ಸಿನಿಮಾಕ್ಕೆ ಪ್ರಮಾಣ ಪತ್ರ: ಸೆನ್ಸಾರ್ ಬೋರ್ಡ್ನಿಂದ ಕೆಲ ಪ್ರಮುಖ ಬದಲಾವಣೆ
Censor Board: ಕಳೆದ ನಾಲ್ಕು ದಶಕಗಳಿಂದಲೂ ಸಾರ್ವಜನಿಕವಾಗಿ ವೀಕ್ಷಣೆಗೆ ಲಭ್ಯವಿರುವ ಸಿನಿಮಾಗಳನ್ನು ಎ, ಯುಎ, ಮತ್ತು ಯು ಎಂದಷ್ಟೆ ವರ್ಗೀಕರಣ ಮಾಡಲಾಗುತ್ತಿತ್ತು. ಆದರೆ ಈಗ ಸಿಬಿಎಫ್ಸಿ ಇದಕ್ಕೆ ಮೂರು ಹೆಚ್ಚುವರಿ ವರ್ಗೀಕರಣಗಳನ್ನು ಸೇರಿಸಿದೆ.
ಸಾರ್ವಜನಿಕ ಪ್ರದರ್ಶನಕ್ಕಾಗಿ ನಿರ್ಮಾಣವಾಗುವ ಪ್ರತಿ ಸಿನಿಮಾಗಳಿಗೂ ಸಿಬಿಎಫ್ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಟ್) ಪ್ರಮಾಣ ಪತ್ರ ನೀಡುತ್ತದೆ. ಈ ಕಾರ್ಯವನ್ನು ಸೆನ್ಸಾರ್ ಬೋರ್ಡ್ ಎಂದೂ ಕರೆಯಲಾಗುವ ಸಿಬಿಎಫ್ಸಿ ನಾಲ್ಕು ದಶಕದಿಂದಲೂ ಮಾಡುತ್ತಾ ಬಂದಿದೆ. (1983ಕ್ಕೆ ಮುಂಚೆ ಸಿಬಿಎಫ್ಸಿಗೆ ಬೇರೆ ಹೆಸರಿತ್ತು) ನಾಲ್ಕು ದಶಕದಿಂದಲೂ ಬಹುತೇಕ ಒಂದೇ ರೀತಿಯ ನಿಯಮಗಳನ್ನು ಪಾಲಿಸುತ್ತಾ ಒಂದೇ ರೀತಿಯ ಸಿನಿಮಾ ಸರ್ಟಿಫಿಕೇಟ್ಗಳನ್ನು ನೀಡುತ್ತಾ ಬಂದಿದೆ ಸಿಬಿಎಫ್ಸಿ. ಆದರೆ ಈಗ ಪ್ರಮಾಣ ಪತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ವಿಶೇಷವಾಗಿ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗುತ್ತಿದೆ.
ಇಷ್ಟು ವರ್ಷಗಳ ಕಾಲ ಭಾರತದಲ್ಲಿ ಎ, ಯು, ಯುಎ ಮತ್ತು ಎಸ್ ಎಂಬ ನಾಲ್ಕೇ ವಿಧದಲ್ಲಿ ಸಿನಿಮಾಗಳನ್ನು ವರ್ಗೀಕರಿಸಲಾಗುತ್ತು. ಅಸಲಿಗೆ ಎಸ್ ವಿಧದ ಪ್ರಮಾಣ ಪತ್ರ ನೀಡಲಾಗುವ ಸಿನಿಮಾಗಳನ್ನು ಸಾರ್ವಜನಿಕರು ವೀಕ್ಷಿಸುವಂತಿಲ್ಲ ಹಾಗಾಗಿ ಅದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಸಾರ್ವಜನಿಕವಾಗಿ ವೀಕ್ಷಣೆಗೊಳ್ಳುವ ಸಿನಿಮಾಗಳಿಗೆ ಯು, ಎ, ಯುಎ ಮೂರು ವಿಧದ ವರ್ಗೀಕರಣ ಮಾಡಿ, ಸಿನಿಮಾವನ್ನು ಯಾರು ನೋಡಬಹುದು, ಯಾರು ನೋಡಬಾರದು ಎಂದು ವರ್ಗೀಕರಿಸಲಾಗುತ್ತಿತ್ತು. ಆದರೆ ಹೊಸ ನಿಯಮದಂತೆ ಈ ವರ್ಗೀಕರಣವನ್ನು ಇನ್ನಷ್ಟು ವಿಸ್ತಾರ ಮಾಡಲಾಗಿದೆ.
ಯುಎ ವರ್ಗೀಕರಣಕ್ಕೆ ಕೆಲವು ಹೆಚ್ಚುವರಿ ಉಪ ವರ್ಗೀಕರಣವನ್ನು ಸೇರಿಸಲಾಗಿದೆ. ಯುಎ ಎಂದರೆ ಎಲ್ಲರೂ ನೋಡಬಹುದಾದ ಆದರೆ ಮಕ್ಕಳು, ಪೋಷಕರ ನಿಗಾವಣೆಯಲ್ಲಿ ನೋಡಬಹುದಾದ ಸಿನಿಮಾ ಎಂಬ ಅರ್ಥವಿದೆ. ಈಗ ಈ ಯುಎ ಪ್ರಮಾಣ ಪತ್ರದಲ್ಲಿ ಮೂರು ಹೊಸ ಉಪವರ್ಗೀಕರಣ ಮಾಡಲಾಗಿದ್ದು, ಯುಎ7+, ಯುಎ13+, ಯುಎ16+ ಅನ್ನು ಸೇರಿಸಲಾಗಿದೆ. ಯುಎ7+ ಎಂದರೆ, ಎಲ್ಲರೂ ನೋಡಬಹುದಾದ ಆದರೆ ಏಳರ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಫೋಷಕರ ನಿಗಾವಣೆಯಲ್ಲಿ ಮಾತ್ರ ನೋಡಬೇಕಾದ ಸಿನಿಮಾ ಎಂದರ್ಥ. ಯುಎ13+ ಎಂದರೆ ಎಲ್ಲರೂ ನೋಡಬಹುದಾದ ಆದರೆ ಹದಿಮೂರರ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಕ್ಕಳು ಫೋಷಕರ ನಿಗಾವಣೆಯಲ್ಲಿ ಮಾತ್ರ ನೋಡಬೇಕಾದ ಸಿನಿಮಾ ಇದಾಗಿರಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಇನ್ನು ಯು ಎಂದರೆ ಯಾರು ಬೇಕಾದರೂ ಯಾರ ನಿಗಾವಣೆಯೂ ಇಲ್ಲದೆ ನೋಡಬಹುದಾದ ಸಿನಿಮಾ ಆಗಿರುತ್ತದೆ. ಇನ್ನು ಎ ಎಂದರೆ 18 ವಯಸ್ಸು ಮೀರಿದವರು ಮಾತ್ರವೇ ನೋಡಬೇಕಾದ ಸಿನಿಮಾ ಅದಾಗಿರುತ್ತದೆ.
ಇದನ್ನೂ ಓದಿ:ಸಿನಿಮಾ ಪ್ರಮಾಣ ಪತ್ರಕ್ಕೆ 6.50 ಲಕ್ಷ: ಸಾಕ್ಷಿ ಸಮೇತ ಸಿಬಿಎಫ್ಸಿ ಅಧಿಕಾರಿಗಳ ವಿರುದ್ಧ ವಿಶಾಲ್ ಆರೋಪ
ಈಗ ಪ್ರಮಾಣ ಪತ್ರಕ್ಕೆ ಮಾಡಿರುವ ಬದಲಾವಣೆಯಿಂದ ಸಿನಿಮಾಗಳನ್ನು ಅವುಗಳ ಗುಣಗಳಿಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಇದರಿಂದ ಮಕ್ಕಳನ್ನು ಸಿನಿಮಾಗಳಿಗೆ ಕರೆದುಕೊಂಡು ಹೋಗುವ ಪೋಷಕರಿಗೆ ಹೆಚ್ಚು ಸಹಾಯ ಆಗಲಿದೆ. ಕೆಲವು ಸಿನಿಮಾಗಳಲ್ಲಿ ಹಿಂಸೆಯನ್ನು ರೂಪಕಗಳಲ್ಲಿ ಬಳಸಿ ತೋರಿಸಲಾಗಿರುತ್ತದೆ. ಆದರೂ ಅದು ಮಕ್ಕಳು ನೋಡಬಾರದ್ದು ಎಂಬ ಕಾರಣಕ್ಕೆ ಎ ಪ್ರಮಾಣ ಪತ್ರ ನೀಡಬೇಕಾದ ಅನಿವಾರ್ಯತೆ ಸಿಬಿಎಫ್ಸಿ ಸದಸ್ಯರಿಗೆ ಇರುತ್ತದೆ. ಈಗ ಹೆಚ್ಚು ವರ್ಗೀಕರಣಗಳು ಇರುವ ಕಾರಣ ಸೂಕ್ತ ಪ್ರಮಾಣ ಪತ್ರವನ್ನು ಸಿನಿಮಾಕ್ಕೆ ನೀಡಬಹುದಾಗಿದೆ ಎಂಬುದು ಸಿಬಿಎಫ್ಸಿಯ ಅಭಿಪ್ರಾಯ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ