AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್​​ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ನಟಿ ಝೈರಾ ವಾಸಿಂ​; ‘ದಂಗಲ್​’ ಬೆಡಗಿಯ ನಿಲುವು ಏನು?

ಅನೇಕ ಸೆಲೆಬ್ರಿಟಿಗಳು ಹಿಜಾಬ್​ ವಿವಾದದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದೇ ರೀತಿ ‘ದಂಗಲ್​’ ಖ್ಯಾತಿಯ ನಟಿ ಝೈರಾ ವಾಸಿಂ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಹಿಜಾಬ್​​ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ನಟಿ ಝೈರಾ ವಾಸಿಂ​; ‘ದಂಗಲ್​’ ಬೆಡಗಿಯ ನಿಲುವು ಏನು?
ಝೈರಾ ವಾಸಿಂ
TV9 Web
| Updated By: ಮದನ್​ ಕುಮಾರ್​|

Updated on: Feb 20, 2022 | 1:45 PM

Share

ಕರ್ನಾಟಕದಲ್ಲಿ ಹುಟ್ಟಿಕೊಂಡ ಹಿಜಾಬ್​ ವಿವಾದ (Karnataka Hijab Row) ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗಿದೆ. ಭಾರತದ ಹಲವು ಸೆಲೆಬ್ರಿಟಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಹಿಜಾಬ್​ ಪರವಾಗಿ ಮಾತನಾಡಿದ್ದರೆ, ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಉಡುಪುಗಳನ್ನು ಧರಿಸುವುದು ಸರಿಯಲ್ಲ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ಮಾಜಿ ನಟಿ ಝೈರಾ ವಾಸಿಂ (Zaira Wasim)​ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರು ಈ ಬಗ್ಗೆ ದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ. ಆಮಿರ್​ ಖಾನ್​ ನಟನೆಯ ‘ದಂಗಲ್​’ (Dangal Movie) ಸಿನಿಮಾದಲ್ಲಿ ಝೈರಾ ವಾಸಿಂ​ ಅಭಿನಯಿಸಿದ್ದರು. ಆ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತ್ತು. ನಂತರ ‘ಸೀಕ್ರೆಟ್​ ಸೂಪರ್​ ಸ್ಟಾರ್​’ ಸಿನಿಮಾದಲ್ಲಿ ನಟಿಸಿ ಭೇಷ್​ ಎನಿಸಿಕೊಂಡಿದ್ದರು. ಆದರೆ 18ನೇ ವಯಸ್ಸಿಗೆ ಅವರು ಚಿತ್ರರಂಗಕ್ಕೆ ಗುಡ್​ಬೈ ಹೇಳಿದರು! ಇಸ್ಲಾಂ ಧರ್ಮಕ್ಕೆ ಸೇರಿದ ಅವರು ತಮ್ಮದೇ ಕೆಲವು ಸಿದ್ಧಾಂತದ ಕಾರಣದಿಂದ ಈ ನಿರ್ಧಾರ ತೆಗೆದುಕೊಂಡರು. ಸಿನಿಮಾದಲ್ಲಿ ನಟಿಸುವುದು ತಮ್ಮ ಧರ್ಮದ ನಂಬಿಕೆಗಳಿಗೆ ಸೂಕ್ತವಲ್ಲ ಎಂಬ ಕಾರಣ ನೀಡಿ ಅವರು ಬಣ್ಣದ ಲೋಕದಿಂದ ದೂರ ಸರಿದರು. ಈಗ ಹಿಜಾಬ್​ ಬಗ್ಗೆ ಅಭಿಪ್ರಾಯ ಹಂಚಿಕೊಂಡು ಮತ್ತೆ ಸುದ್ದಿ ಆಗಿದ್ದಾರೆ.

‘ಹಿಜಾಬ್​ ಒಂದು ಸಾಂಪ್ರದಾಯಿಕ ಆಯ್ಕೆ ಎಂದು ತಪ್ಪು ತಿಳಿವಳಿಕೆ ಮೂಡಿಸಲಾಗಿದೆ. ಅಜ್ಞಾನದಿಂದ ಅಥವಾ ತಮ್ಮ ಅನುಕೂಲಕ್ಕಾಗಿ ಈ ರೀತಿ ಮಾಡಲಾಗಿದೆ. ಹಿಜಾಬ್​ ಒಂದು ಆಯ್ಕೆ ಅಲ್ಲ, ಅದು ಇಸ್ಲಾಂ ಧರ್ಮದ ಕಟ್ಟುಪಾಡು. ಹಿಜಾಬ್​ ಧರಿಸಿದ ಮಹಿಳೆಯು ತನ್ನನ್ನು ತಾನು ಒಪ್ಪಿಸಿಕೊಂಡ ದೇವರಿಂದ ವಿಧಿಸಲ್ಪಟ್ಟ ಈ ಕಟ್ಟುಪಾಡನ್ನು ಪೂರೈಸುತ್ತಾಳೆ. ನಾನು ಕೂಡ ಕೃತಜ್ಞತೆ ಮತ್ತು ನಮೃತೆಯಿಂದ ಹಿಜಾಬ್​ ಧರಿಸುತ್ತೇನೆ. ಹಿಜಾಬ್​ ಧರಿಸಿದ ಕಾರಣಕ್ಕಾಗಿ ಮಹಿಳೆಯರನ್ನು ತಡೆದು ನಿಲ್ಲಿಸಿ, ಕಿರುಕುಳ ನೀಡುವ ಈ ವ್ಯವಸ್ಥೆಯನ್ನು ನಾನು ವಿರೋಧಿಸುತ್ತೇನೆ’ ಎಂದು ಝೈರಾ ವಾಸಿಂ ಬರೆದುಕೊಂಡಿದ್ದಾರೆ.

‘ಹಿಜಾಬ್​ ಅಥವಾ ಶಿಕ್ಷಣವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಮುಸ್ಲಿಂ ಮಹಿಳೆಯರ ವಿರುದ್ಧ ಪಕ್ಷಪಾತ ಮಾಡುತ್ತಿರುವುದು ಅನ್ಯಾಯ. ನಿಮ್ಮ ಅಜೆಂಡಾ ಈಡೇರುವ ರೀತಿಯಲ್ಲೇ ಆಯ್ಕೆ ಮಾಡಿಕೊಳ್ಳಬೇಕು ಎಂಬಂತೆ ಮುಸ್ಲಿಂ ಮಹಿಳೆಯರನ್ನು ನೀವು ಒತ್ತಾಯಿಸುತ್ತಿದ್ದೀರಿ. ವಿಭಿನ್ನವಾಗಿ ಆಯ್ಕೆ ಮಾಡುವಂತೆ ಅವರನ್ನು ಪ್ರೋತ್ಸಾಹಿಸಲು ಬೇರೆ ಆಯ್ಕೆಗಳಿಲ್ಲ’ ಎಂದು ಝೈರಾ ವಾಸಿಂ​ ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ ಖ್ಯಾತ ನಟ ಕಮಲ್​ ಹಾಸನ್​ ಅವರು ಕರ್ನಾಟಕದ ಹಿಜಾಬ್​ ವಿವಾದ ಬಗ್ಗೆ ಟ್ವೀಟ್​ ಮಾಡಿದ್ದರು. ‘ಕರ್ನಾಟಕದಲ್ಲಿ ನಡೆಯುತ್ತಿರುವ ಘಟನೆಗಳು ಶಾಂತಿ ಕಡದಲು ಪ್ರಚೋದಿಸುತ್ತಿವೆ. ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣವಾಗುತ್ತಿದೆ. ಪಕ್ಕದ ರಾಜ್ಯದಲ್ಲಿ ನಡೆಯುತ್ತಿರುವುದು ತಮಿಳುನಾಡಿಗೆ ಬರಬಾರದು. ಪ್ರಗತಿಪರ ಶಕ್ತಿಗಳು ಹೆಚ್ಚು ಎಚ್ಚರಿಕೆಯಿಂದ ಇರಬೇಕಾದ ಸಮಯವಿದು’ ಎಂದು ಕಮಲ್​ ಹಾಸನ್​ ಪೋಸ್ಟ್​ ಮಾಡಿದ್ದರು.

ಅದೇ ರೀತಿ ನಟಿ ರಮ್ಯಾ ಕೂಡ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಹಿಜಾಬ್​ ಧರಿಸಿದ ವಿದ್ಯಾರ್ಥಿನಿಯರು ಮತ್ತು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪರಸ್ಪರ ಕಾದಾಡುತ್ತಿರುವ ವಿಡಿಯೋವನ್ನು ರಮ್ಯಾ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ಭಾರತದ ಯುವಜನತೆ ಈ ರೀತಿ ಎರಡು ಭಾಗವಾಗಿರುವುದನ್ನು ನೋಡಲು ದುಃಖವಾಗುತ್ತದೆ’ ಎಂದು ರಮ್ಯಾ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:

ಬಳ್ಳಾರಿಯಲ್ಲಿಲ್ಲ ಹಿಜಾಬ್​​, ಕೇಸರಿ ಶಾಲು ವಿವಾದ; ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದ ವಿದ್ಯಾರ್ಥಿಗಳು

ಹಿಜಾಬ್​ ಇಸ್ಲಾಂನಲ್ಲಿ ಅತ್ಯಂತ ಮುಖ್ಯವೆಂದು ಕುರಾನ್​ ಹೇಳಿಲ್ಲ, ಸುಮ್ಮನೆ ಹೋಗಿ ವಿದ್ಯೆ ಕಲಿಯಿರಿ: ಕೇರಳ ರಾಜ್ಯಪಾಲ ಆರಿಫ್​ ಮೊಹಮ್ಮದ್ ಖಾನ್