ಐದು ವರ್ಷದ ಹಿಂದಿನ ಪ್ರಕರಣದಲ್ಲಿ ತಪ್ಪು ಸಾಬೀತಾದರೆ ಶಾರುಖ್ಗೆ ಆಗಲಿದೆ ಶಿಕ್ಷೆ; ದಂಡದ ಮೊತ್ತ ಎಷ್ಟು?
2017ರ ಜನವರಿ 25ರಂದು ಶಾರುಖ್ ಖಾನ್ ನಟನೆಯ ‘ರಯೀಸ್’ ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾ ಮಕಾಡೆ ಮಲಗಿತ್ತು. ಈ ಚಿತ್ರಕ್ಕೆ ಶಾರುಖ್ ಖಾನ್ ಅವರು ದೊಡ್ಡ ಮಟ್ಟದಲ್ಲೇ ಪ್ರಚಾರ ನೀಡಿದ್ದರು.
ಶಾರುಖ್ ಖಾನ್ (Shah Rukh Khan) ಅವರು ಬಾಲಿವುಡ್ನಲ್ಲಿ ತುಂಬಾನೇ ಫೇಮಸ್. ಅವರು ವಿವಾದದಿಂದ ಆದಷ್ಟು ದೂರ ಇರೋಕೆ ಪ್ರಯತ್ನಿಸುತ್ತಾರೆ. ಆದಾಗ್ಯೂ ಕೆಲವೊಮ್ಮೆ ವಿವಾದಗಳೇ (Controversy) ಅವರನ್ನು ಹುಡುಕಿಕೊಂಡು ಬರುತ್ತವೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅವರು ಮಾಡುವ ಸಣ್ಣ ತಪ್ಪು ದೊಡ್ಡದಾಗಿ ಕಾಣುತ್ತದೆ. ಇದಕ್ಕೆ ಕೇಸ್ಗಳು ಬಿದ್ದ ಉದಾಹರಣೆಯೂ ಇದೆ. ಅದೇ ರೀತಿ ಐದು ವರ್ಷದ ಹಿಂದಿನ ಪ್ರಕರಣವೊಂದರ ವಿಚಾರಣೆ ಈಗ ಆರಂಭಗೊಂಡಿದೆ. ಈ ಪ್ರಕರಣದಲ್ಲಿ ತಪ್ಪು ಸಾಬೀತಾದರೆ ಅವರಿಗೆ ಸಣ್ಣ ಪ್ರಮಾಣದ ಶಿಕ್ಷೆ ಆಗಲಿದೆ. ಇಲ್ಲದಿದ್ದರೆ ಅವರು 250 ರೂಪಾಯಿ ದಂಡ ಕಟ್ಟಬೇಕಾಗಿ ಬರಹುದು! ಹಾಗಾದರೆ, ಏನಿದು ಪ್ರಕರಣ? ಆ ಪ್ರಶ್ನೆಗೆ ಉತ್ತರ ಪಡೆಯಲು ಈ ಸ್ಟೋರಿ ಓದಿ.
2017ರ ಜನವರಿ 25ರಂದು ಶಾರುಖ್ ಖಾನ್ ನಟನೆಯ ‘ರಯೀಸ್’ ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾ ಮಕಾಡೆ ಮಲಗಿತ್ತು. ವಿಮರ್ಶಕರಿಂದ ನೆಗೆಟಿವ್ ವಿಮರ್ಶೆ ಬಂದಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸ್ನಲ್ಲೂ ಸೊರಗಿತ್ತು. ಈ ಚಿತ್ರಕ್ಕೆ ಶಾರುಖ್ ಖಾನ್ ಅವರು ದೊಡ್ಡ ಮಟ್ಟದಲ್ಲೇ ಪ್ರಚಾರ ನೀಡಿದ್ದರು. ಈ ಚಿತ್ರದ ಪ್ರಮೋಷನ್ಗಾಗಿ ಜನವರಿ 23ರಂದು ಅವರು ಟ್ರೇನ್ನಲ್ಲಿ ತೆರಳಿದ್ದರು. ಗುಜರಾತ್ನ ಬರೋಡಾ ರೈಲ್ವೆ ನಿಲ್ದಾಣದ ಮೂಲಕ ಅವರು ಸಂಚರಿಸುತ್ತಿದ್ದ ರೈಲು ಹಾದು ಹೋಗಿತ್ತು. ಶಾರುಖ್ ಅವರನ್ನು ನೋಡಲು ರೈಲ್ವೆ ನಿಲ್ದಾಣದಲ್ಲಿ ಸಾಕಷ್ಟು ಜನರು ನೆರೆದಿದ್ದರು.
ಶಾರುಖ್ ಖಾನ್ ಅವರು ಬರೋಡಾ ರೈಲ್ವೆ ನಿಲ್ದಾಣದಲ್ಲಿ ತಮ್ಮ ಶರ್ಟ್ಅನ್ನು ತೆಗೆದು ಅಭಿಮಾನಿಗಳತ್ತ ಎಸೆದಿದ್ದರು. ನೆಚ್ಚಿನ ನಟ ಎಸೆದ ಶರ್ಟ್ಅನ್ನು ಬಾಚಿಕೊಳ್ಳಲು ಅಭಿಮಾನಿಗಳು ಮುತ್ತಿಕೊಂಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿತ್ತು. ಓರ್ವ ವ್ಯಕ್ತಿ ಮೃತಪಟ್ಟರೆ, ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಗಾಯಗೊಂಡಿದ್ದರು. ಈ ಕಾಲ್ತುಳಿತಕ್ಕೆ ಶಾರುಖ್ ಅವರೇ ಕಾರಣ ಎಂದು ಆರೋಪಿಸಿ ದೂರು ನೀಡಲಾಗಿತ್ತು. ಶಾರುಖ್ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಪ್ರಕರಣ ಈಗ ಗುಜರಾತ್ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದಿದೆ.
ಶಾರುಖ್ ಪರ ವಾದ ಮಂಡಿಸಿದ ವಕೀಲ ಮಿಹಿರ್ ಠಾಕ್ರೆ, ‘ಶಾರುಖ್ ಖಾನ್ ರೈಲ್ವೆ ನಿಲ್ದಾಣದಲ್ಲಿ ಇಳಿದುಕೊಂಡಿಲ್ಲ. ಅವರು ರೈಲಿನಿಂದಲೇ ಕೈ ಬೀಸಿ, ಶರ್ಟ್ ಎಸೆದಿದ್ದಾರೆ. ಈ ವೇಳೆ ಮೃತಪಟ್ಟ ವ್ಯಕ್ತಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅದರಿಂದಲೇ ಅವರು ಮೃತಪಟ್ಟ ಬಗ್ಗೆ ಕುಟುಂಬವೂ ಒಪ್ಪಿಕೊಂಡಿದೆ’ ಎಂದರು.
ಐಪಿಸಿ ಸೆಕ್ಷನ್ 336 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಾರುಖ್ ತಪ್ಪು ಸಾಬೀತಾದರೆ ಕೋರ್ಟ್ 3 ತಿಂಗಳು ಶಿಕ್ಷೆ ಅಥವಾ 250 ರೂಪಾಯಿ ದಂಡ ವಿಧಿಸಬಹುದು. ಎರಡನ್ನೂ ವಿಧಿಸುವ ಅವಕಾಶ ಕೋರ್ಟ್ಗೆ ಇದೆ. ಆದರೆ, ಪ್ರಕರಣವನ್ನು ಹೆಚ್ಚು ಎಳೆಯದೇ, ನಟ ಶಾರುಖ್ ಕ್ಷಮೆ ಕೇಳಲಿ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ವಿಚಾರಣೆ ಫೆಬ್ರವರಿ 24ಕ್ಕೆ ಮುಂದೂಡಲ್ಪಟ್ಟಿದೆ.
ಇದನ್ನೂ ಓದಿ: 80 ಕೋಟಿ ರೂಪಾಯಿಗೆ ಸೇಲ್ ಆದ ಶಾರುಖ್ ಖಾನ್ ಮತ್ತು ಆಲಿಯಾ ಭಟ್ ಹೊಸ ಚಿತ್ರ
ಬೆಂಗಳೂರಿನಲ್ಲಿ ಕಾಣಿಸಿಕೊಂಡ ಆರ್ಯನ್ ಖಾನ್; ಮಗನ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿದ ಶಾರುಖ್?