ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?

ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅವರು ‘ರಾಮಾಯಣ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾಗೆ ಕ್ರಿಸ್ಟೋಫರ್ ನೋಲನ್ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಅದು ನಿಜವೇ ಹೌದಾಗಿದ್ದರೆ ಈ ಸಿನಿಮಾಗೆ ಜಾಗತಿಕ ಮಟ್ಟದಲ್ಲಿ ಹೈಪ್ ಹೆಚ್ಚಾಗುವುದು ಗ್ಯಾರಂಟಿ.

ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?
Ramayana Poster, Christopher Nolan

Updated on: Mar 03, 2026 | 9:16 PM

ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಎನಿಸಿಕೊಂಡಿರುವ ‘ರಾಮಾಯಣ’ (Ramayana) ಚಿತ್ರದ ಬಗ್ಗೆ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಯಾಗುತ್ತಿದೆ. ನಿತೇಶ್ ತಿವಾರಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಯಶ್ (Yash), ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರನ್ನು ಒಳಗೊಂಡ ಬೃಹತ್ ತಾರಾಗಣ ಮತ್ತು ಮೇಕಿಂಗ್‌ನಿಂದ ಸುದ್ದಿಯಾಗಿದ್ದ ಈ ಸಿನಿಮಾಗೆ ಈಗ ಹಾಲಿವುಡ್‌ನ ದಿಗ್ಗಜ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರ ಹೆಸರು ತಳುಕು ಹಾಕಿಕೊಂಡಿದೆ. ನೋಲನ್ ಅವರಿಗೂ ‘ರಾಮಾಯಣ’ ಚಿತ್ರತಂಡಕ್ಕೂ ಏನು ಸಂಬಂಧ? ಇಲ್ಲಿದೆ ಉತ್ತರ..

ವರದಿಗಳ ಪ್ರಕಾರ, ಆಸ್ಕರ್ ವಿಜೇತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಮತ್ತು ಅವರ ಆಪ್ತ ಛಾಯಾಗ್ರಾಹಕ, ಅಕಾಡೆಮಿ ಪ್ರಶಸ್ತಿ ವಿಜೇತ ಹೊಯ್ತೆ ವಾನ್ ಹೊಯ್ತೆಮಾ (Hoyte van Hoytema) ಅವರು ‘ರಾಮಾಯಣ’ ಚಿತ್ರದ ಫೈನಲ್ ಕಟ್ ವೀಕ್ಷಿಸಲಿದ್ದಾರೆ ಎನ್ನಲಾಗುತ್ತಿದೆ. ಇವರು ಚಿತ್ರಕ್ಕೆ ಅಧಿಕೃತವಾಗಿ ಕೆಲಸ ಮಾಡದಿದ್ದರೂ, ಚಿತ್ರದ ತಾಂತ್ರಿಕ ಗುಣಮಟ್ಟ ಮತ್ತು ದೃಶ್ಯ ವೈಭವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡಲಿದ್ದಾರೆ ಎಂಬ ಗುಸುಗುಸು ಹಬ್ಬಿದೆ.

ಈ ಸಂಪರ್ಕ ಸಾಧ್ಯವಾಗಿದ್ದು ಹೇಗೆ?

ಈ ಸುದ್ದಿಗೆ ಪುಷ್ಟಿ ನೀಡುವಂತೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಹೆಸರು ಕೇಳಿಬರುತ್ತಿದೆ. ನಮಿತ್ ಅವರ ಒಡೆತನದ ವಿಶ್ವವಿಖ್ಯಾತ VFX ಸಂಸ್ಥೆ DNEG, ಕ್ರಿಸ್ಟೋಫರ್ ನೋಲನ್ ಅವರ ‘ಇನ್ಸೆಪ್ಷನ್’, ‘ಟೆನೆಟ್’, ‘ಆಪೆನ್‌ಹೈಮರ್’ ಚಿತ್ರಗಳಿಗೆ ಕೆಲಸ ಮಾಡಿದೆ. ಈ ಹಳೆಯ ಬಾಂಧವ್ಯದ ಹಿನ್ನೆಲೆಯಲ್ಲಿ ನೋಲನ್ ಅವರು ‘ರಾಮಾಯಣ’ ಚಿತ್ರಕ್ಕೆ ಬೆಂಬಲ ನೀಡಲು ಒಪ್ಪಿರಬಹುದು ಎಂದು ಹೇಳಲಾಗುತ್ತಿದೆ.

‘ರಾಮಾಯಣ ಕೇವಲ ಭಾರತೀಯ ಸಿನಿಮಾವಾಗದೆ, ಜಾಗತಿಕ ಮಟ್ಟದ ಅದ್ಭುತವಾಗಿ ಹೊರಹೊಮ್ಮಬೇಕು ಎಂಬುದು ಚಿತ್ರತಂಡದ ಗುರಿ. ಇದಕ್ಕಾಗಿ ದೃಶ್ಯ ಕಾವ್ಯದ ಮಾಂತ್ರಿಕ ನೋಲನ್ ಅವರ ಮಾರ್ಗದರ್ಶನ ಪಡೆಯಲು ತಯಾರಿ ನಡೆದಿದೆ’ ಎಂದು ಮೂಲಗಳು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಮೊದಲ ಹಾಡಿನಿಂದ ಯಶ್ ಅಭಿಮಾನಿಗಳಿಗೆ ನಿರಾಸೆ: ಕಾರಣ ಏನು?

ಒಂದು ಕಡೆ ನೋಲನ್ ಅವರ ಆಗಮನದ ಸುದ್ದಿ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಅವರು ತಮ್ಮದೇ ಆದ ‘ದಿ ಒಡಿಸ್ಸಿ’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದು 2026ರ ಜುಲೈನಲ್ಲಿ ಬಿಡುಗಡೆಯಾಗಲಿದ್ದು, ನೋಲನ್ ಅವರ ಸಂಪೂರ್ಣ ಗಮನ ಅಲ್ಲಿಯೇ ಇರಲಿದೆ. ಹಾಗಾಗಿ, ‘ರಾಮಾಯಣ’ ಚಿತ್ರಕ್ಕೆ ಅವರು ಎಷ್ಟು ಸಮಯ ಮೀಸಲಿಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us