ಬೆಂಗಳೂರಿನಲ್ಲಿ ‘ದಿ ಕೇರಳ ಸ್ಟೋರಿ’ ವೀಕ್ಷಿಸಲಿರುವ ಬಿಜೆಪಿ ನಾಯಕರು
The Kerala Story: ಮಧ್ಯ ಪ್ರದೇಶ ಬಿಜೆಪಿ ಸರ್ಕಾರವು ದಿ ಕೇರಳ ಸ್ಟೋರಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ ಬೆನ್ನಲ್ಲೆ ಇದೀಗ ಕರ್ನಾಟಕ ಬಿಜೆಪಿ ನಾಯಕರು, ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಜೊತೆಗೆ ಬೆಂಗಳೂರಿನಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಲಿದ್ದಾರೆ.
ಪ್ರೊಪಾಗಾಂಡಾ ಸಿನಿಮಾ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಪಸರಿಸುವ ಸಿನಿಮಾ ಎಂದು ಕೆಲವರ ಆರೋಪಕ್ಕೆ ಗುರಿಯಾಗಿದ್ದ ‘ದಿ ಕಾಶ್ಮೀರ್ ಫೈಲ್ಸ್‘ (The Kashmir Files) ಸಿನಿಮಾ ಬಿಜೆಪಿಯ ಬೆಂಬಲದಿಂದ ದೊಡ್ಡ ಹಿಟ್ ಆಗಿತ್ತು. ಸ್ವತಃ ಪ್ರಧಾನಿ ಮೋದಿಯವರೇ ಈ ಸಿನಿಮಾವನ್ನು ಹೊಗಳಿ ಪರೋಕ್ಷ ಪ್ರಚಾರ ನೀಡಿದ್ದರು. ಹಲವು ಬಿಜೆಪಿ ಸಚಿವರು, ಸಂಸದ, ಶಾಸಕರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿದ್ದರು. ಇದೀಗ ಇದೇ ಮಾದರಿಯನ್ನು ಹೋಲುವ ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಬಿಡುಗಡೆ ಆಗಿದ್ದು, ಈ ಸಿನಿಮಾಕ್ಕೂ ಬಿಜೆಪಿಯ ಕೃಪಾಕಟಾಕ್ಷ ದೊರೆತಂತಿದೆ.
ಕೇರಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮತಾಂತರ ಹಾಗೂ ಯುವತಿಯರನ್ನು ಐಸಿಸ್ಗೆ ರವಾನಿಸಿರುವ ಕುರಿತಾದ ಕತೆಯನ್ನು ದಿ ಕೇರಳ ಸ್ಟೋರಿ ಒಳಗೊಂಡಿದೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾದರಿಯಲ್ಲಿಯೇ ಈ ಸಿನಿಮಾಕ್ಕೂ ಬಿಜೆಪಿಯ ಕೃಪಾಕಟಾಕ್ಷ ದೊರೆತಂತಿದ್ದು, ಈದಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಸಿನಿಮಾವನ್ನು ಹೊಗಳುವ ಮೂಲಕ ಪರೋಕ್ಷ ಪ್ರಚಾರ ನೀಡಿದ್ದಾರೆ. ಅದರ ಬೆನ್ನಲ್ಲೆ ಮಧ್ಯ ಪ್ರದೇಶದ ಬಿಜೆಪಿ ಸರ್ಕಾರವು ಸಿನಿಮಾಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿತ್ತು. ಇದೀಗ ಬಿಜೆಪಿ ರಾಷ್ಟ್ರ ಮತ್ತು ಕರ್ನಾಟಕ ರಾಜ್ಯ ಬಿಜೆಪಿ ನಾಯಕರು ಸಿನಿಮಾ ವೀಕ್ಷಿಸುವ ಮೂಲಕ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಲು ಮುಂದಾಗಿದ್ದಾರೆ.
ಇಂದು (ಮೇ 07) ರಾತ್ರಿ 8:30ಕ್ಕೆ ಬೆಂಗಳೂರಿನ ಗರುಡಾ ಮಾಲ್ನಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ಬಿಜೆಪಿ ನಾಯಕರು ವೀಕ್ಷಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್, ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಅಣ್ಣಾಮಲೈ ಮತ್ತು ಸಂಸದ ತೇಜಸ್ವಿ ಸೂರ್ಯ ಇನ್ನೂ ಕೆಲವು ನಾಯಕರು ಸಿನಿಮಾ ನೋಡಲಿದ್ದಾರೆ.
ಈ ಹಿಂದೆ ಇದೇ ಮಾದರಿಯ ಸಿನಿಮಾ ಆಗಿದ್ದ ‘ದಿ ಕಶ್ಮೀರ್ ಫೈಲ್ಸ್’ ಸಿನಿಮಾವನ್ನು ಸಹ ರಾಜ್ಯ ಹಾಗೂ ಬಿಜೆಪಿ ನಾಯಕರುಗಳು ವೀಕ್ಷಿಸಿ ಸಿನಿಮಾಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ದಿ ಕೇರಳ ಸ್ಟೋರಿ ಸಿನಿಮಾಕ್ಕೂ ಅದೇ ರೀತಿಯ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಘೋಷಿಸಲಾಗಿತ್ತು.
‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ಸುದಿಪ್ತೊ ಸೇನ್ ನಿರ್ದೇಶನ ಮಾಡಿದ್ದು ಅದಾ ಶರ್ಮಾ ಸೇರಿದಂತೆ ಇನ್ನೂ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವು ಕೇರಳದಲ್ಲಿ ನಡೆದಿದೆ ಎನ್ನಲಾಗಿರುವ ಮತಾಂತರದ ಕುರಿತಾಗಿ ಇದೆ. ಸಿನಿಮಾಕ್ಕೆ ಕೇರಳ ಆಡಳಿತ ಸರ್ಕಾರ ಹಾಗೂ ಕೆಲ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸಿನಿಮಾ ಬಿಡುಗಡೆ ತಡೆಯಲು ಕಾನೂನಾತ್ಮಕ ಹೋರಾಟ ನಡೆಸಿದ್ದವಾದರೂ ಅದ್ಯಾವುದೂ ಸಫಲವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ