Queen Elizabeth II: ರಾಣಿ ಎಲಿಜಬೆತ್ II ನಿಧನಕ್ಕೆ ಸಂತಾಪ ಸೂಚಿಸಿದ ಬಾಲಿವುಡ್ ಸೆಲೆಬ್ರಿಟಿಗಳು
RIP Queen Elizabeth II: 96ನೇ ವಯಸ್ಸಿನಲ್ಲಿ ರಾಣಿ ಎಲಿಜಬೆತ್ II ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ರಿತೇಶ್ ದೇಶಮುಖ್, ಅನುಪಮ್ ಖೇರ್, ಅನುಷ್ಕಾ ಶರ್ಮಾ ಮುಂತಾದವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
70 ವರ್ಷಗಳ ರಾಜ್ಯಭಾರ ನಡೆಸಿದ ರಾಣಿ ಎಲಿಜಬೆತ್ II (Queen Elizabeth II) ನಿಧನಕ್ಕೆ ವಿಶ್ವದ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಬ್ರಿಟಿಷ್ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಯವರೆಗೆ ಸಿಂಹಾಸನದ ಮೇಲೆ ಕೂತ ದಾಖಲೆಯನ್ನು ಅವರು ಹೊಂದಿದ್ದಾರೆ. ಇಂಥ ಹಲವು ಕಾರಣಗಳಿಂದಾಗಿ ಅವರು ಛಾಪು ಮೂಡಿಸಿದ್ದರು. 96ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ. ಗುರುವಾರ (ಸೆ.8) ರಾಣಿ ಎಲಿಜಬೆತ್ II ಕೊನೆಯುಸಿರು ಎಳೆದ ಸುದ್ದಿ ಕೇಳಿ ಎಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ರಾಣಿ ನಿಧನಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಸಂತಾಪ ಸೂಚಿಸಿದ್ದಾರೆ. ಕರೀನಾ ಕಪೂರ್ ಖಾನ್ (Kareena Kapoor Khan), ಅನುಷ್ಕಾ ಶರ್ಮಾ, ಅನುಪಮ್ ಖೇರ್ (Anupam Kher), ರಿತೇಶ್ ದೇಶಮುಖ್ ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅವರು 70 ವರ್ಷಗಳ ಕಾಲ ರಾಣಿ ಆಗಿದ್ದರೂ ದಯೆ, ಕರುಣೆ, ಶಕ್ತಿ, ಘನತೆ ಮುಂತಾದ ಗುಣಗಳನ್ನು ಪ್ರತಿನಿಧಿಸಿದ್ದರು. ಅವರ ವ್ಯಕ್ತಿತ್ವ ಸ್ಫೂರ್ತಿದಾಯಕವಾಗಿತ್ತು. ರಾಣಿ ಎಲಿಜಬೆತ್ ಆತ್ಮಕ್ಕೆ ಶಾಂತಿ ಸಿಗಲಿ. ಓಂ ಶಾಂತಿ’ ಎಂದು ಖ್ಯಾತ ನಟ ಅನುಪಮ್ ಖೇರ್ ಅವರು ಬರೆದುಕೊಂಡಿದ್ದಾರೆ.
ಬ್ರಿಟಿಷ್ ರಾಣಿಯನ್ನು ಹೊಗಳಿದ್ದನ್ನು ಕೆಲವು ನೆಟ್ಟಿಗರು ಸಹಿಸಿಲ್ಲ. ‘ಅವರು ಅಷ್ಟೆಲ್ಲ ಒಳ್ಳೆಯವರಾಗಿದ್ದರೆ ಭಾರತದಿಂದ ಕೊಳ್ಳೆ ಹೊಡೆದ ಸಂಪತ್ತನ್ನು ಹಿಂದಿರುಗಿಸಬೇಕಿತ್ತು’ ಎಂದು ಕೆಲವರು ಟೀಕಿಸಿದ್ದಾರೆ. ಇಂಗ್ಲಿಷ್ ಫಿಲ್ಮ್ ಮೇಕರ್ಗಳ ಜೊತೆ ಸಿನಿಮಾ ಮಾಡುವ ಅವಕಾಶ ಗಿಟ್ಟಿಸುವ ಸಲುವಾಗಿ ಅನುಪಮ್ ಖೇರ್ ಈ ರೀತಿ ಓಲೈಸಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
‘ರಾಣಿ ಎಲಿಜಬೆತ್ ಅವರದ್ದು ಎಂಥ ಅದ್ಭುತ ಬದುಕು. ಅವರು ಬಣ್ಣಗಳನ್ನು ಇಷ್ಟಪಟ್ಟರು ಮತ್ತು ಅದರ ಪ್ರತಿ ಛಾಯೆಯನ್ನೂ ಜೀವಿಸಿದರು’ ಎಂದು ನಟಿ ಸುಷ್ಮಿತಾ ಸೇನ್ ಅವರು ರಾಣಿಯ ಗುಣಗಾನ ಮಾಡಿದ್ದಾರೆ. ಕರೀನಾ ಕಪೂರ್ ಖಾನ್ ಮತ್ತು ಅನುಷ್ಕಾ ಶರ್ಮಾ ಅವರು ರಾಣಿ ಎಲಿಜಬೆತ್ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
End of an era!! Through the toughest times she never let got of her dignity. Today is indeed a sad day, condolences to the family and the people of UK. #QueenElizabethII https://t.co/LWAwvAWwbQ
— Riteish Deshmukh (@Riteishd) September 8, 2022
‘ಒಂದು ಯುಗ ಅಂತ್ಯವಾಯ್ತು. ಕಷ್ಟದ ಸಂದರ್ಭದಲ್ಲಿಯೂ ಕೂಡ ಅವರು ತಮ್ಮ ಘನತೆಯನ್ನು ಬಿಟ್ಟುಕೊಡಲಿಲ್ಲ. ಇಂದು ನಿಜಕ್ಕೂ ದುಃಖದ ದಿನ. ರಾಣಿಯ ಕುಟುಂಬದ ಸದಸ್ಯರಿಗೆ ಮತ್ತು ಯುನೈಟೆಡ್ ಕಿಂಗ್ಡಮ್ ಜನತೆಗೆ ಸಂತಾಪಗಳು’ ಎಂದು ರಿತೇಶ್ ದೇಶಮುಖ್ ಟ್ವೀಟ್ ಮಾಡಿದ್ದಾರೆ. ‘ಅವರೇನು ನಿಮಗೆ ಅಜ್ಜಿ ಆಗಬೇಕಾ’ ಎಂದು ಕೆಲವರು ರಿತೇಶ್ಗೆ ಕಾಲೆಳೆದಿದ್ದಾರೆ. ‘ರಾಣಿಯ ಪೂರ್ವಜರು ಭಾರತಕ್ಕೆ ನೀಡಿದ ನೋವನ್ನು ಮರೆಯಬೇಡಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:54 am, Fri, 9 September 22