
ಕಿರುತೆರೆ ಹಾಗೂ ಬಾಲಿವುಡ್ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ಅಬುಧಾಬಿ ಪ್ರವಾಸದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ಭಾರಿ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಪತಿ ವಿಕ್ಕಿ ಜೈನ್ ಜೊತೆ ದುಬೈ ಪ್ರವಾಸದಲ್ಲಿರುವ ಅಂಕಿತಾ, ಅಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವಾಗ ಹಿಜಾಬ್ (Hijab) ಧರಿಸಿದ್ದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ನಟಿಯ ಬೆಂಬಲಕ್ಕೆ ನಿಂತಿರುವ ಅವರ ಅಭಿಮಾನಿಗಳು ಟ್ರೋಲರ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ.
ಗುರುವಾರ (ಮೇ 28) ಅಂಕಿತಾ ಲೋಖಂಡೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಬುಧಾಬಿ ಪ್ರವಾಸದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದರು. ‘ನನ್ನ ಕ್ಯಾಮೆರಾ ರೋಲ್‌ನಿಂದ ಅಬುಧಾಬಿಯ ಸಣ್ಣ ಪ್ರೀತಿಯ ಜಲಕ್. ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡುತ್ತಾ, ನಗುತ್ತಾ, ನೆನಪುಗಳನ್ನು ಮೂಡಿಸಿಕೊಳ್ಳುತ್ತಿರುವೆ’ ಎಂದು ಅಂಕಿತಾ ಕ್ಯಾಪ್ಷನ್ ಬರೆದುಕೊಂಡಿದ್ದರು. ಈ ಫೋಟೋಗಳ ಪೈಕಿ ಕೆಲವು ಚಿತ್ರಗಳಲ್ಲಿ ಅವರು ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು.
ಅಂಕಿತಾ ಅವರ ಈ ಪೋಸ್ಟ್ ಹೊರಬೀಳುತ್ತಿದ್ದಂತೆ ಒಂದು ವರ್ಗದ ನೆಟ್ಟಿಗರು ಅವರ ವಸ್ತ್ರ ವಿನ್ಯಾಸವನ್ನು ತೀವ್ರವಾಗಿ ಪ್ರಶ್ನಿಸಲು ಶುರು ಮಾಡಿದರು. ‘ಅವರು ಯಾಕೆ ಹಿಜಾಬ್ ಧರಿಸಿದ್ದಾರೆ? ಅವರೇನಾದರೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರಾ?’ ಹಾಗೂ ‘ನೀವು ಜೈನ್ ತಾನೇ, ಸ್ವಲ್ಪ ಯೋಚಿಸಿ ಬಟ್ಟೆ ಧರಿಸಿ’ ಎಂಬಂತಹ ನೆಗೆಟಿವ್ ಕಮೆಂಟ್‌ಗಳು ಹರಿದುಬಂದವು.
ಆದರೆ, ಈ ಟ್ರೋಲಿಂಗ್ ವಿರುದ್ಧ ಅಂಕಿತಾ ಅವರ ಅಭಿಮಾನಿಗಳು ತಕ್ಷಣವೇ ತಿರುಗಿಬಿದ್ದಿದ್ದಾರೆ. ದುಬೈ ಮತ್ತು ಅಬುಧಾಬಿಯ ಪ್ರಸಿದ್ಧ ಮಸೀದಿಗಳಿಗೆ ಭೇಟಿ ನೀಡುವಾಗ ಅಲ್ಲಿನ ನಿಯಮಗಳ ಪ್ರಕಾರ ತಲೆ ಮುಚ್ಚಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಹಾಗಾಗಿಯೇ ಅಂಕಿತಾ ಹಿಜಾಬ್ ಧರಿಸಿದ್ದಾರೆ ಮತ್ತು ಮಸೀದಿಯ ಆವರಣದಿಂದ ಹೊರಬಂದ ನಂತರ ಅವರು ಹಿಜಾಬ್ ಇಲ್ಲದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ ಎಂಬುದನ್ನು ಅಭಿಮಾನಿಗಳು ನೆಟ್ಟಿಗರಿಗೆ ನೆನಪಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಭಾರತ ಸಿನಿಮಾದ ನಿರ್ಮಾಪಕನೊಟ್ಟಿಗೆ ಮಲಗಲು ಹೇಳಿದ್ದರು: ನಟಿ ಅಂಕಿತಾ
‘ಅವರು ಯಾವುದೇ ಧರ್ಮವನ್ನು ಪ್ರಚಾರ ಮಾಡುತ್ತಿಲ್ಲ. ಬದಲಿಗೆ ಅಲ್ಲಿನ ನಿಯಮಗಳನ್ನು ಗೌರವಿಸಿ ಆ ಸುಂದರ ಸ್ಮಾರಕವನ್ನು ವೀಕ್ಷಿಸುತ್ತಿದ್ದಾರೆ. ದೇವಸ್ಥಾನಗಳಿಗೆ ಹೋಗುವಾಗ ನಿರ್ದಿಷ್ಟ ಡ್ರೆಸ್ ಕೋಡ್ ಇರುವಂತೆ, ಮಸೀದಿಗೂ ಇರುತ್ತದೆ ಎಂಬುದನ್ನು ಅರಿಯದವರು ಸುಮ್ಮನಿರಬೇಕು’ ಎಂದು ಅಭಿಮಾನಿಯೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ‘ಇದು ಸಂಪೂರ್ಣವಾಗಿ ಅವರ ವೈಯಕ್ತಿಕ ಆಯ್ಕೆ’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.