ಯೂಟ್ಯೂಬ್ನಲ್ಲಿ ಸಿನಿಮಾ ಬಿಡುಗಡೆ ಮಾಡಿ ಗೆದ್ದರೇ ಆಮಿರ್ ಖಾನ್, ಗಳಿಸಿದ್ದೆಷ್ಟು?
Aamir Khan movies: ಆಮಿರ್ ಖಾನ್ ನಟಿಸಿ, ನಿರ್ಮಾಣ ಮಾಡಿದ್ದ ‘ಸಿತಾರೆ ಜಮೀನ್ ಪರ್’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಬಳಿಕ ಸಿನಿಮಾವನ್ನು ಒಟಿಟಿಗಳಿಗೆ ಮಾರಾಟ ಮಾಡದೆ, ಯೂಟ್ಯೂಬ್ನಲ್ಲಿ ಪೇ ಪರ್ ವೀವ್ ಮಾಡೆಲ್ನಲ್ಲಿ ಬಿಡುಗಡೆ ಮಾಡಿದ್ದರು. ಇದರಿಂದ ಆಮಿರ್ ಖಾನ್ ಹಣ ಮಾಡಿದರೆ? ಅವರೇ ಉತ್ತರಿಸಿದ್ದಾರೆ.

ಆಮಿರ್ ಖಾನ್ (Aamir Khan), ಬಾಲಿವುಡ್ನ ಇತರೆ ಇಬ್ಬರು ಖಾನ್ಗಳ ರೀತಿ ಅಲ್ಲ. ಸಲ್ಮಾನ್, ಶಾರುಖ್ ಕೇವಲ ಹಿಟ್ ಸಿನಿಮಾಗಳ ಹಿಂದೆ ಓಡಿದರೆ ಆಮಿರ್ ಖಾನ್, ಸಮಾಜಮುಖಿ ಸಿನಿಮಾ, ‘ಸಿನಿಮಾ ಕಲೆ’, ಜನಸ್ನೇಹಿ ಸಿನಿಮಾ ಎಂದೆಲ್ಲ ಚಡಪಡಿಸುತ್ತಿರುತ್ತಾರೆ. ಶಾರುಖ್, ಸಲ್ಮಾನ್, ‘ಜವಾನ್’, ‘ಟೈಗರ್’ ರೀತಿಯ ಪಕ್ಕಾ ಕಮರ್ಶಿಯಲ್ ಸಿನಿಮಾನಲ್ಲಿ ನಟಿಸುತ್ತಿರುವಾಗ ಆಮಿರ್ ಖಾನ್, ‘ಸಿತಾರೆ ಜಮೀನ್ ಪರ್’ ಹೆಸರಿನ ಮಾನಸಿಕ ಸಮಸ್ಯೆಯುಳ್ಳ ವ್ಯಕ್ತಿಗಳ ಬಗ್ಗೆ ಚರ್ಚಿಸುವ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಅನ್ನು ಸ್ವತಃ ತಾವೇ ನಿರ್ಮಾಣ ಸಹ ಮಾಡಿದ್ದ ಆಮಿರ್ ಖಾನ್, ಸಿನಿಮಾದಿಂದ ದೊಡ್ಡ ಯಶಸ್ಸು ಪಡೆದುಕೊಂಡರು.
ಸದಾ ಭಿನ್ನತೆಗೆ ಹಾತೊರೆಯುವ ಆಮಿರ್ ಖಾನ್, ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಒಟಿಟಿಗಳಿಗೆ ಮಾರಾಟ ಮಾಡಲಿಲ್ಲ. ಚಿತ್ರಮಂದಿರಗಳಲ್ಲಿ ಭಾರಿ ಹಿಟ್ ಆದ ಈ ಸಿನಿಮಾಕ್ಕೆ ಭಾರಿ ದೊಡ್ಡ ಮೊತ್ತವನ್ನೇ ಕೊಡುವುದಾಗಿ ದೊಡ್ಡ-ದೊಡ್ಡ ಒಟಿಟಿಗಳು ಮುಂದೆ ಬಂದವು ಆದರೆ ಆಮಿರ್ ಖಾನ್, ಒಟಿಟಿಗೆ ನೀಡುವ ಬದಲು ತಮ್ಮ ಸಿನಿಮಾ ಹೆಚ್ಚು ಜನರನ್ನು ತಲುಪಬೇಕೆಂಬ ಕಾರಣಕ್ಕೆ ತಮ್ಮ ಸಿನಿಮಾವನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದರು.
ಯೂಟ್ಯೂಬ್ನಲ್ಲಿ ಯಾರು ಬೇಕಾದರೂ ಕೇವಲ 100 ರೂಪಾಯಿ ನೀಡಿ ಸಿನಿಮಾ ನೋಡಬಹುದಿತ್ತು. 100 ರೂಪಾಯಿ ನೀಡಿದರೆ 48 ಗಂಟೆಗಳ ಕಾಲ ‘ತಾರೆ ಜಮೀನ್ ಪರ್’ ಸಿನಿಮಾ ನೋಡುವ ಅವಕಾಶ ಇತ್ತು. ಒಂದೊಮ್ಮೆ 48 ಗಂಟೆ ಒಳಗಾಗಿ ಸಿನಿಮಾ ನೋಡಲಿಲ್ಲವೆಂದರೆ ಮತ್ತೆ 100 ರೂಪಾಯಿ ನೀಡಬೇಕಿತ್ತು. ಒಂದೊಮ್ಮೆ 100 ರೂಪಾಯಿ ನೀಡಿ ಸಿನಿಮಾ ನೋಡಿ, ಮತ್ತೊಮ್ಮೆ ನೋಡಬೇಕು ಎನಿಸಿದರೆ ಮತ್ತೆ 100 ರೂಪಾಯಿಗಳನ್ನು ನೀಡಬೇಕಿತ್ತು. ಸ್ವತಃ ಯೂಟ್ಯೂಬ್, ‘ಸಿತಾರೆ ಜಮೀನ್ ಪರ್’ ಸಿನಿಮಾಕ್ಕೆ ಪ್ರಚಾರವನ್ನೂ ನೀಡಿತ್ತು.
ಇದನ್ನೂ ಓದಿ:ಮೆಲ್ಬೋರ್ನ್ನಲ್ಲಿ ಗರ್ಲ್ಫ್ರೆಂಡ್ ಕೈ ಹಿಡಿದು ಓಡಾಡಿದ ಆಮಿರ್ ಖಾನ್
ಇತ್ತೀಚೆಗಿನ ಸಂದರ್ಶನದಲ್ಲಿ ‘ಸಿತಾರೆ ಜಮೀನ್ ಪರ್’ ಸಿನಿಮಾ ಅನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿರುವುದರಿಂದ ಆದ ಲಾಭದ ಬಗ್ಗೆ ಮಾತನಾಡಿರುವ ಆಮಿರ್ ಖಾನ್, ‘ಪೇ ಪರ್ ವೀವ್’ ಎಂಬ ಮಾಡೆಲ್ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲ. ವಿದೇಶಗಳಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ಆದರೆ ನಾವು ಈ ಪ್ರಯತ್ನಕ್ಕೆ ಕೈಹಾಕಿದೆವು, ಸಾಮಾನ್ಯವಾಗಿ ಭಾರತದಲ್ಲಿ ಪೇ ಪರ್ ವೀವ್ ಮಾಡೆಲ್ನಲ್ಲಿ 1 ರೂಪಾಯಿ ಹಣ ಬಂದರೆ ನಮಗೆ 20 ರೂಪಾಯಿಗಳು ಬಂದವು’ ಎಂದಿದ್ದಾರೆ. ಆ ಮೂಲಕ ಉತ್ತಮ ಮೊತ್ತವೇ ಪೇ ಪರ್ ವೀವ್ ಮಾಡೆಲ್ನಿಂದ ಬಂದಿದೆ ಎಂದಿದ್ದಾರೆ ಆಮಿರ್.
ಆದರೆ ‘ಒಟಿಟಿಗಳು ನಮಗೆ ಕೊಡುವುದಾಗಿ ಹೇಳಿದ್ದ ಮೊತ್ತಕ್ಕೂ ಈಗ ಯೂಟ್ಯೂಬ್ನಿಂದ ನಮಗೆ ಬಂದಿರುವ ಮೊತ್ತಕ್ಕೂ ಅಜಗಜಾಂತರ ಅಂತರ ಇದೆ ಎಂದಿದ್ದಾರೆ. ಆ ಮೂಲಕ ಒಟಿಟಿ ಬದಲಿಗೆ ಪೇ ಪರ್ ವೀವ್ ಮಾಡೆಲ್ನಲ್ಲಿ ಯೂಟ್ಯೂಬ್ಗೆ ಬಿಡುಗಡೆ ಮಾಡಿದ್ದು ಸೂಕ್ತ ಮೊತ್ತದ ಲಾಭ ತಂದುಕೊಡಲಿಲ್ಲ ಎಂದೇ ಆಮಿರ್ ಖಾನ್ ಹೇಳಿದ್ದಾರೆ. ಅಲ್ಲಿಗೆ, ಯೂಟ್ಯೂಬ್ನಲ್ಲಿ ಪೇ ಪರ್ ವೀವ್ ಮಾಡೆಲ್ನಲ್ಲಿ ಬಿಡುಗಡೆ ಮಾಡುವುದಕ್ಕಿಂತಲೂ ಒಟಿಟಿಗೆ ಮಾರಾಟ ಮಾಡುವುದೇ ಉತ್ತಮ ಎನ್ನಬಹುದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:26 pm, Sun, 14 September 25




