AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಬೆ ಕೋರ್ಟ್ ಆದೇಶದಿಂದ ಕಂಗನಾ ನಿರಾಳ: ‘ಎಮರ್ಜೆನ್ಸಿ’ಗೆ ಬಿಡುಗಡೆ ಭಾಗ್ಯ?

‘ಎಮರ್ಜೆನ್ಸಿ’ ಸಿನಿಮಾದ ಬಿಡುಗಡೆ ಬಗ್ಗೆ ಚಿಂಚಿತರಾಗಿದ್ದ ಕಂಗನಾ ರನೌತ್​, ಕೊನೆಗೂ ಬಾಂಬೆ ಹೈಕೋರ್ಟ್​ ಆದೇಶದಿಂದ ನಿರಾಳರಾಗಿದ್ದಾರೆ. ಸಿನಿಮಾಕ್ಕೆ ಪ್ರಮಾಣ ಪತ್ರ ನೀಡುವ ಬಗ್ಗೆ ವಾರದ ಒಳಗಾಗಿ ತೀರ್ಮಾನ ತೆಗೆದುಕೊಳ್ಳುವಂತೆ ಸಿಬಿಎಫ್​ಸಿಗೆ ಕೋರ್ಟ್ ಸೂಚಿಸಿದೆ.

ಬಾಂಬೆ ಕೋರ್ಟ್ ಆದೇಶದಿಂದ ಕಂಗನಾ ನಿರಾಳ: ‘ಎಮರ್ಜೆನ್ಸಿ’ಗೆ ಬಿಡುಗಡೆ ಭಾಗ್ಯ?
ಕಂಗನಾ ರನೌತ್
ಮಂಜುನಾಥ ಸಿ.
|

Updated on: Sep 19, 2024 | 3:09 PM

Share

ನಟಿ, ಸಂಸದೆ ಕಂಗನಾ ರನೌತ್ ತಾವೇ ನಟಿಸಿ, ನಿರ್ದೇಶನ ಮಾಡಿ, ನಿರ್ಮಾಣವೂ ಮಾಡಿರುವ ಸಿನಿಮಾದ ಬಿಡುಗಡೆಗೆ ಇನ್ನಿಲ್ಲದ ಕಷ್ಟಪಡುತ್ತಿದ್ದಾರೆ. ‘ಎಮರ್ಜೆನ್ಸಿ’ ಸಿನಿಮಾವನ್ನು ಕಂಗನಾ ನಿರ್ದೇಶನ ಮಾಡಿದ್ದು, ಈ ಸಿನಿಮಾ ಇಂದಿರಾ ಗಾಂಧಿ ಜೀವನ ಆಧರಿಸಿದ ಕತೆ ಹೊಂದಿದೆ. ಕೆಲ ವರ್ಷಗಳ ಹಿಂದೆಯೇ ಈ ಸಿನಿಮಾ ಆರಂಭಸಿದ್ದರು ಕಂಗನಾ, ನಡುವಲ್ಲಿ ಬಿಜೆಪಿ ಟಿಕೆಟ್ ಸಿಕ್ಕು ಚುನಾವಣೆ ಸ್ಪರ್ಧಿಸಿದ್ದ ಕಾರಣ ಬಿಡುಗಡೆ ತಡ ಮಾಡಿದ್ದರು. ಆದರೆ ಈಗ ಬಿಡುಗಡೆ ಮಾಡುವ ಸಮಯ ಬಂದಾಗ ಸಿಬಿಎಫ್​ಸಿ, ಕಂಗನಾರ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿತು. ಇದನ್ನು ಪ್ರಶ್ನಿಸಿ ನಟಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಕೊನೆಗೂ ನ್ಯಾಯಾಲಯ ಸಿಬಿಎಫ್​ಸಿಗೆ ಸೂಚನೆ ನೀಡಿದ್ದು, ಕಂಗನಾರ ಸಿನಿಮಾಕ್ಕೆ ಬಿಡುಗಡೆ ಭಾಗ್ಯ ದೊರಕುವ ಸಾಧ್ಯತೆ ಇದೆ.

ತಮ್ಮ ಸಿನಿಮಾಕ್ಕೆ ಪ್ರಮಾಣ ಪತ್ರ ನೀಡಲು ಸಿಬಿಎಫ್​ಸಿ ವಿಳಂಬ ಮಾಡುತ್ತಿದ್ದು, ನ್ಯಾಯಾಲಯವು ಸಿಬಿಎಫ್​ಸಿಗೆ ಸೂಚನೆ ನೀಡಬೇಕೆಂದು ನಟಿ ಕಂಗನಾ ರನೌತ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಎರಡು ವಾರದ ಹಿಂದೆ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ಈಗಾಗಲೇ ಮಧ್ಯಪ್ರದೇಶ ಹೈಕೋರ್ಟ್, ಸಿಬಿಎಫ್​ಸಿಗೆ ಇದೇ ವಿಚಾರವಾಗಿ ಒಂದು ಸೂಚನೆ ನೀಡಿದೆ ಹಾಗಾಗಿ ಈ ಹಂತದಲ್ಲಿ ನಾವು (ಬಾಂಬೆ ಹೈಕೋರ್ಟ್) ಸಿಬಿಎಫ್​ಸಿಗೆ ಸೂಚನೆ ನೀಡಲಾಗದು ಎಂದಿತ್ತು.

ಆದರೆ ಇಂದು ನಡೆದ ವಿಚಾರಣೆಯಲ್ಲಿ, ಬಾಂಬೆ ಹೈಕೋರ್ಟ್​, ‘ಎಮರ್ಜೆನ್ಸಿ’ ಸಿನಿಮಾ ಕುರಿತಂತೆ ಸಿಬಿಎಫ್​ಸಿಗೆ ಸೂಚನೆ ನೀಡಿದೆ. ಸಿನಿಮಾದ ಪ್ರಮಾಣ ಪತ್ರ ವಿತರಣೆ ಕುರಿತಾಗಿ ಇದೇ ತಿಂಗಳ ಅಂದರೆ ಸೆಪ್ಟೆಂಬರ್ 25ರ ಒಳಗೆ ನಿರ್ಣಯ ತೆಗೆದುಕೊಳ್ಳುವಂತೆ ಸೂಚಿಸಿದೆ. ಅಲ್ಲದೆ, ‘ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯ ಆತಂಕವಿದೆ ಎಂಬ ಕಾರಣಕ್ಕಾಗಿ ಸೃಜನಾತ್ಮಕ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುವುದಿಲ್ಲ, ಕಾನೂನು ಸುವ್ಯವಸ್ಥೆ ಕಾರಣ ನೀಡಿ ಸೆನ್ಸಾರ್ ಮಂಡಳಿಯು ಚಲನಚಿತ್ರವನ್ನು ಪ್ರಮಾಣೀಕರಿಸಲು ನಿರಾಕರಿಸುವಂತಿಲ್ಲ’ ಎಂದಿದೆ.

ಇದನ್ನೂ ಓದಿ:ಕಂಗನಾ ರನೌತ್ ಆಸ್ತಿ ವಿವರ ಬಹಿರಂಗ, ನಟಿಯ ಬಳಿ ಇರುವ ಚಿನ್ನ ಎಷ್ಟು ಕೆಜಿ?

‘ಸಿಬಿಎಫ್‌ಸಿ ಯಾವುದಾದರೂ ಒಂದು ನಿರ್ಣಯವನ್ನು ತೆಗೆದುಕೊಳ್ಳಲೇ ಬೇಕು. ಈ ಸಿನಿಮಾವನ್ನು (ಎಮರ್ಜೆನ್ಸಿ) ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಧೈರ್ಯ ನಿಮಗೆ ಇರಬೇಕು. ಆಗ ಕನಿಷ್ಠ ಪಕ್ಷ ನಿಮ್ಮ ಧೈರ್ಯ ಮತ್ತು ಧೈರ್ಯವನ್ನು ನಾವು ಪ್ರಶಂಸಿಸುತ್ತೇವೆ. ಸಿಬಿಎಫ್​ಸಿ, ಹೀಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ವರ್ತಿಸಬಾರದು’ ಎಂದು ತುಸು ಖಾರವಾಗಿಯೇ ಬಾಂಬೆ ಹೈಕೋರ್ಟ್ ಹೇಳಿದೆ.

‘ಎಮರ್ಜೆನ್ಸಿ’ ಸಿನಿಮಾದಲ್ಲಿ ಕಂಗನಾ ರನೌತ್ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದು, ಸಿನಿಮಾವನ್ನು ರಾಜಕೀಯ ದುರುದ್ದೇಶದಿಂದಲೇ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೆಲವು ಪಾತ್ರಗಳನ್ನು ಉದ್ದೇಶಪೂರ್ವಕವಾಗಿ ತಿರುಚಿ, ‘ವಿಲನ್’ ರೀತಿ ತೋರಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ಜೊತೆಗೆ ಈ ಸಿನಿಮಾಕ್ಕೆ ಸಿಖ್ ಸಮುದಾಯದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಿನಿಮಾದಲ್ಲಿ ಪಂಜಾಬಿಗಳನ್ನು ಆತಂಕವಾದಿಗಳು ಎಂಬಂತೆ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದಾರೆ. ಕೆಲವೆಡೆ ಈಗಾಗಲೇ ಸಿನಿಮಾದ ವಿರುದ್ಧ ಪ್ರತಿಭಟನೆಗಳು ಸಹ ನಡೆದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ