ನಟಿ ಕಂಗನಾ ರಣಾವತ್ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾಗ ಮಾಡಿಕೊಂಡ ವಿವಾದಗಳಿಗೆ ಲೆಕ್ಕವೇ ಇಲ್ಲ. ಈಗ ಅವರು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ರಾಜಕೀಯದಲ್ಲೂ ವಿವಾದಗಳ ಸರಣಿಯನ್ನು ಅವರು ಮುಂದುವರಿಸಿದ್ದಾರೆ. ಬಿಜೆಪಿ ಪಕ್ಷದಿಂದ ಸಂಸದೆಯಾಗಿ ಆಯ್ಕೆ ಆಗಿರುವ ಕಂಗನಾ ರಣಾವತ್ ಅವರು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡುವ ಭರದಲ್ಲಿ ಒಂದು ತಿರುಚಿದ ಫೋಟೋವನ್ನು ಹಂಚಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ನಟಿಯ ವಿರುದ್ಧ 40 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಜಾತಿ ಗಣತಿ ಬಗ್ಗೆ ಮಾತನಾಡಿದ್ದರು. ಅದನ್ನು ವಿರೋಧಿಸುವ ಸಲುವಾಗಿ ಕಂಗನಾ ಅವರು ಒಂದು ಎಡಿಟೆಡ್ ಫೋಟೋವನ್ನು ಹಂಚಿಕೊಂಡರು. ಆ ಫೋಟೋದಲ್ಲಿ ರಾಹುಲ್ ಗಾಂಧಿ ತಲೆಗೆ ಮುಸ್ಲಿಂ ಟೋಪಿ, ಕ್ರಿಸ್ಚಿಯನ್ ಕ್ರಾಸ್, ಹಿಂದೂಗಳ ತಿಲಕ ಮುಂತಾದ್ದನ್ನು ಎಡಿಟ್ ಮಾಡಲಾಗಿತ್ತು. ಇದರಿಂದ ರಾಹುಲ್ ಗಾಂಧಿ ಅವರಿಗೆ ಅವಮಾನ ಆಗಿದೆ ನೆಟ್ಟಿಗರು ಗರಂ ಆಗಿದ್ದರು.
ಇದನ್ನೂ ಓದಿ: ಸಂಸದೆ, ನಟಿ ಕಂಗನಾ ರಣಾವತ್ ಮನೆ ಮಾರಿಕೊಳ್ಳುವ ಸ್ಥಿತಿ ಬಂತಾ? ಎಲ್ಲರಿಗೂ ಅಚ್ಚರಿ
ಈ ವಿಚಾರಕ್ಕೆ ಸಂಬಂಧಿಸಿ ಕಂಗನಾ ರಣಾವತ್ ವಿರುದ್ಧ ಸುಪ್ರೀಂ ಕೋರ್ಟ್ ಲಾಯರ್ ನರೇಂದ್ರ ಮಿಶ್ರಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಯಾವುದೇ ವ್ಯಕ್ತಿಯ ಪೋಟೋವನ್ನು ತಿರುಚಿ, ಅದನ್ನು ಆನ್ಲೈನ್ನಲ್ಲಿ ಶೇರ್ ಮಾಡುವುದು ಮಾಹಿತಿ-ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಅಪರಾಧ ಆಗುತ್ತದೆ. ಇದರಿಂದ ರಾಹುಲ್ ಗಾಂಧಿ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದಂತೆ ಆಗಿದೆ ಎಂದು ನರೇಂದ್ರ ಮಿಶ್ರಾ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಕಂಗನಾ ರಣಾವತ್ ಅವರು ಆಯ್ಕೆ ಆಗಿದ್ದಾರೆ. ಸಿನಿಮಾ ಕೆಲಸಗಳನ್ನು ಬದಿಗೊತ್ತಿ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಿರ್ದೇಶನ, ನಿರ್ಮಾಣ ಮಾಡಿ, ನಟಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಸೆಪ್ಟೆಂಬರ್ 6ರಂದು ಬಿಡುಗಡೆ ಆಗಲಿದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಈ ಸಿನಿಮಾ ಸಿದ್ಧವಾಗಿದೆ. ಎಲ್ಲವೂ ಪ್ಲ್ಯಾನ್ ಪ್ರಕಾರ ನಡೆದಿದ್ದರೆ ಈಗಾಗಲೇ ಈ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ವಿಳಂಬ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.