‘ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ ಪಡೆದ ‘ಬಜರಂಗಿ ಭಾಯಿಜಾನ್​’ ನಟಿ; ಈಗ ಹೇಗಿದ್ದಾಳೆ ಮುನ್ನಿ?

Harshaali Malhotra: ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಅಪ್​ಲೋಡ್​ ಮಾಡುವ ಮೂಲಕ ಅವಾರ್ಡ್​ ಪಡೆದ ಖುಷಿಯನ್ನು ಹರ್ಷಾಲಿ ಮಲ್ಹೋತ್ರಾ ಎಲ್ಲರ ಜೊತೆ ಹಂಚಿಕೊಂಡಿದ್ದಾಳೆ. ಆಕೆಗೆ ಎಲ್ಲರೂ ಶುಭಕೋರುತ್ತಿದ್ದಾರೆ.

‘ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ ಪಡೆದ ‘ಬಜರಂಗಿ ಭಾಯಿಜಾನ್​’ ನಟಿ; ಈಗ ಹೇಗಿದ್ದಾಳೆ ಮುನ್ನಿ?
ಸಲ್ಮಾನ್ ಖಾನ್, ಹರ್ಷಾಲಿ ಮಲ್ಹೋತ್ರಾ

2015ರಲ್ಲಿ ತೆರೆಕಂಡು ‘ಬಜರಂಗಿ ಭಾಯಿಜಾನ್​’ (Bajrangi Bhaijaan Movie) ಸಿನಿಮಾ ಸೂಪರ್ ಹಿಟ್​ ಆಗಿತ್ತು. ಕಬೀರ್​ ಖಾನ್ ನಿರ್ದೇಶಿಸಿದ್ದ ಆ ಚಿತ್ರದಲ್ಲಿ ಸಲ್ಮಾನ್​ ಖಾನ್​ (Salman Khan) ಅವರು ಡಿಫರೆಂಟ್​ ಪಾತ್ರ ಮಾಡಿದ್ದರು. ಅವರ ಜೊತೆ ಬಾಲನಟಿ ಹರ್ಷಾಲಿ ಮಲ್ಹೋತ್ರಾ (Harshaali Malhotra) ಗಮನ ಸೆಳೆದಿದ್ದಳು. ‘ಬಜರಂಗಿ ಭಾಯಿಜಾನ್​’ ಸಿನಿಮಾ ತೆರಕಂಡಾಗ ಹರ್ಷಾಲಿಗೆ ಕೇವಲ 7 ವರ್ಷ ವಯಸ್ಸು. ಈಗ ಆಕೆಗೆ 13ರ ಪ್ರಾಯ. ಈಗ ಹರ್ಷಾಲಿಯನ್ನು ನೆನಪಿಸಿಕೊಳ್ಳಲು ಒಂದು ಕಾರಣ ಇದೆ. ಈ ಬಾಲನಟಿಗೆ ‘ಭಾರತ ರತ್ನ ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ (Bharat Ratna Dr Ambedkar National Award) ಸಿಕ್ಕಿದೆ. ‘ಬಜರಂಗಿ ಭಾಯಿಜಾನ್​’ ಸಿನಿಮಾದಲ್ಲಿನ ನಟನೆಗಾಗಿ ಈ ಗೌರವ ಸಂದಿದೆ. ಟ್ರೋಫಿ ಹಿಡಿದು ಖುಷಿಯಿಂದ ಪೋಸ್​​ ನೀಡಿರುವ ಹರ್ಷಾಲಿಯ ಫೋಟೋಗಳು ವೈರಲ್​ ಆಗಿವೆ. ಆಕೆಗೆ ಎಲ್ಲರೂ ಶುಭಕೋರುತ್ತಿದ್ದಾರೆ.

‘ಬಜರಂಗಿ ಭಾಯಿಜಾನ್​’ ಸಿನಿಮಾದಿಂದ ಹರ್ಷಾಲಿಗೆ ಸಖತ್​ ಜನಪ್ರಿಯತೆ ಸಿಕ್ಕಿತ್ತು. ಪಾಕಿಸ್ತಾನದಿಂದ ಬಂದು ಭಾರತದಲ್ಲಿ ಕಳೆದುಹೋಗುವ ಮುನ್ನಿ ಎಂಬ ಮೂಕ ಹುಡುಗಿಯ ಪಾತ್ರದಲ್ಲಿ ಹರ್ಷಾಲಿ ಅಭಿನಯ ಎಲ್ಲರ ಗಮನ ಸೆಳೆದಿತ್ತು. ಆ ಚಿತ್ರದ ನಟನೆಗಾಗಿ ಈಗ ‘ಭಾರತ ರತ್ನ ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ ಸಿಕ್ಕಿರುವುದು ಆಕೆಯ ಸಂಭ್ರಮಕ್ಕೆ ಕಾರಣ ಆಗಿದೆ. ಮಹಾರಾಷ್ಟ್ರ ರಾಜ್ಯಪಾಲರಾದ ಭಗತ್​ ಸಿಂಗ್​ ಕೋಶಿಯಾರಿ ಅವರಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಅಪ್​ಲೋಡ್​ ಮಾಡುವ ಮೂಲಕ ಅವಾರ್ಡ್​ ಪಡೆದ ಖುಷಿಯನ್ನು ಹರ್ಷಾಲಿ ಎಲ್ಲರ ಜೊತೆ ಹಂಚಿಕೊಂಡಿದ್ದಾಳೆ. ‘ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಸಲ್ಮಾನ್​ ಖಾನ್​, ಕಬೀರ್​ ಖಾನ್​, ಕಾಸ್ಟಿಂಗ್​​ ನಿರ್ದೇಶಕ ಮುಕೇಶ್​ ಛಾಬ್ರಾ ಅಂಕಲ್​ಹಾಗೂ ಇಡೀ ಬಜರಂಗಿ ಭಾಯಿಜಾನ್​ ತಂಡಕ್ಕೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ’ ಎಂದು ಹರ್ಷಾಲಿ ಬರೆದುಕೊಂಡಿದ್ದಾಳೆ. ಪ್ರಶಸ್ತಿ ಪಡೆದಿರುವ ಹರ್ಷಾಲಿಗೆ ಎಲ್ಲರೂ ಶುಭಕೋರುತ್ತಿದ್ದಾರೆ.

‘ಬಜರಂಗಿ ಭಾಯಿಜಾನ್​’ ಚಿತ್ರಕ್ಕೆ ಸೀಕ್ವೆಲ್​ ಸಿದ್ಧವಾಗಲಿದೆ ಎಂದು ಕೆಲವೇ ದಿನಗಳ ಹಿಂದೆ ಸಲ್ಮಾನ್​ ಖಾನ್​ ಘೋಷಿಸಿದ್ದರು. ಅದಕ್ಕೆ ‘ಪವನ ಪುತ್ರ ಭಾಯಿಜಾನ್​’ ಎಂದು ಶೀರ್ಷಿಕೆ ಇಡಲಾಗಿದೆ. ವಿಜಯೇಂದ್ರ ಪ್ರಸಾದ್​​ ಅವರು ಕಥೆ, ಚಿತ್ರಕಥೆ ಸಿದ್ಧಪಡಿಸಿದ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಸಲ್ಮಾನ್​ ಖಾನ್​ ಹುಟ್ಟುಹಬ್ಬದ ದಿನ ಈ ಸಿನಿಮಾ ಟೈಟಲ್​ ಬಹಿರಂಗ ಆಗಿತ್ತು. ‘ಪವನ ಪುತ್ರ ಭಾಯಿಜಾನ್​’ ಸಿನಿಮಾದ ಶೂಟಿಂಗ್​ ಆರಂಭ ಆಗಲು ಇನ್ನೂ ಸಾಕಷ್ಟು ಸಮಯ ಹಿಡಿಯಲಿದೆ.

ಇದನ್ನೂ ಓದಿ:

‘ಬಜರಂಗಿ ಭಾಯಿಜಾನ್ 2’ ಸಿನಿಮಾ ಘೋಷಣೆ ಮಾಡಿದ ಸಲ್ಮಾನ್​ ಖಾನ್​; ಈ ಬಾರಿ ರಾಜಮೌಳಿ ನಿರ್ದೇಶನ?

ರಾಜಮೌಳಿ ರಿಜೆಕ್ಟ್​ ಮಾಡಿದ್ದ ಸಲ್ಮಾನ್​ ಖಾನ್ ಸಿನಿಮಾ ಸೂಪರ್​ ಹಿಟ್​; ವಿಜಯೇಂದ್ರ ಪ್ರಸಾದ್​ ಪಶ್ಚಾತ್ತಾಪ

Click on your DTH Provider to Add TV9 Kannada