Aamir Khan: ಇಂಡಿಯನ್ ಆರ್ಮಿಗೆ ಆಮಿರ್ ಖಾನ್ ಅವಮಾನ? ‘ಲಾಲ್ ಸಿಂಗ್ ಚಡ್ಡಾ’ ವಿರುದ್ಧ ದೂರು ದಾಖಲು
Laal Singh Chaddha Controversy: ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಒಂದು ದೃಶ್ಯದಲ್ಲಿ ಆಮಿರ್ ಖಾನ್ ಅವರು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ದೃಶ್ಯವೇ ಈಗ ವಿವಾದದ ಕೇಂದ್ರಬಿಂದು ಆಗಿದೆ.
ನಟ ಆಮಿರ್ ಖಾನ್ (Aamir Khan) ಅವರು ಅನೇಕ ರೀತಿಯಿಂದ ಜನರ ವಿರೋಧಕ್ಕೆ ಕಾರಣ ಆಗಿದ್ದಾರೆ. ಅವರು ಇಡುವ ಪ್ರತಿ ಹೆಜ್ಜೆ ಕೂಡ ಟೀಕೆಗೆ ಒಳಗಾಗುತ್ತಿದೆ. ಅವರು ನಟಿಸಿರುವ ‘ಲಾಲ್ ಸಿಂಗ್ ಚಡ್ಡಾ’ (Laal Singh Chaddha) ಸಿನಿಮಾ ಆಗಸ್ಟ್ 11ರಂದು ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಚಿತ್ರದಲ್ಲಿನ ಒಂದಷ್ಟು ದೃಶ್ಯಗಳು ಜನರ ಕೆಂಗಣ್ಣಿಗೆ ಗುರಿಯಾಗಿವೆ. ಬಿಡುಗಡೆಗೂ ಮುನ್ನ ಬಹಿಷ್ಕಾರದ ಬಿಸಿ ಅನುಭವಿಸಿದ್ದ ಈ ಚಿತ್ರ ಈಗ ಇನ್ನಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ. ಭಾರತೀಯ ಸೇನೆಗೆ (Indian Army) ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಅಲ್ಲದೇ, ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಉಂಟಾಗುತ್ತಿದೆ.
‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಒಂದು ದೃಶ್ಯದಲ್ಲಿ ಆಮಿರ್ ಖಾನ್ ಅವರು ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನಸಿಕವಾಗಿ ಸಮರ್ಥವಲ್ಲದ ವ್ಯಕ್ತಿಯ ಪಾತ್ರ ಇದಾಗಿದ್ದು, ಅಂಥ ವ್ಯಕ್ತಿಗೆ ಭಾರತೀಯ ಸೇನೆಯಲ್ಲಿ ಕೆಲಸ ಸಿಗುತ್ತದೆಯೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಈ ರೀತಿಯ ವ್ಯಕ್ತಿ ಹೋರಾಡಿದ್ದ ಎಂಬ ರೀತಿಯಲ್ಲಿ ತೋರಿಸಲಾಗಿದೆ. ಇದರಿಂದ ಭಾರತೀಯ ಸೇನೆಗೆ ಅವಮಾನ ಆಗಿದೆ ಎಂದು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ಅವರು ‘ಲಾಲ್ ಸಿಂಗ್ ಚಡ್ಡಾ’ ಚಿತ್ರತಂಡದ ವಿರುದ್ಧ ದೂರು ನೀಡಿದ್ದಾರೆ. ನಟ ಆಮಿರ್ ಖಾನ್, ನಿರ್ದೇಶಕ ಅದ್ವೈತ್ ಚಂದನ್ ಹಾಗೂ ನಿರ್ಮಾಣ ಸಂಸ್ಥೆಯಾದ ‘ಪ್ಯಾರಮೌಂಟ್ ಪಿಕ್ಚರ್ಸ್’ ವಿರುದ್ಧ ದೂರು ನೀಡಲಾಗಿದೆ. ‘ಕಾರ್ಗಿಲ್ ಯುದ್ಧಕ್ಕಾಗಿ ಅತ್ಯುತ್ತಮ ಮತ್ತು ಸಮರ್ಥ ಸೈನಿಕರನ್ನು ಕಳಿಸಲಾಗಿತ್ತು. ಆದರೆ ಈ ಚಿತ್ರದಲ್ಲಿ ಮಾನಸಿಕ ಸ್ತಿಮಿತ ಇಲ್ಲದ ವ್ಯಕ್ತಿಯನ್ನು ಸೈನಿಕನ ಪಾತ್ರದಲ್ಲಿ ತೋರಿಸಲಾಗಿದೆ. ಇದರಿಂದ ಭಾರತೀಯ ಸೇನೆಯನ್ನು ಅವಮಾನಿಸಿದಂತೆ ಆಗಿದೆ’ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಜೋಡಿಯಾಗಿ ನಟಿಸಿದ್ದಾರೆ. ನಾಗ ಚೈತನ್ಯ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಮೊದಲ ದಿನ 11.70 ಕೋಟಿ ರೂಪಾಯಿ ಗಳಿಸುವಲ್ಲಿ ಈ ಚಿತ್ರ ಯಶಸ್ವಿ ಆಗಿತ್ತು. ಆದರೆ ಎರಡನೇ ದಿನ ಇದರ ಕಲೆಕ್ಷನ್ ಗಣನೀಯವಾಗಿ ಕುಸಿದಿದೆ. ಶುಕ್ರವಾರ (ಆಗಸ್ಟ್ 12) ಕೇವಲ 7.26 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Sat, 13 August 22