸರಾಸರಿ 4.2 ಕೋಟಿ ಬಾರಿ ಅವರ ಹಾಡುಗಳು ಪ್ರಸಾರ ಆಗಿವೆ! ಅಲ್ಕಾ ಯಾಗ್ನಿಕ್ ಅವರ ಹಾಡುಗಳು 2021ರಲ್ಲಿ 17 ಬಿಲಿಯನ್ ಹಾಗೂ 2020ರಲ್ಲಿ 16.6 ಬಿಲಿಯನ್ ಬಾರಿ ಪ್ರಸಾರ ಕಂಡಿದ್ದವು.
2022ರ ವರ್ಷದಲ್ಲಿ 14.7 ಬಿಲಿಯನ್ ಸ್ಟ್ರೀಮಿಂಗ್ ಹೊಂದಿರುವ ಸಿಂಗರ್ ಬ್ಯಾಡ್ ಬನ್ನಿ ಅವರು 2ನೇ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಉದಿತ್ ನಾರಾಯಣ್ (10.8 ಬಿಲಿಯನ್), ನಾಲ್ಕನೇ ಸ್ಥಾನದಲ್ಲಿ ಅರಿಜಿತ್ ಸಿಂಗ್ (10.7 ಬಿಲಿಯನ್) ಹಾಗೂ ಐದನೇ ಸ್ಥಾನದಲ್ಲಿ ಕುಮಾರ್ ಸಾನು (9.09 ಬಿಲಿಯನ್) ಇದ್ದಾರೆ. ಆ ಮೂಲಕ ಭಾರತೀಯ ಗಾಯಕರಿಗೆ ಮತ್ತು ಬಾಲಿವುಡ್ ಗೀತೆಗಳಿಗೆ ಜಾಗತಿಕ ಮಟ್ಟದಲ್ಲಿ ಎಷ್ಟು ಜನಪ್ರಿಯತೆ ಇದೆ ಎಂಬುದು ಸಾಬೀತಾಗಿದೆ.
ಇದನ್ನೂ ಓದಿ: ‘ನಾಟು ನಾಟು..’ ಜತೆ ಸ್ಪರ್ಧೆಯಲ್ಲಿರುವ ನಾಲ್ಕು ಹಾಡುಗಳು ಇವೇ ನೋಡಿ; ಯಾವುದಕ್ಕೆ ಚಾನ್ಸ್?
ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಬಿಟಿಎಸ್, ಬ್ಯಾಕ್ ಪಿಂಕ್ ಮುಂತಾದ ತಂಡಗಳ ಕಲಾವಿದರನ್ನೂ ಕೂಡ ಭಾರತೀಯ ಗಾಯಕರು ಹಿಂದಿಕ್ಕಿದ್ದಾರೆ. ಅಲ್ಕಾ ಯಾಗ್ನಿಕ್, ಉದಿತ್ ನಾರಾಯಣ್, ಕುಮಾರ್ ಸಾನು, ಅರಿಜಿತ್ ಸಿಂಗ್ ಅವರ ಎವರ್ಗ್ರೀನ್ ಗೀತೆಗಳು ಯೂಟ್ಯೂಬ್ನಲ್ಲಿ ರಾರಾಜಿಸುತ್ತಿವೆ.
ಇದನ್ನೂ ಓದಿ: Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್ಆರ್ಆರ್ನ ನಾಟು ನಾಟು ಹಾಡು
ಅಲ್ಕಾ ಯಾಗ್ನಿಕ್ ಅವರು ನೀಡಿದ ಸೂಪರ್ ಹಿಟ್ ಗೀತೆಗಳಿಗೆ ಲೆಕ್ಕವೇ ಇಲ್ಲ. 90ರ ದಶಕದಲ್ಲಿ ಮಾಧುರಿ ದೀಕ್ಷಿತ್, ಶ್ರೀದೇವಿ, ಜೂಹೀ ಚಾವ್ಲಾ ಮುಂತಾದ ನಟಿಯರ ಸೂಪರ್ ಹಿಟ್ ಹಾಡುಗಳು ಮೂಡಿಬಂದಿದ್ದು ಅಲ್ಕಾ ಯಾಗ್ನಿಕ್ ಅವರ ಕಂಠದಲ್ಲಿ. ಇಂದಿಗೂ ಆ ಗೀತೆಗಳನ್ನು ಅಭಿಮಾನಿಗಳು ಮುಗಿಬಿದ್ದು ಕೇಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.