‘ಉರಿ’ ಸಿನಿಮಾದ ಕಲೆಕ್ಷನ್ ಹಿಂದಿಕ್ಕಿದ ‘ಛಾವ’: ಹೆಚ್ಚಿತು ವಿಕ್ಕಿ ಕೌಶಲ್ ಚಾರ್ಮ್
ಕೇವಲ 8 ದಿನಕ್ಕೆ ‘ಛಾವ’ ಸಿನಿಮಾದ ಕಲೆಕ್ಷನ್ 250 ಕೋಟಿ ರೂಪಾಯಿ ಗಡಿ ಸಮೀಪಿಸಿದೆ. ಛತ್ರಪತಿ ಶಂಭಾಜಿ ಮಹಾರಾಜ್ ಪಾತ್ರ ಮಾಡಿರುವ ನಟ ವಿಕ್ಕಿ ಕೌಶಲ್ ಅವರಿಗೆ ಈ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಿದೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಉತ್ತಮವಾಗಿ ಪ್ರದರ್ಶನವಾಗುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ‘ಉರಿ’ ಸಿನಿಮಾವನ್ನು ‘ಛಾವ’ ಮೀರಿಸಿದೆ.

ಇದುವರೆಗೂ ನಟ ವಿಕ್ಕಿ ಕೌಶಲ್ ನಟನೆಯ ಸಿನಿಮಾಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಖ್ಯಾತಿ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾಗಿತ್ತು. ಆದರೆ ಈಗ ಆ ಖ್ಯಾತಿಯನ್ನು ‘ಛಾವ’ ಸಿನಿಮಾ ತನ್ನದಾಗಿಸಿಕೊಂಡಿದೆ. ಹೌದು, ‘ಉರಿ’ ಚಿತ್ರಕ್ಕಿತಲೂ ಹೆಚ್ಚು ಗಳಿಕೆಯನ್ನು ‘ಛಾವ’ ಸಿನಿಮಾ ಮಾಡಿದೆ. ಆ ಮೂಲಕ ವಿಕ್ಕಿ ಕೌಶಲ್ ಅವರ ಡಿಮ್ಯಾಂಡ್ ಹೆಚ್ಚುವಂತಾಗಿದೆ. ಇಂದಿಗೂ ಹಲವು ಕಡೆಗಳಲ್ಲಿ ಈ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ಹೆಚ್ಚುತ್ತಲೇ ಇದೆ.
2019ರ ಜನವರಿಯಲ್ಲಿ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಭಾರತದ ಬಾಕ್ಸ್ ಆಫೀಸ್ನಲ್ಲಿ ಆ ಸಿನಿಮಾದ ಲೈಫ್ಟೈಮ್ ಗಳಿಕೆ 245.36 ಕೋಟಿ ರೂಪಾಯಿ ಆಗಿತ್ತು. ಒಟ್ಟು 11 ವಾರಗಳ ಕಾಲ ಪ್ರದರ್ಶನ ಕಂಡ ಆ ಸಿನಿಮಾ ಅಷ್ಟು ಹಣವನ್ನು ಗಳಿಸಿತ್ತು. ಆದರೆ ಆ ಮೊತ್ತವನ್ನು ಕೇವಲ 8 ದಿನದಲ್ಲಿ ಹಿಂದಿಕ್ಕಿದೆ ‘ಛಾವ’ ಸಿನಿಮಾ!
ಈ ವರ್ಷ ಫೆಬ್ರವರಿ 14ರಂದು ಬಿಡುಗಡೆ ಆದ ‘ಛಾವ’ ಸಿನಿಮಾ 8 ದಿನಗಳಲ್ಲಿ ಬರೋಬ್ಬರಿ 249.31 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿದೇಶದ ಗಳಿಕೆ ಸೇರಿದರೆ 310 ಕೋಟಿ ರೂಪಾಯಿಗೂ ಅಧಿಕ ಆಗಲಿದೆ. ಇನ್ನು, ಶನಿವಾರ (ಫೆ.22) ಹಾಗೂ ಭಾನುವಾರ (ಫೆ.23) ಸಿಕ್ಕಾಪಟ್ಟೆ ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ. ಸದ್ಯಕ್ಕಂತೂ ‘ಛಾವ’ ಸಿನಿಮಾದ ನಾಗಾಲೋಟ ಮುಂದುವರಿದಿದೆ.
ಇದನ್ನೂ ಓದಿ: ‘ಛಾವಾ’ ಸಿನಿಮಾ ನೋಡಿ ವಿಕ್ಕಿ ಕೌಶಲ್ ದೃಷ್ಟಿ ತೆಗೆದ ಆಶಾ ಆಯಿ
ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ‘ಛಾವ’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಎಲ್ಲರ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಅನೇಕ ಪ್ರೇಕ್ಷಕರು ಭಾವುಕರಾಗಿ ಪ್ರತಿಕ್ರಿಯಿಸುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ. ಐತಿಹಾಸಿಕ ಕಥಾಹಂದರ ಈ ಸಿನಿಮಾದಲ್ಲಿ ಇದೆ. ಛತ್ರಪತಿ ಶಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ.
ಲಕ್ಷ್ಮಣ್ ಉಟಕೇರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಆ ಹಿನ್ನೆಲೆಯಲ್ಲಿ ಜನರಿಗೆ ಇನ್ನಷ್ಟು ಆಸಕ್ತಿ ಮೂಡಿದೆ. ಅಂತಿಮವಾಗಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು. ಮರಾಠಿಗರ ಕಥೆ ಆದ್ದರಿಂದ ಮಹಾರಾಷ್ಟ್ರದಲ್ಲಿ ಈ ಸಿನಿಮಾ ಬಹಳ ಚೆನ್ನಾಗಿ ಪ್ರದರ್ಶನವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.