ಕೆಎಲ್ ರಾಹುಲ್-ಸಂಜೀವ್ ಗೋಯೆಂಕಾ ವಿವಾದ ಅಂತ್ಯ; ಪ್ರತಿಕ್ರಿಯೆ ನೀಡಿದ ಅಥಿಯಾ ಶೆಟ್ಟಿ
ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲಿಕ ಸಂಜೀವ್ ಗೋಯೆಂಕಾ ಹಾಗೂ ಕ್ಯಾಪ್ಟನ್ ಕೆಎಲ್ ರಾಹುಲ್ ನಡುವೆ ಎದಿದ್ದ ಬಿರುಗಾಳಿ ಈಗ ಶಾಂತವಾಗಿದೆ. ಆ ಬಗ್ಗೆ ಕೆಎಲ್ ರಾಹುಲ್ ಪತ್ನಿ ಅಥಿಯಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಮುಂದಿನ ವರ್ಷ ಕೆಎಲ್ ರಾಹುಲ್ ಅವರು ಬೇರೆ ಟೀಮ್ಗೆ ಆಡಲಿದ್ದಾರೆ ಎಂಬ ಊಹಾಪೋಹ ಹರಡಿತ್ತು. ಅದಕ್ಕೂ ಈಗ ಪೂರ್ಣವಿರಾಮ ಬಿದ್ದಂತೆ ಆಗಿದೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಹಂತ ತಲುಪಿದೆ. ಈ ನಡುವೆ ಲಖನೌ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್ ಕೆಎಲ್ ರಾಹುಲ್ (KL Rahul) ಅಭಿಮಾನಿಗಳು ತೀವ್ರ ಬೇಸರ ಮಾಡಿಕೊಂಡಿದ್ದಾರೆ. ತಂಡ ಮಾಲಿಕ ಸಂಜೀವ್ ಗೋಯೆಂಕಾ (Sanjiv Goenka) ಜೊತೆ ನಡೆದ ಬಿರುಸಿನ ಮಾತುಕಥೆಯ ದೃಶ್ಯ ವೈರಲ್ ಆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಹತ್ತಾರು ಬಗೆಯ ಚರ್ಚೆ ನಡೆದಿದೆ. ಈ ನಡುವೆ ಕೆಎಲ್ ರಾಹುಲ್ ಅವರ ಪತ್ನಿ, ನಟಿ ಅಥಿಯಾ ಶೆಟ್ಟಿ (Athiya Shetty) ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಒಂದು ಸಾಲನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಎದುರು ಲಖನೌ ಸೂಪರ್ ಜೈಂಟ್ಸ್ ತಂಡ ಹೀನಾಯವಾಗಿ ಸೋಲು ಅನುಭವಿಸಿತು. ಪಂದ್ಯ ಮುಗಿದ ಕೂಡಲೇ ತಂಡದ ಮಾಲಿಕ ಸಂಜೀವ್ ಗೋಯೆಂಕಾ ಅವರು ಮೈದಾನಕ್ಕೆ ಬಂದು ಕೆಎಲ್ ರಾಹುಲ್ ಜೊತೆ ಮಾತಿನ ಚಕಮಕಿ ನಡೆಸಿದರು. ಹತ್ತಾರು ಕ್ಯಾಮೆರಾಗಳ ಎದುರಿನಲ್ಲೇ ತಂಡದ ನಾಯಕನ್ನು ಆ ರೀತಿ ನಡೆಸಿಕೊಂಡಿದ್ದು ಸರಿಯಲ್ಲ ಎಂದು ಕ್ರಿಕೆಟ್ಪ್ರೇಮಿಗಳು ಕಮೆಂಟ್ ಮಾಡಿದ್ದಾರೆ.
ಆದರೆ ಈಗ ಸಂಜೀವ್ ಗೋಯೆಂಕಾ ಮತ್ತು ಕೆಎಲ್ ರಾಹುಲ್ ನಡುವಿನ ಜಟಾಪಟಿ ಅಂತ್ಯವಾದಂತಿದೆ. ಸೋಮವಾರ ರಾತ್ರಿ ಸಂಜೀವ್ ಗೋಯೆಂಕಾ ಅವರು ಕೆಎಲ್ ರಾಹುಲ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದಾರೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ. ಇಬ್ಬರೂ ನಗುನಗುತ್ತಲೇ ಪರಸ್ಪರ ತಬ್ಬಿಕೊಂಡಿದ್ದಾರೆ. ಇದರಿಂದ ಕೆಎಲ್ ರಾಹುಲ್ ಅಭಿಮಾನಿಗಳಿಗೆ ಸಮಾಧಾನ ಆಗಿದೆ.
ಇದನ್ನೂ ಓದಿ: ಲಕ್ನೋ ತೊರೆಯುತ್ತಾರಾ ಕೆಎಲ್ ರಾಹುಲ್? ವಿವಾದದ ಬಗ್ಗೆ ಮೌನ ಮುರಿದ ಕೋಚ್
ಅಥಿಯಾ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಬಿರುಗಾಳಿ ನಂತರದ ಪ್ರಶಾಂತತೆ’ ಎಂದು ಬರೆದುಕೊಂಡಿದ್ದಾರೆ. ಅಂದರೆ, ಕೆಎಲ್ ರಾಹುಲ್ ಹಾಗೂ ಸಂಜೀವ್ ಗೋಯೆಂಕಾ ನಡುವೆ ಎದ್ದಿದ್ದ ಬಿರುಗಾಳಿ ಈಗ ಶಾಂತವಾಗಿದೆ ಎಂಬ ಅರ್ಥದಲ್ಲೇ ಅವರು ಈ ಸಾಲುಗಳನ್ನು ಬರೆದುಕೊಂಡಿದ್ದಾರೆ ಎಂದು ಅನೇಕರು ಊಹಿಸಿದ್ದಾರೆ. ಅದರ ಸ್ಕ್ರೀನ್ ಶಾಟ್ ವೈರಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.