1947ರಲ್ಲಿ ಭಾರತಕ್ಕೆ ಲಭಿಸಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದ ಕಂಗನಾ ವಿರುದ್ಧ ತಿರುಗಿಬಿದ್ದ ಬಿಜೆಪಿ; ಪದ್ಮ ಪ್ರಶಸ್ತಿ ಹಿಂಪಡೆಯಲು ಆಗ್ರಹಿಸಿದ ಕಾಂಗ್ರೆಸ್

TV9 Digital Desk

| Edited By: shivaprasad.hs

Updated on:Nov 12, 2021 | 1:26 PM

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ ಸ್ವಾತಂತ್ರ್ಯದ ಕುರಿತ ಹೇಳಿಕೆಗೆ ಭಾರತೀಯ ಜನತಾ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ದೆಹಲಿ ಬಿಜೆಪಿಯ ವಕ್ತಾರರು ಕಂಗನಾ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಎಎಪಿ ಹಾಗೂ ಕಾಂಗ್ರೆಸ್ ಪಕ್ಷಗಳೂ ಕಂಗನಾ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಅವರಿಗೆ ನೀಡಿರುವ ಪದ್ಮ ಪ್ರಶಸ್ತಿ ಹಿಂಪಡೆಯಲು ಒತ್ತಾಯಿಸಿವೆ.

1947ರಲ್ಲಿ ಭಾರತಕ್ಕೆ ಲಭಿಸಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದ ಕಂಗನಾ ವಿರುದ್ಧ ತಿರುಗಿಬಿದ್ದ ಬಿಜೆಪಿ; ಪದ್ಮ ಪ್ರಶಸ್ತಿ ಹಿಂಪಡೆಯಲು ಆಗ್ರಹಿಸಿದ ಕಾಂಗ್ರೆಸ್
ಕಂಗನಾ ರಣಾವತ್
Follow us

ಬಾಲಿವುಡ್ ನಟಿ ಕಂಗನಾ ರಣಾವತ್ ನೀಡಿದ್ದ ಸ್ವಾತಂತ್ರ್ಯದ ಕುರಿತ ಹೇಳಿಕೆಗೆ ಬಿಜೆಪಿ ಕಟುವಾಗಿ ಪ್ರತಿಕ್ರಿಯಿಸಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಂಗನಾ, ‘‘ಭಾರತಕ್ಕೆ 1947ರಲ್ಲಿ ಸಿಕ್ಕಿದ್ದು ಭಿಕ್ಷೆ. ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ’’ ಎಂದಿದ್ದರು. ನರೇಂದ್ರ ಮೋದಿ ಸರ್ಕಾರ ಚುನಾಯಿತವಾಗಿ ಆಯ್ಕೆಯಾದ ವರ್ಷವನ್ನು ಉದ್ದೇಶಿಸಿ ಕಂಗನಾ ಈ ಹೇಳಿಕೆ ನೀಡಿದ್ದರು. ಇದು ದೇಶದಾದ್ಯಂತ ವಿವಾದದ ಕಿಡಿ ಹೊತ್ತಿಸಿದ್ದಲ್ಲದೇ, ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿ, ಇಂತಹ ಹೇಳಿಕೆಗಳು ದೇಶದ್ರೋಹವಲ್ಲವೇ? ಎಂದು ಪ್ರಶ್ನಿಸಿದ್ದರು. ಇದೀಗ ದೆಹಲಿಯ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಕಂಗನಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಕಂಗನಾ ಹೇಳಿಕೆಯನ್ನು ವಿರೋಧಿಸಿದ್ದಾರೆ. ಕಂಗನಾ ಅವರ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ದುರುಪಯೋಗ ಎಂದು ಅವರು ಹೇಳಿದ್ದಾರೆ.

ಟ್ವೀಟ್ ಮೂಲಕ ಪ್ರವೀಣ್ ಶಂಕರ್ ಕಪೂರ್ ಪ್ರತಿಕ್ರಿಯೆ ನೀಡಿದ್ದು, ‘‘ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ತಂದೆ ಹಾಗೂ ಕುಟುಂಬದ ಹಿನ್ನೆಲೆಯಿಂದ ಬಂದ ನನಗೆ, ಕಂಗನಾರ ಬ್ರಿಟೀಷರಿಂದ ಲಭಿಸಿದ ಸ್ವಾತಂತ್ರ್ಯ ಭಿಕ್ಷೆ ಎಂಬ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಬಹುದೊಡ್ಡ ದುರುಪಯೋಗವಾಗಿದೆ. ಅಲ್ಲದೇ ಇದು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಬಲಿದಾನಕ್ಕೆ ಮಾಡಿದ ಬಹುದೊಡ್ಡ ಅಪಮಾನ’ ಎಂದು ಟ್ವೀಟ್ ಮಾಡಿದ್ದಾರೆ.

ಪ್ರವೀಣ್ ಶಂಕರ್ ಕಪೂರ್ ಅವರ ಟ್ವೀಟ್ ಇಲ್ಲಿದೆ:

ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಕಂಗನಾ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದ್ದರು. ‘ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಕಂಗನಾ ತಿರಸ್ಕರಿಸಿದ್ದಾರೆ. ಈ ಆಲೋಚನೆಗೆ ಹುಚ್ಚುತನ‌ ಎಂದು ಕರೆಯಬೇಕೋ, ದೇಶದ್ರೋಹ ಎನ್ನಬೇಕೋ’ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸಂಸದ ವರುಣ್ ಗಾಂಧಿ ಹಂಚಿಕೊಂಡಿದ್ದ ಟ್ವೀಟ್ ಇಲ್ಲಿದೆ:

ಕಂಗನಾ ಹೇಳಿಕೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗುತ್ತಿದ್ದು, ರಾಜಕೀಯವಾಗಿಯೂ ಚರ್ಚೆಯಾಗುತ್ತಿದೆ. ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆಯಾದ ಪ್ರೀತಿ ಮೆನನ್ ಎನ್ನುವವರು ಮುಂಬೈ ಪೊಲೀಸರಿಗೆ ಕಂಗನಾ ಹೇಳಿಕೆ ವಿರುದ್ಧ ದೂರು ನೀಡಿದ್ದಾರೆ. ಇದಾಗ್ಯೂ ಕಂಗನಾ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿಲ್ಲ. ನಿನ್ನೆ ವರುಣ್ ಗಾಂಧಿ ಮಾತಿಗೆ ಅವರು ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡುತ್ತಾ, ‘ಸಂದರ್ಶನದಲ್ಲಿ ನಾನು 1857ರ ಸ್ವಾತಂತ್ರ್ಯ ಸಂಗ್ರಾಮ ಮೊದಲನೆಯ ಹೋರಾಟವಾಗಿದೆ ಎಂದು ತಿಳಿಸಿದ್ದೇನೆ. ಅದರಿಂದಾಗಿ ಬ್ರಿಟೀಷರ ದ್ವೇಷ ಹಾಗೂ ಕ್ರೂರತನ ಮತ್ತಷ್ಟು ಹೆಚ್ಚಾಯಿತು. ಸುಮಾರು ಒಂದು ಶತಮಾನದ ನಂತರ ಗಾಂಧೀಜಿಯವರ ಭಿಕ್ಷಾ ಪಾತ್ರೆಗೆ ಸ್ವಾತಂತ್ರ್ಯ ನೀಡಲಾಯಿತು’ ಎಂದು ಬರೆದಿದ್ದರು. ಅಲ್ಲದೇ ವರುಣ್ ಗಾಂಧಿಯವರನ್ನು ಉದ್ದೇಶಿಸಿ, ‘ಈಗ ಹೋಗಿ ಮತ್ತಷ್ಟು ದುಃಖಿಸಿ(ಅಳಿ)’ ಎಂದು ವ್ಯಂಗ್ಯವಾಡಿದ್ದರು.

ಕಂಗನಾಗೆ ನೀಡಿರುವ ಪದ್ಮ ಪ್ರಶಸ್ತಿ ಮರಳಿ ಪಡೆಯಿರಿ; ರಾಷ್ಟ್ರಪತಿಗೆ ಕೋರಿಕೊಂಡ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆನಂದ್ ಶರ್ಮಾ ಕಂಗನಾರ ಸ್ವಾತಂತ್ರ್ಯದ ಕುರಿತ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ನಾಯಕ, ರಾಜ್ಯಸಭಾ ಸದಸ್ಯ ಆನಂದ್ ಶರ್ಮಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಂಗನಾಗೆ ನೀಡಿರುವ ಪದ್ಮ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಪ್ರಶಸ್ತಿ ಪಡೆಯುವ ಮುನ್ನ ಮಾನಸಿಕತೆಯನ್ನು ಪರೀಕ್ಷಿಸಬೇಕು. ಪ್ರಶಸ್ತಿ ಪಡೆದವರು ದೇಶದ ನಾಯಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸಬಾರದು ಎಂದು ಮಾಜಿ ಕೇಂದ್ರ ಸಚಿವರೂ ಆಗಿದ್ದ ಆನಂದ್ ಶರ್ಮಾ ಟ್ವೀಟ್ ಮಾಡಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ:

Kangana Ranaut: 1947ರಲ್ಲಿ ಭಾರತಕ್ಕೆ ಸಿಕ್ಕಿದ್ದು ಭಿಕ್ಷೆ, ಸ್ವಾತಂತ್ರ್ಯ ಲಭಿಸಿದ್ದು 2014ರಲ್ಲಿ; ವಿವಾದ ಸೃಷ್ಟಿಸಿದ ಕಂಗನಾ ಹೇಳಿಕೆ

Alia Bhatt: ಕರಣ್​ ಜೋಹರ್​ ಕೇಳಿದ ಸಿಂಪಲ್​ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಆಲಿಯಾ ಭಟ್​; ಇಲ್ಲಿದೆ ವಿಡಿಯೋ

ತಾಜಾ ಸುದ್ದಿ

Related Stories

Click on your DTH Provider to Add TV9 Kannada