Salman Khan: ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ನೋಡಿ ಸಿಟ್ಟು ಮಾಡಿಕೊಂಡ ದಗ್ಗುಬಾಟಿ ವೆಂಕಟೇಶ್ ಅಭಿಮಾನಿಗಳು
Daggubati Venkatesh: ಟಾಲಿವುಡ್ನಲ್ಲಿ ಸಖತ್ ಖ್ಯಾತಿ ಇರುವಂತಹ ಕಲಾವಿದ ವೆಂಕಟೇಶ್ ಅವರನ್ನು ಬಾಲಿವುಡ್ ಚಿತ್ರದಲ್ಲಿ ಈ ರೀತಿಯಾಗಿ ತೋರಿಸಿರುವುದು ಸರಿಯಲ್ಲ ಎಂಬ ಚರ್ಚೆ ಅಭಿಮಾನಿಗಳ ವಲಯದಲ್ಲಿ ನಡೆಯುತ್ತಿದೆ.
2023ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಚಿತ್ರ ಏಪ್ರಿಲ್ 21ರಂದು ತೆರೆಕಂಡಿತು. ಅಭಿಮಾನಿಗಳು ನಿರೀಕ್ಷಿಸಿದ ರೀತಿಯಲ್ಲಿ ಈ ಸಿನಿಮಾ ಮೂಡಿಬಂದಿಲ್ಲ. ಆದ್ದರಿಂದ ಪ್ರೇಕ್ಷಕರ ವಲಯದಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಲ್ಮಾನ್ ಖಾನ್ (Salman Khan) ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಮೊದಲ ದಿನ ಸಾಧಾರಣ ಕಲೆಕ್ಷನ್ ಮಾಡಿದ್ದ ಈ ಚಿತ್ರ ನಂತರದ ದಿನಗಳಲ್ಲಿ ಸುಧಾರಣೆ ಕಂಡಿದೆ. ಇದೆಲ್ಲದರ ನಡುವೆ ಟಾಲಿವುಡ್ ನಟ ದಗ್ಗುಬಾಟಿ ವೆಂಕಟೇಶ್ (Daggubati Venkatesh) ಅವರ ಅಭಿಮಾನಿಗಳಿಗೆ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಇಷ್ಟ ಆಗಿಲ್ಲ. ವೆಂಕಟೇಶ್ ಅವರ ಪಾತ್ರಕ್ಕೆ ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲ ಎಂಬುದೇ ಇದಕ್ಕೆ ಕಾರಣ. ಹಾಗಾಗಿ ಕೆಲವರು ಸಲ್ಮಾನ್ ಖಾನ್ ವಿರುದ್ಧ ಗರಂ ಆಗಿದ್ದಾರೆ.
ಸ್ಟಾರ್ ಕಲಾವಿದರು ಬೇರೆ ಭಾಷೆಯ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದಾಗ ಸೂಕ್ತ ಸ್ಕ್ರೀನ್ ಸ್ಪೇಸ್ ಸಿಗಬೇಕು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಾರೆ. ಅಲ್ಲದೇ, ಆ ಪಾತ್ರಕ್ಕೆ ಮಹತ್ವ ಇರಬೇಕು ಎಂದು ಕೂಡ ಫ್ಯಾನ್ಸ್ ಬಯಸುತ್ತಾರೆ. ಆದರೆ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದಲ್ಲಿ ದಗ್ಗುಬಾಟಿ ವೆಂಕಟೇಶ್ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್ ಸಿಕ್ಕಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Kisi Ka Bhai Kisi Ki Jaan: ‘ವಯಸ್ಸಾದವರ ಮೇಲೆ ಸಲ್ಮಾನ್ ಖಾನ್ ಕೈ ಎತ್ತಲ್ಲ’: ಜಗಪತಿ ಬಾಬು
ಬಹುತೇಕ ದೃಶ್ಯಗಳಲ್ಲಿ ದಗ್ಗುಬಾಟಿ ವೆಂಕಟೇಶ್ ಅವರ ಬದಲಿಗೆ ಸಲ್ಮಾನ್ ಖಾನ್ ಅವರೇ ಅಬ್ಬರಿಸಿದ್ದಾರೆ. ಕ್ಲೈಮ್ಯಾಕ್ಸ್ನಲ್ಲಿ ಸಲ್ಮಾನ್ ಖಾನ್ ಒಬ್ಬರೇ ಎಲ್ಲ ವಿಲನ್ಗಳನ್ನು ಸೆದೆಬಡಿಯುತ್ತಾರೆ. ಟಾಲಿವುಡ್ನಲ್ಲಿ ಸ್ಟಾರ್ಡಮ್ ಇರುವಂತಹ ಕಲಾವಿದ ವೆಂಕಟೇಶ್ ಅವರನ್ನು ಬಾಲಿವುಡ್ ಸಿನಿಮಾದಲ್ಲಿ ಈ ರೀತಿಯಾಗಿ ತೋರಿಸಿರುವುದು ಸರಿಯಲ್ಲ ಎಂಬ ಚರ್ಚೆ ಅಭಿಮಾನಿಗಳ ವಲಯದಲ್ಲಿ ನಡೆಯುತ್ತಿದೆ.
ಇದನ್ನೂ ಓದಿ: Salman Khan: ಒಂದು ದಿನದ ಮಟ್ಟಿಗೆ ತಮ್ಮ ಪ್ರೀತಿಯ ವಸ್ತುವನ್ನು ಆಮಿರ್ ಖಾನ್ಗೆ ನೀಡಿದ ಸಲ್ಮಾನ್ ಖಾನ್
ಈದ್ ಸಂದರ್ಭದಲ್ಲಿ ಸಲ್ಮಾನ್ ಖಾನ್ ಚಿತ್ರಗಳು ರಿಲೀಸ್ ಆಗುವುದು ವಾಡಿಕೆ. ಅದೇ ರೀತಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಂಜಾನ್ ಸಂದರ್ಭದಲ್ಲಿ (ಏಪ್ರಿಲ್ 21) ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ 15 ಕೋಟಿ ರೂಪಾಯಿ ಗಳಿಕೆ ಮಾಡಿತು. ಸಾಮಾನ್ಯವಾಗಿ ಸಲ್ಮಾನ್ ಖಾನ್ ಚಿತ್ರದ ಮೊದಲ ದಿನದ ಗಳಿಕೆ 25 ಕೋಟಿ ರೂಪಾಯಿ ಮೇಲಿರುತ್ತಿತ್ತು. ಹೀಗಾಗಿ, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಗಳಿಕೆಯನ್ನು ಸಾಧಾರಣ ಗಳಿಕೆ ಎಂದು ಬಾಕ್ಸ್ ಆಫೀಸ್ ಪಂಡಿತರು ಕರೆದರು.
ಶನಿವಾರ (ಏಪ್ರಿಲ್ 23) ಈ ಚಿತ್ರ 25.75 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಿದೆ. ಈ ಸಿನಿಮಾ ಭಾನುವಾರ 26.61 ಕೋಟಿ ರೂಪಾಯಿ ಹಾಗೂ ಸೋಮವಾರ 10.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 78.34 ಕೋಟಿ ರೂಪಾಯಿ ದಾಟಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:24 pm, Tue, 25 April 23