‘ಇನ್ನೊಂದು ಮದುವೆ ಆಗ್ತೀರಾ?’: ಕರಿಷ್ಮಾ ಕಪೂರ್​ಗೆ ನೇರವಾಗಿ ಪ್ರಶ್ನೆ ಎಸೆದ ಭೂಪ; ನಟಿಯ ಉತ್ತರ ಏನು?

| Updated By: ಮದನ್​ ಕುಮಾರ್​

Updated on: Apr 29, 2022 | 3:56 PM

2016ರಲ್ಲಿ ಡಿವೋರ್ಸ್​ ಪಡೆದ ಕರಿಷ್ಮಾ ಕಪೂರ್​ ಅವರು ಇನ್ನೊಂದು ಮದುವೆ ಆಗುತ್ತಾರಾ ಎಂಬ ಪ್ರಶ್ನೆ ಫ್ಯಾನ್ಸ್​ ಮನದಲ್ಲಿ ಮೂಡಿದೆ. ಅದಕ್ಕೆ ಕರಿಷ್ಮಾ ಉತ್ತರ ನೀಡಿದ್ದಾರೆ.

‘ಇನ್ನೊಂದು ಮದುವೆ ಆಗ್ತೀರಾ?’: ಕರಿಷ್ಮಾ ಕಪೂರ್​ಗೆ ನೇರವಾಗಿ ಪ್ರಶ್ನೆ ಎಸೆದ ಭೂಪ; ನಟಿಯ ಉತ್ತರ ಏನು?
ಕರಿಷ್ಮಾ ಕಪೂರ್
Follow us on

​ನಟಿ ಕರಿಷ್ಮಾ ಕಪೂರ್​ (Karisma Kapoor) ಅವರು ಸಿನಿಮಾಗಳಿಂದ ದೂರ ಉಳಿದುಕೊಂಡಿದ್ದಾರೆ. ಆದರೂ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಕರಿಷ್ಮಾ ಕಪೂರ್​ ಆ್ಯಕ್ಟೀವ್​ ಆಗಿದ್ದಾರೆ. ಅವರದ್ದು ಫಿಲ್ಮಿ ಕುಟುಂಬ ಆದ್ದರಿಂದ ಸಿನಿಮಾ ವಲಯದಿಂದ ಅವರು ಸಂಪೂರ್ಣವಾಗಿ ಹೊರಹೋಗಲು ಸಾಧ್ಯವಿಲ್ಲ. ಅಭಿಮಾನಿಗಳ ಜೊತೆ ಅವರು ಆಗಾಗ ಪ್ರಶ್ನೋತ್ತರ ನಡೆಸುತ್ತಾರೆ. ಇತ್ತೀಚೆಗೆ ಅವರು ಇನ್​ಸ್ಟಾಗ್ರಾಮ್​ನಲ್ಲಿ (Karisma Kapoor Instagram) ಅಭಿಮಾನಿಗಳಿಂದ ಪ್ರಶ್ನೆಗಳನ್ನು ಆಹ್ವಾನಿಸಿದರು. ನಟಿಯ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ನೆಟ್ಟಿಗರು ಹತ್ತಾರು ಬಗೆಯ ಪ್ರಶ್ನೆ ಕೇಳಿದರು. ಕೆಲವರಂತೂ ಅತಿ ಪರ್ಸನಲ್​ ಆದಂತಹ ವಿಚಾರಗಳ ಬಗ್ಗೆಯೂ ಪ್ರಶ್ನೆ ಎತ್ತಿದರು. ಈ ವೇಳೆ ಕರಿಷ್ಮಾ ಕಪೂರ್ ಅವರ ಮರು ಮದುವೆ ಬಗ್ಗೆ ಕೂಡ ಪ್ರಸ್ತಾಪ ಆಯಿತು. ಆ ಪ್ರಶ್ನೆಯನ್ನು ಅವರು ಸ್ಕಿಪ್​ ಮಾಡಬಹುದಿತ್ತು. ಆದರೆ ನಾಜೂಕಾಗಿ ಉತ್ತರ ನೀಡಿ ಅವರು ಜಾರಿಕೊಂಡರು. 2016ರಲ್ಲಿ ಸಂಜಯ್​ ಕಪೂರ್​ ಜೊತೆಗಿನ ದಾಂಪತ್ಯ ಜೀವನಕ್ಕೆ ಕರಿಷ್ಮಾ ಅಂತ್ಯ ಹಾಡಿದ್ದರು. ಡಿವೋರ್ಸ್​ (Karisma Kapoor Divorce) ಬಳಿಕ ಅವರು ಸಿಂಗಲ್​ ಆಗಿದ್ದಾರೆ. ಈಗ ಮರು ಮದುವೆ ಬಗ್ಗೆ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನ ಎಂಬುದು ತುಂಬ ಕಾಮನ್​ ಎಂಬಂತಾಗಿದೆ. ಇತ್ತೀಚೆಗೆ ಅನೇಕ ತಾರೆಯರು ಡಿವೋರ್ಸ್​ ಪಡೆದು ಸುದ್ದಿ ಆಗಿದ್ದಾರೆ. ಇನ್ನು, ಮರು ಮದುವೆಗಳಿಗೂ ಬರವಿಲ್ಲ. ಹಾಗಾಗಿ ಕರಿಷ್ಮಾ ಕಪೂರ್​ ಕೂಡ ಇನ್ನೊಂದು ಮದುವೆ ಆಗುತ್ತಾರಾ ಎಂಬ ಬಗ್ಗೆ ಜನರಿಗೆ ಕೌತುಕ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಪ್ರಶ್ನೋತ್ತರಕ್ಕೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಅಭಿಮಾನಿಯೊಬ್ಬರು ಈ ರೀತಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರವಾಗಿ ಗೊಂದಲಮಯ ಮುಖ ಮಾಡಿಕೊಂಡಿರುವ ಫೋಟೋವೊಂದನ್ನು ಕರಿಷ್ಮಾ ಕಪೂರ್ ಪೋಸ್ಟ್​ ಮಾಡಿದ್ದಾರೆ. ‘ಡಿಪೆಂಡ್ಸ್​’ ಎಂದು ಅದಕ್ಕೆ ಅವರು ಕ್ಯಾಪ್ಷನ್​ ನೀಡಿದ್ದಾರೆ. ಅಂದರೆ ಸಂದರ್ಭ ಅಥವಾ ವ್ಯಕ್ತಿಯ ಆಧಾರದ ಮೇಲೆ ತಮ್ಮ ಮರು ಮದುವೆಯ ವಿಷಯ ನಿರ್ಧಾರ ಆಗುತ್ತದೆ ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.

ಬಾಲಿವುಡ್​ನಲ್ಲಿ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ಖ್ಯಾತಿ ಕರಿಷ್ಮಾ ಕಪೂರ್​ ಅವರಿಗೆ ಸಲ್ಲುತ್ತದೆ. 1998ರಲ್ಲಿ ‘ದಿಲ್​ ತೋ ಪಾಗಲ್​ ಹೈ’ ಚಿತ್ರದ ನಟನೆಗಾಗಿ ಅವರು ‘ಅತ್ಯುತ್ತಮ ಪೋಷಕ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ನಾಲ್ಕು ಬಾರಿ ಫಿಲ್ಮ್​ ಫೇರ್ ಪ್ರಶಸ್ತಿ ಸ್ವೀಕರಿಸಿದ ಹಿರಿಮೆ ಅವರದ್ದು. 2003ರಲ್ಲಿ ಉದ್ಯಮಿ ಸಂಜಯ್​ ಕಪೂರ್​ ಜೊತೆ ಅವರ ಮದುವೆ ನಡೆದಿತ್ತು. ಈ ಜೋಡಿಗೆ ಇಬ್ಬರು ಮಕ್ಕಳು. ಆದರೆ ನಂತರದ ವರ್ಷಗಳಲ್ಲಿ ಕರಿಷ್ಮಾ ಮತ್ತು ಸಂಜಯ್​ ನಡುವೆ ವೈಮನಸ್ಸು ಮೂಡಿತು. 2014ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಅವರು 2016ರಲ್ಲಿ ಅಧಿಕೃತವಾಗಿ ಬೇರಾದರು. ಹಾಗಾಗಿ ಕರಿಷ್ಮಾ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾರೋ ಇಲ್ಲವೋ ಎಂಬುದು ಅಭಿಮಾನಿಗಳ ಕೌತುಕ.

ವೆಬ್​ ಸರಣಿ ಲೋಕಕ್ಕೂ ಕರಿಷ್ಮಾ ಕಾಲಿಟ್ಟಿದ್ದಾರೆ. 2020ರಲ್ಲಿ ಬಂದ ‘ಮೆಂಟಲ್​ಹುಡ್​’ ವೆಬ್​ ಸಿರೀಸ್​ನಲ್ಲಿ ಅವರು ನಟಿಸಿದರು. ಕಿರುತೆರೆಯ ಅನೇಕ ಕಾರ್ಯಕ್ರಮಗಳಿಗೆ ಜಡ್ಜ್​ ಆಗಿಯೂ ಅವರು ಕೆಲಸ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​

ನಾಗಚೈತನ್ಯ 2ನೇ ಮದುವೆ ಗಾಸಿಪ್​: ಸಮಂತಾ ರೀತಿ ಹೆಣ್ಣು ಬೇಡವೇ ಬೇಡ ಅಂತಿದೆಯಾ ಅಕ್ಕಿನೇನಿ ಕುಟುಂಬ?