
ಬಾಲಿವುಡ್‌ನ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ದಂಪತಿ ಇತ್ತೀಚೆಗಷ್ಟೇ ತಾವು ಎರಡನೇ ಬಾರಿಗೆ ಪೋಷಕರಾಗುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದರು. ತಮ್ಮ ಮೊದಲ ಮಗಳು ದುವಾ ಅವಳೊಂದಿಗೆ ಇರುವ ಮುದ್ದಾದ ಪೋಸ್ಟ್ ಮೂಲಕ ಈ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಈ ಸಂಭ್ರಮದ ನಡುವೆಯೂ ದೀಪಿಕಾ ವಿಶ್ರಾಂತಿ ಪಡೆಯದೇ, ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಶಾರುಖ್ ಖಾನ್ ಜೊತೆ ‘ಕಿಂಗ್’ ಸಿನಿಮಾದ (King Movie) ಚಿತ್ರೀಕರಣದಲ್ಲಿ ದೀಪಿಕಾ ಪಡುಕೋಣೆ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಏಪ್ರಿಲ್ 19ರಂದು ಎರಡನೇ ಪ್ರೆಗ್ನೆನ್ಸಿಯ ಸುದ್ದಿಯನ್ನು ಘೋಷಿಸಿದ ಬೆನ್ನಲ್ಲೇ, ದೀಪಿಕಾ ಪಡುಕೋಣೆ ಏಪ್ರಿಲ್ 21ರಂದು ‘ಕಿಂಗ್’ ಸಿನಿಮಾದ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಮುಂಬೈನ ವಿಲೆ ಪಾರ್ಲೆಯ ಗೋಲ್ಡನ್ ಟೊಬ್ಯಾಕೋ ಸ್ಟುಡಿಯೋದಲ್ಲಿ ನಿರ್ಮಿಸಲಾದ ವಿಶೇಷ ಸೆಟ್‌ನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ನಡುವಿನ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
ವಿಶೇಷವೆಂದರೆ, ಈ ಹಂತದಲ್ಲಿ ದೀಪಿಕಾ ಪಡುಕೋಣೆ ಅವರು ಭರ್ಜರಿ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಭಾಗಿಯಾಗಿದ್ದಾರೆ. ಬಿಳಿ ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ ಅವರು, ಸುಮಾರು ಎಂಟು ಮಂದಿ ಫೈಟರ್‌ಗಳ ಜೊತೆ ಫೈಟ್ ಮಾಡುವ ದೃಶ್ಯದಲ್ಲಿ ನಟಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಸುದ್ದಿ ತಿಳಿದ ಬಳಿಕ ಅವರ ಅಭಿಮಾನಿಗಳಿಗೆ ‘ಕಿಂಗ್’ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ ಆಗಿದೆ.
‘ಪಠಾಣ್’ ಖ್ಯಾತಿಯ ಸಿದ್ಧಾರ್ಥ್ ಆನಂದ್ ಅವರು ‘ಕಿಂಗ್’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಡಂಕಿ’ ಬಳಿಕ ಇದು ಶಾರುಖ್ ಖಾನ್ ಅವರ ಕಮ್ಬ್ಯಾಕ್ ಸಿನಿಮಾ ಆಗಿದ್ದು, ಬಹಳ ಅದ್ಧೂರಿಯಾಗಿ ಮೂಡಿಬರುತ್ತಿದೆ. ಮುಂಬರುವ ದಿನಗಳಲ್ಲಿ ಮೀರಾ ರೋಡ್ ಸ್ಟುಡಿಯೋದಲ್ಲಿ ಮರಳುಗಾಡಿನ ಹಿನ್ನೆಲೆಯ ಮತ್ತೊಂದು ಸಾಹಸ ದೃಶ್ಯವನ್ನು ಚಿತ್ರೀಕರಿಸಲು ತಂಡ ಯೋಜಿಸಿದೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಮತ್ತೆ ಪ್ರೆಗ್ನೆಂಟ್; 2ನೇ ಮಗುವಿನ ನಿರೀಕ್ಷೆಯಲ್ಲಿ ರಣವೀರ್ ಸಿಂಗ್
‘ಕಿಂಗ್’ ಸಿನಿಮಾದ ತಾರಾಗಣವೇ ವಿಶೇಷವಾಗಿದೆ. ಮೊದಲ ಬಾರಿಗೆ ಶಾರುಖ್ ಖಾನ್ ಮತ್ತು ಅವರ ಮಗಳು ಸುಹಾನಾ ಖಾನ್ ಈ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಇದೆ. ಅನಿಲ್ ಕಪೂರ್ ಮತ್ತು ಜಾಕಿ ಶ್ರಾಫ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.