
ಅನುಷ್ಕಾ ಶರ್ಮಾ (Anushka Sharma) ಅವರು ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟನೆಗೆ ಕಂಬ್ಯಾಕ್ ಮಾಡೋಕೆ ರೆಡಿ ಆಗಿದ್ದಾರೆ. ಇದರ ಜತೆಗೆ ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ (Clean Slate Filmz) ಬ್ಯಾನರ್ ಸ್ಥಾಪಿಸಿ ಅದರ ಅಡಿಯಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರ ನಿರ್ಮಾಣದ ಹಲವು ಸಿನಿಮಾಗಳು, ವೆಬ್ ಸೀರಿಸ್ ರಿಲೀಸ್ ಆಗಿ ಹಿಟ್ ಆಗಿವೆ. ‘ಪಾತಾಳ್ ಲೋಕ್’ ವೆಬ್ ಸರಣಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಇದನ್ನು ಅನುಷ್ಕಾ ಅವರೇ ನಿರ್ಮಾಣ ಮಾಡಿದ್ದರು. ಈಗ ಅನುಷ್ಕಾ ಶರ್ಮಾ ನಿರ್ಮಾಣ ಸಂಸ್ಥೆಯಿಂದ ಹೊರ ಬರುವ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.
ಅನುಷ್ಕಾ ಹಾಗೂ ಅವರ ಸಹೋದರ ಕರ್ಣೇಶ್ ಶರ್ಮಾ ಇಬ್ಬರೂ ಒಟ್ಟಾಗಿ 2013ರಲ್ಲಿ ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದರು. ಇಬ್ಬರೂ ಸೇರಿ ಈ ಸಂಸ್ಥೆಯನ್ನು ನಡೆಸುತ್ತಿದ್ದರು. ಕರ್ಣೇಶ್ ಕೂಡ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಒಟ್ಟಿಗೆ 8 ಸಿನಿಮಾಗಳನ್ನು ನಿರ್ಮಾಣ ಮಾಡುವ ಚಾಲೆಂಜ್ಅನ್ನು ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ ತೆಗೆದುಕೊಂಡ ಬಗ್ಗೆ ವರದಿ ಆಗಿತ್ತು. ಹೀಗಿರುವಾಗಲೇ ಅನುಷ್ಕಾ ನಿರ್ಮಾಣ ಸಂಸ್ಥೆ ತೊರೆದಿದ್ದಾರೆ. ಹಾಗಾದರೆ ಮುಂದೆ ಇದನ್ನು ನೋಡಿಕೊಳ್ಳೋದು ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಈ ಬಗ್ಗೆ ಬರೆದುಕೊಂಡಿರುವ ಅನುಷ್ಕಾ, ‘ನನ್ನ ಸಹೋದರ ಕರ್ಣೇಶ್ ಜತೆ ಸೇರಿ ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ ಅನ್ನು ಪ್ರಾರಂಭಿಸಿದೆ. ನಿರ್ಮಾಣದ ವಿಚಾರದಲ್ಲಿ ನಾವು ಆಗ ಹೊಸಬರು. ನಮ್ಮ ಪ್ರಯಾಣದಲ್ಲಿ ಹಿಂತಿರುಗಿ ನೋಡಿದಾಗ ನಾವು ಸಾಧಿಸಿದ್ದನ್ನು ನೋಡಿ ಖುಷಿ ಆಗುತ್ತದೆ. ನಮ್ಮ ನಿರ್ಮಾಣ ಸಂಸ್ಥೆ ಸಾಕಷ್ಟು ಸಾಧನೆ ಮಾಡಿದೆ. ಇದಕ್ಕೆ ಕರ್ಣೇಶ್ ಕೊಡುಗೆ ದೊಡ್ಡದು’ ಎಂದಿದ್ದಾರೆ ಅನುಷ್ಕಾ.
‘ನನ್ನ ಬಳಿ ಎಷ್ಟೇ ಸಮಯವಿದ್ದರೂ ಅದನ್ನು ನಾನು ನಟನೆಗೆ ಮೀಸಲಿಡಲು ಬಯಸುತ್ತೇನೆ. ಹೀಗಾಗಿ, ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ನಿಂದ ನಾನು ಹೊರಬರುತ್ತಿದ್ದೇನೆ. ಕರ್ಣೇಶ್ ಇದನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ’ ಎಂದು ಅನುಷ್ಕಾ ಅವರು ನಿರ್ಧಾರ ತಿಳಿಸಿದ್ದಾರೆ. 2018ರಲ್ಲಿ ತೆರೆಗೆ ಬಂದ ‘ಝೀರೋ’ ಚಿತ್ರದ ಬಳಿಕ ಅನುಷ್ಕಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಮದುವೆ, ಮಕ್ಕಳು ಎಂದು ಕುಟುಂಬದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಅನುಷ್ಕಾ ಶರ್ಮಾ ಅವರು ‘ಚಕ್ದಾ ಎಕ್ಸ್ಪ್ರೆಸ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕ್ರಿಕೆಟರ್ ಝುಲನ್ ಗೋಸ್ವಾಮಿ ಅವರ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ನೆಟ್ಫ್ಲಿಕ್ಸ್ನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ ಅಡಿಯಲ್ಲಿ ‘ಎನ್ಎಚ್10’, ‘ಪರಿ’, ‘ಪಾತಾಳ್ ಲೋಕ್’, ‘ಬುಲ್ಬುಲ್’ ಮೊದಲಾದವು ಪ್ರಾಜೆಕ್ಟ್ಗಳು ನಿರ್ಮಾಣ ಆಗಿದೆ.
ಇದನ್ನೂ ಓದಿ: Virat Kohli: ಎಲ್ಲರೆದುರು ತರಲೆ ಮಾಡಿಕೊಂಡಿರುವ ವಿರಾಟ್, ಅನುಷ್ಕಾ ಎದುರು ಬಂದರೆ ಹೇಗೆ ವರ್ತಿಸುತ್ತಾರಂತೆ ಗೊತ್ತಾ?
Anushka Sharma: ಸಿಂಪಲ್ ಲುಕ್ನಲ್ಲೇ ಅಭಿಮಾನಿಗಳ ಮನಗೆದ್ದ ಅನುಷ್ಕಾ ಶರ್ಮಾ