Ek Villain Returns: ಕಷ್ಟದಲ್ಲಿದೆ ‘ಏಕ್ ವಿಲನ್ ರಿಟರ್ನ್ಸ್’ ಭವಿಷ್ಯ; ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಆಗಿಲ್ಲ ಮ್ಯಾಜಿಕ್
Ek Villain Returns Box Office Collection: ಟ್ರೇಲರ್ ಮೂಲಕ ‘ಏಕ್ ವಿಲನ್ ರಿಟರ್ನ್ಸ್’ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಆದರೆ ಚಿತ್ರಮಂದಿರದಲ್ಲಿ ಮೋಡಿ ಮಾಡಲು ಸಾಧ್ಯವಾಗಿಲ್ಲ.
ಬಾಲಿವುಡ್ (Bollywood) ಸಿನಿಮಾಗಳು ತೀವ್ರ ಹಿನ್ನಡೆ ಅನುಭವಿಸುತ್ತಿವೆ. ದಕ್ಷಿಣ ಭಾರತದ ಸಿನಿಮಾಗಳ ಎದುರಿನಲ್ಲಿ ಪೈಪೋಟಿ ನೀಡಲು ಹಿಂದಿ ಚಿತ್ರಗಳಿಗೆ ಸಾಧ್ಯವಾಗುತ್ತಿಲ್ಲ. ಇತ್ತೀಚಿನ ತಿಂಗಳಲ್ಲಿ ‘ಭೂಲ್ ಭುಲಯ್ಯ 2’ ಹೊರತು ಪಡಿಸಿ ಹಿಂದಿಯ ಬೇರೆ ಯಾವುದೇ ಸಿನಿಮಾಗಳಿಗೆ ಒಳ್ಳೆಯ ಕಲೆಕ್ಷನ್ ಆಗಿಲ್ಲ. ಜುಲೈ 29ರಂದು ತೆರೆಕಂಡ ‘ಏಕ್ ವಿಲನ್ ರಿಟರ್ನ್ಸ್’ (Ek Villain Returns) ಸಿನಿಮಾವಾದರೂ ಗೆಲುವು ಕಾಣಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಜಾನ್ ಅಬ್ರಾಹಂ, ಅರ್ಜುನ್ ಕಪೂರ್ ಅವರಂತಹ ಸ್ಟಾರ್ ಕಲಾವಿದರು ಇದ್ದರೂ ಕೂಡ ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆ (Box Office Collection) ನಿರೀಕ್ಷಿತ ಮಟ್ಟ ತಲುಪಿಲ್ಲ.
2014ರಲ್ಲಿ ಬಂದ ‘ಏಕ್ ವಿಲನ್’ ಸಿನಿಮಾ ಜನಮೆಚ್ಚುಗೆ ಗಳಿಸಿತ್ತು. ಅದರ ಸೀಕ್ವೆಲ್ ರೀತಿ ಬಂದಿರುವ ‘ಏಕ್ ವಿಲನ್ ರಿಟರ್ನ್ಸ್’ ಚಿತ್ರದ ಮೇಲೆ ಜನರು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿಲ್ಲ. ಮೊದಲ ದಿನವಾದ ಜುಲೈ 29ರಂದು ಕೇವಲ 7.05 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಎರಡನೇ ದಿನವಾದ ಶನಿವಾರ ಗಳಿಕೆ ಹೆಚ್ಚಬಹುದು ಎಂದುಕೊಳ್ಳಲಾಯಿತು. ಆದರೆ ಯಾವುದೇ ಭರವಸೆ ಕಾಣಲಿಲ್ಲ. ಶನಿವಾರ ಕೂಡ 7.27 ಕೋಟಿ ರೂಪಾಯಿ ಆದಾಯ ಬಂತು. ಭಾನುವಾರ (ಜುಲೈ 31) 9.02 ಕೋಟಿ ರೂಪಾಯಿ ಗಳಿಸುವ ಮೂಲಕ ಕೊಂಚ ಚೇತರಿಕೆ ಕಂಡಿತು. ಆದರೆ ಸ್ಟಾರ್ ಸಿನಿಮಾಗಳಿಗೆ ಇದು ಹೇಳಿಕೊಳ್ಳುವಂತಹ ಮೊತ್ತ ಅಲ್ಲ ಎನ್ನುತ್ತಿದ್ದಾರೆ ಟ್ರೇಡ್ ವಿಶ್ಲೇಷಕರು.
‘ಏಕ್ ವಿಲನ್’ ಚಿತ್ರವನ್ನು ನಿರ್ದೇಶಿಸುವ ಮೂಲಕ ಮೋಹಿತ್ ಸೂರಿ ಅವರು ಯಶಸ್ಸು ಕಂಡಿದ್ದರು. ಆದರೆ ಈಗ ಅವರು ‘ಏಕ್ ವಿಲನ್ ರಿಟರ್ನ್ಸ್’ ಚಿತ್ರದಿಂದ ದೊಡ್ಡ ಗೆಲುವು ಪಡೆಯಲು ಸಾಧ್ಯವಾಗಿಲ್ಲ. ಟ್ರೇಲರ್ ಮೂಲಕ ಈ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಆದರೆ ಚಿತ್ರಮಂದಿರದಲ್ಲಿ ಮೋಡಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಸಿನಿಮಾದಲ್ಲಿ ಜಾನ್ ಅಬ್ರಾಹಂ, ಅರ್ಜುನ್ ಕಪೂರ್, ತಾರಾ ಸುತಾರಿಯಾ, ದಿಶಾ ಪಟಾಣಿ ಮುಂತಾದವರು ನಟಿಸಿದ್ದಾರೆ. ಇಂಥ ಸ್ಟಾರ್ ಕಲಾವಿದರು ಇದ್ದರೂ ಕೂಡ ಚಿತ್ರಕ್ಕೆ ಹೆಚ್ಚಿನ ಲಾಭ ಆಗಿಲ್ಲ. ಜಾನ್ ಅಬ್ರಾಹಂ ಅಭಿಮಾನಿಗಳಿಗೆ ‘ಅಟ್ಯಾಕ್’ ಚಿತ್ರದ ಬಳಿಕ ಮತ್ತೊಮ್ಮೆ ನಿರಾಸೆ ಆಗಿದೆ.