Raj Babbar: ನಟ ರಾಜ್ ಬಬ್ಬರ್ಗೆ 2 ವರ್ಷ ಜೈಲು ಶಿಕ್ಷೆ; 26 ವರ್ಷ ಹಿಂದಿನ ಕೇಸ್ಗೆ ಈಗ ತೀರ್ಪು
Raj Babbar | Jail: 1996ರಲ್ಲಿ ರಾಜ್ ಬಬ್ಬರ್ ಅವರು ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದರು. ಆ ಕೇಸ್ ಸಂಬಂಧ ಈಗ ತೀರ್ಪು ಪ್ರಕಟ ಆಗಿದೆ.
ಖ್ಯಾತ ನಟ ರಾಜ್ ಬಬ್ಬರ್ (Raj Babbar) ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಬರೋಬ್ಬರಿ 26 ವರ್ಷಗಳ ಹಿಂದೆ ಅವರು ಮಾಡಿದ್ದ ತಪ್ಪಿಗೆ ಈಗ ಈ ಸಜೆ ನೀಡಲಾಗಿದೆ. ಮುಂಬೈ ಕೋರ್ಟ್ನಲ್ಲಿ ಪ್ರಕರಣದ ತೀರ್ಪು ನೀಡಲಾಗಿದ್ದು, ಜೈಲು (Jail) ಶಿಕ್ಷೆಯ ಜೊತೆಗೆ 8,500 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಚುನಾವಣಾ ಅಧಿಕಾರಿ (Polling Officer) ಮೇಲೆ ಹಲ್ಲೆ ಮಾಡಿದ ಆರೋಪ ರಾಜ್ ಬಬ್ಬರ್ ಅವರ ಮೇಲಿತ್ತು. 1996ರ ಮೇ ತಿಂಗಳಲ್ಲಿ ನಡೆದ ಚುನಾವಣೆ ವೇಳೆ ಅವರು ಈ ಕೃತ್ಯ ಎಸಗಿದ್ದರು. ವಜೀರ್ಗಂಜ್ ಪೊಲೀಸ್ ರಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿತ್ತು. ಆ ಸಂದರ್ಭದಲ್ಲಿ ರಾಜ್ ಬಬ್ಬರ್ ಅವರು ಸಮಾಜವಾದಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.
ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಕೇಸ್ನ ತೀರ್ಪಿನ ವೇಳೆ ರಾಜ್ ಬಬ್ಬರ್ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದರು. ನಟನಾಗಿ, ರಾಜಕಾರಣಿಯಾಗಿ ರಾಜ್ ಬಬ್ಬರ್ ಅವರು ಗುರುತಿಸಿಕೊಂಡಿದ್ದಾರೆ. ಸಿನಿಮಾ, ಸೀರಿಯಲ್ ಹಾಗೂ ವೆಬ್ ಸೀರಿಸ್ಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. ಹಾಟ್ ಸ್ಟಾರ್ನಲ್ಲಿ ಇತ್ತೀಚೆಗೆ ರಿಲೀಸ್ ಆದ ‘ದಿಲ್ ಬೇಕರಾರ್’ ವೆಬ್ ಸಿರೀಸ್ನಲ್ಲಿ ಅವರು ನಟಿಸಿದ್ದಾರೆ. 150ಕ್ಕೂ ಅಧಿಕ ಸಿನಿಮಾ, 30ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ ಬಳಿಕ ರಾಜ್ ಬಬ್ಬರ್ ಅವರು ರಾಜಕೀಯದ ಕಡೆಗೆ ಆಸಕ್ತಿ ತೋರಿದರು.
90ರ ದಶಕದಲ್ಲಿ ರಾಜ್ ಬಬ್ಬರ್ ಅವರು ಸಮಾಜವಾದಿ ಪಕ್ಷ ಸೇರಿಕೊಂಡರು. 1994ರಲ್ಲಿ ರಾಜ್ಯ ಸಭೆಗೆ ನಾಮನಿರ್ದೇಶಕಗೊಂಡರು. 2008ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ಮೂರು ಬಾರಿ ಅವರು ಸಂಸದರಾಗಿ ಆಯ್ಕೆ ಆಗಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ರಾಜ್ ಬಬ್ಬರ್ ಅವರ ಅನುಭವ ಅಪಾರ. 1977ರಿಂದಲೂ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ರಂಗಭೂಮಿಯಲ್ಲಿ ಪದವಿ ಪಡೆದು, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ ಪಡೆದ ಅವರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.