‘ಲಾಲ್ ಸಿಂಗ್ ಚಡ್ಡಾ ಸೋಲಿಗೆ ಆಮಿರ್ ನೇರ ಕಾರಣ’; ನಿರ್ಮಾಣ ಸಂಸ್ಥೆ-ನಟನ ವಿರುದ್ಧ ಮುಸುಕಿನ ಗುದ್ದಾಟ?
ಸಿನಿಮಾ ಮಾಡುವ ಸಂದರ್ಭದಲ್ಲಿ Viacom 18 ಹಾಗೂ ಆಮಿರ್ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ ಪ್ರಮೋಷನ್ ವಿಚಾರದಲ್ಲಿ ಆಮಿರ್ ಖಾನ್ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡರು.
ಆಮಿರ್ ಖಾನ್ (Aamir Khan) ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸಿದ್ಧಗೊಂಡಿದ್ದು ಬರೋಬ್ಬರಿ 180 ಕೋಟಿ ರೂಪಾಯಿ ಬಜೆಟ್ನಲ್ಲಿ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರವನ್ನು (Forrest Gump Movie) ರಿಮೇಕ್ ಮಾಡುವ ಮೂಲಕ ನಿರ್ಮಾಣ ಸಂಸ್ಥೆ Viacom 18 ಕೈ ಸುಟ್ಟುಕೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಂದುಕೊಂಡ ಮಟ್ಟಕ್ಕೆ ಬಿಸ್ನೆಸ್ ಮಾಡಿಲ್ಲ. ಇನ್ನು, ಒಟಿಟಿ ಹಕ್ಕು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ ಆದರೂ ಆ ವಿಚಾರ ಖಚಿತವಾಗಿಲ್ಲ. ಹೀಗಿರುವಾಗಲೇ ನಿರ್ಮಾಣ ಸಂಸ್ಥೆ ಹಾಗೂ ಆಮಿರ್ ಖಾನ್ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ ಎನ್ನಲಾಗುತ್ತಿದೆ.
ಆಮಿರ್ ಖಾನ್ ಅವರು ‘ಫಾರೆಸ್ಟ್ ಗಂಪ್’ ಚಿತ್ರವನ್ನು ನೋಡಿ ಸಾಕಷ್ಟು ಇಷ್ಟಪಟ್ಟಿದ್ದರು. ಈ ಸಿನಿಮಾ ರಿಮೇಕ್ ಹಕ್ಕನ್ನು ಪಡೆಯಲು ಅವರು ಸಾಕಷ್ಟು ಶ್ರಮ ಹಾಕಿದ್ದರು. ಇದರ ರಿಮೇಕ್ ಹಕ್ಕನ್ನು Viacom 18 ಸಂಸ್ಥೆ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿ ಸಿನಿಮಾ ಮಾಡಿತ್ತು. ಕೊವಿಡ್ ಕಾರಣದಿಂದ ಸಿನಿಮಾ ಕೆಲಸಗಳು ಸಾಕಷ್ಟು ವಿಳಂಬ ಆದವು. ಇದು ಕೂಡ ಚಿತ್ರದ ಬಜೆಟ್ ಹೆಚ್ಚಲು ಪ್ರಮುಖ ಕಾರಣ ಎನ್ನಬಹುದು. ಈಗ ಸೋಲಿನ ಹೊಣೆ ಹೊತ್ತುಕೊಳ್ಳಲು ಯಾರೊಬ್ಬರೂ ರೆಡಿ ಇಲ್ಲ ಎಂದು ವರದಿಗಳು ಹೇಳಿವೆ.
ಸಿನಿಮಾ ಮಾಡುವ ಸಂದರ್ಭದಲ್ಲಿ Viacom 18 ಹಾಗೂ ಆಮಿರ್ ಒಟ್ಟಾಗಿ ಕೆಲಸ ಮಾಡಿದ್ದರು. ಆದರೆ ಪ್ರಮೋಷನ್ ವಿಚಾರದಲ್ಲಿ ಆಮಿರ್ ಖಾನ್ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡರು. ನಿರ್ಮಾಣ ಸಂಸ್ಥೆಗೆ ಪ್ರಮೋಷನ್ ವಿಚಾರದ ಬಗ್ಗೆ ಯಾವುದೇ ಅಪ್ಡೇಟ್ ನೀಡುತ್ತಿರಲಿಲ್ಲ ಎನ್ನಲಾಗಿದೆ. ‘ಆಮಿರ್ ಖಾನ್ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿಲ್ಲ, ಹೀಗಾಗಿ ಸಿನಿಮಾ ಸೋತಿದೆ’ ಎಂದು Viacom 18 ಸಂಸ್ಥೆಯವರು ಸೋಲಿನ ಹೊಣೆಯನ್ನು ಆಮಿರ್ ಖಾನ್ ತಲೆಗೆ ಕಟ್ಟಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಿಂದ ಆದ ನಷ್ಟ ಎಷ್ಟು? ಸಂಭಾವನೆ ಬಿಟ್ಟುಕೊಟ್ಟ ಆಮಿರ್ ಖಾನ್
ಈಗ ಈ ವಿಚಾರದಲ್ಲಿ Viacom 18 ಹಾಗೂ ಆಮಿರ್ ಖಾನ್ ಮಧ್ಯೆ ಮುಸುಕಿನ ಗುದ್ದಾಟ ಶುರುವಾಗಿದೆ. ಆಮಿರ್ ಖಾನ್ ಅವರ ನಿರ್ಧಾರಗಳಿಂದ ಸಿನಿಮಾ ಸೋಲು ಕಂಡಿದೆ ಎಂದು ನಿರ್ಮಾಣ ಸಂಸ್ಥೆಯವರು ಆರೋಪಿಸುತ್ತಿದ್ದಾರೆ ಎನ್ನಲಾಗಿದೆ. ಆಮಿರ್ ಖಾನ್ ಅವರು ಈ ಚಿತ್ರಕ್ಕೆ ಸಂಭಾವನೆ ಪಡೆದಿಲ್ಲವಂತೆ. ಬದಲಿಗೆ ಆ ಹಣವನ್ನು ಬಂಡವಾಳದ ರೂಪದಲ್ಲಿ ಸಿನಿಮಾಗೆ ಹೂಡಿಕೆ ಮಾಡುವಂತೆ ಅವರು ಕೋರಿದ್ದರು. ಈಗ ಸಿನಿಮಾ ನಷ್ಟ ಅನುಭವಿಸುತ್ತಿರುವುದರಿಂದ ಅವರು ಕೂಡ ನಷ್ಟ ಅನುಭವಿಸಿರುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.