The Kerala Story: 2ನೇ ದಿನ ‘ದಿ ಕೇರಳ ಸ್ಟೋರಿ’ ಸಿನಿಮಾಗೆ 12 ಕೋಟಿ ರೂಪಾಯಿ ಕಲೆಕ್ಷನ್; ಇನ್ನೂ ಹೆಚ್ಚಾಗಲಿದೆ ಕಮಾಯಿ
The Kerala Story Box Office Collection: ಅದಾ ಶರ್ಮಾ ಮುಖ್ಯ ಭೂಮಿಕೆ ನಿಭಾಯಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ವಿವಾದಾತ್ಮಕ ಕಥಾಹಂದರ ಇದೆ. ಮತಾಂತರದ ಕುರಿತು ಈ ಚಿತ್ರದಲ್ಲಿ ತೋರಿಸಲಾಗಿದೆ.
ಮೇ 5ರಂದು ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ಹಲವು ಕಾರಣಗಳಿಗಾಗಿ ಈ ಸಿನಿಮಾ ಚರ್ಚೆ ಹುಟ್ಟುಹಾಕಿದೆ. ಅದೇ ರೀತಿ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಮೊದಲ ದಿನ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ 8 ಕೋಟಿ ರೂಪಾಯಿ ಕಲೆಕ್ಷನ್ (Box Office Collection) ಆಗಿತ್ತು. ಎರಡನೇ ದಿನ ಕಲೆಕ್ಷನ್ನಲ್ಲಿ ಗಣನೀಯ ಏರಿಕೆ ಕಂಡಿದೆ. ಇದರಿಂದ ನಿರ್ಮಾಪಕರಿಗೆ ಬಹಳ ಖುಷಿ ಆಗಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚುತ್ತಿರುವುದರಿಂದ ಅಂತಿಮವಾಗಿ ಈ ಚಿತ್ರದ ಗಳಿಕೆ ಎಷ್ಟಾಗಲಿದೆ ಎಂಬ ಕೌತುಕ ಮೂಡಿದೆ. ಎರಡನೇ ದಿನವಾದ ಶನಿವಾರ (ಮೇ 6) ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 12 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ, ಚಿತ್ರದ ಒಟ್ಟು ಕಲೆಕ್ಷನ್ (The Kerala Story Collection) 20 ಕೋಟಿ ರೂಪಾಯಿ ಆಗಿದೆ ಎಂದು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಅದಾ ಶರ್ಮಾ ಮುಖ್ಯ ಭೂಮಿಕೆ ನಿಭಾಯಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ವಿವಾದಾತ್ಮಕ ಕಥಾಹಂದರ ಇದೆ. ಐಸಿಎಸ್ ಭಯೋತ್ಪಾಕದ ಸಂಘಟನೆಗಳ ಸಂಚಿನಿಂದ ಕೇರಳದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರ ಮತಾಂತರ ಮಾಡಲಾಗುತ್ತಿದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ‘ದಿ ಕೇರಳ ಸ್ಟೋರಿ’ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದದ ಚರ್ಚೆ ಜೋರಾಗಿದೆ.
At the All-India Box office, #TheKeralaStory has seen a growth of 50% on Day 2 compared to Day 1..
Day 1 Nett – ₹ 8 Crs
Day 2 Nett – ₹ 12 Crs
Total – ₹ 20 Crs
— Ramesh Bala (@rameshlaus) May 7, 2023
ನಟಿ ಅದಾ ಶರ್ಮಾ ಅವರು ಈವರೆಗೆ ಕಲರ್ಫುಲ್ ಆದಂತಹ ಪಾತ್ರಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಅವರು ಒಂದು ಭಿನ್ನವಾದ ಪಾತ್ರ ಮಾಡಿದ್ದಾರೆ. ಆ ಮೂಲಕ ಸುದ್ದಿ ಆಗುತ್ತಿದ್ದಾರೆ. ಶಾಲಿನಿ ಉನ್ನಿಕೃಷ್ಣನ್ ಅಲಿಯಾಸ್ ಫಾತಿಮಾ ಎಂಬ ಪಾತ್ರದಲ್ಲಿ ಅದಾ ಶರ್ಮಾ ಅವರು ನಟಿಸಿದ್ದಾರೆ. ಹಲವು ಶೇಡ್ಗಳನ್ನು ಹೊಂದಿರುವ ಈ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ನೋಡುಗರಿಂದ ಅವರಿಗೆ ಮೆಚ್ಚುಗೆ ಸಿಕ್ಕಿದೆ.
ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ತೋರಿಸಿರೋದು ನಿಜವೋ ಸುಳ್ಳೋ? ಟ್ವಿಟರ್ನಲ್ಲಿ ಜೋರಾಗಿದೆ ಚರ್ಚೆ
ಸುದೀಪ್ತೋ ಸೇನ್ ಅವರು ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಬಿಡುಗಡೆ ಆಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರದಲ್ಲಿನ ಕೆಲವು ದೃಶ್ಯಗಳು ವಿವಾದಕ್ಕೆ ಕಾರಣ ಆಗಿವೆ. ವಿಮರ್ಶಕರ ವಲಯದಲ್ಲಿ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಡುಗಡೆಗೂ ಮುನ್ನವೇ ‘ದಿ ಕೇರಳ ಸ್ಟೋರಿ’ ಸಿನಿಮಾ ವಿವಾದಕ್ಕೆ ಕಾರಣ ಆಗಿತ್ತು. ‘ಕೇವಲ ಟ್ರೇಲರ್ ನೋಡಿ ಮಾತನಾಡುವುದು ಸರಿಯಲ್ಲ, ಪೂರ್ತಿ ಸಿನಿಮಾ ನೋಡಿದ ಬಳಿಕ ಅಭಿಪ್ರಾಯ ತಿಳಿಸಿ’ ಎಂದು ಅದಾ ಶರ್ಮಾ ಹೇಳಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.