ಆಲ್ಟೈಮ್ ಸೂಪರ್ ಹಿಟ್ ‘ಗದರ್’ ಸಿನಿಮಾಕ್ಕೆ ಸ್ಪೂರ್ತಿ ಈ ಸೈನಿಕ: ಪ್ರೇಮಕ್ಕಾಗಿ ಮಾಡಿದ್ದ ಅದ್ವಿತೀಯ ಸಾಹಸ
Gadar: ಬಾಲಿವುಡ್ನ ಎವರ್ಗ್ರೀನ್ ಪ್ರೇಮಕತೆಗಳಲ್ಲಿ ಒಂದಾದ 'ಗದರ್' ಸಿನಿಮಾಕ್ಕೆ ಪ್ರೇರಣೆ ಈ ಸೈನಿಕ, ಪ್ರೀತಿಗಾಗಿ ಈತ ಮಾಡಿದ ಸಾಹಸ ಸಾಮಾನ್ಯದ್ದಲ್ಲ.
ಬಾಲಿವುಡ್ (Bollywood) ಸಿನಿಮಾ ಇತಿಹಾಸದಲ್ಲಿ ‘ಲಗಾನ್‘ (Lagaan) ಸಿನಿಮಾಕ್ಕೆ ಪ್ರತ್ಯೇಕ ಸ್ಥಾನವಿದೆ. ಆಸ್ಕರ್ ಮೆಟ್ಟಿಲೇರಿದ್ದ ‘ಲಗಾನ್’ ಭಾರತೀಯರ ಹೆಮ್ಮೆ ಎನಿಸಿಕೊಂಡಿದೆ. ವಿಶೇಷವೆಂದರೆ ‘ಲಗಾನ್’ ಸಿನಿಮಾ ಬಿಡುಗಡೆ ಆದ ಅದೇ ದಿನ ಬಿಡುಗಡೆ ಆಗಿದ್ದ ಮತ್ತೊಂದು ಸಿನಿಮಾ ‘ಲಗಾನ್’ಗಿಂತಲೂ ದೊಡ್ಡ ಮೊತ್ತದ ಕಲೆಕ್ಷನ್ ಮಾಡಿತ್ತು, ಮಾತ್ರವಲ್ಲ ಬಾಲಿವುಡ್ನ ಕ್ಲಾಸಿಕ್ ಪ್ರೇಮಕತೆಗಳಲ್ಲಿ ಒಂದು ಎನಿಸಿಕೊಂಡಿತು. ಅದುವೇ ಸನ್ನಿ ಡಿಯೋಲ್ ನಟನೆಯ ‘ಗದರ್’. ಇದೀಗ ಈ ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಿದೆ. ಭಾರತ-ಪಾಕಿಸ್ತಾನದ ಕತೆ ಒಳಗೊಂಡಿದ್ದ ಈ ಸಿನಿಮಾ ನಿಜ ವ್ಯಕ್ತಿಯೊಬ್ಬನ ಪ್ರೇಮಕತೆಯನ್ನು ಆಧರಿಸಿದೆ.
‘ಗದರ್’ ಸಿನಿಮಾವು ಬೂಟಾ ಸಿಂಗ್ ಹೆಸರಿನ ಸಿಖ್ ಸೈನಿಕನ ನಿಜ ಜೀವನ ಆಧರಿಸಿದ ಕತೆಯಾಗಿದೆ. ಈ ಬೂಟಾ ಸಿಂಗ್ ಭಾರತದಲ್ಲಿ ಮಾತ್ರವಲ್ಲ ಪಾಕಿಸ್ತಾನದಲ್ಲಿಯೂ ಬಹಳ ಜನಪ್ರಿಯ. ಆತನ ಪ್ರೇಮಕತೆಯೇ ಅಂಥಹದ್ದು, ಬೂಟಾ ಸಿಂಗ್ನ ಪ್ರೇಮಕತೆಯನ್ನು ಮೂಲವಾಗಿರಿಸಿಕೊಂಡು ‘ಗದರ್’ ಸಿನಿಮಾ ಮಾಡಲಾಗಿದೆ.
ಸಿಖ್ ಸೈನಿಕನಾಗಿದ್ದ ಬೂಟಾ ಸಿಂಗ್ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಬ್ರಿಟೀಷರಿಗಾಗಿ ಕೆಲಸ ಮಾಡುತ್ತಿದ್ದ. ಬರ್ಮಾ ಫ್ರಂಟ್ನಲ್ಲಿ ಲಾರ್ಡ್ ಮೌಂಟ್ಬ್ಯಾಟನ್ ಅಡಿಯಲ್ಲ ಬೂಟಾ ಸಿಂಗ್ ಕೆಲಸ ಮಾಡಿದ್ದ. ಭಾರತ-ಪಾಕಿಸ್ತಾನ ಪ್ರತ್ಯೇಕವಾದ ಸಮಯದಲ್ಲಿ ಪೂರ್ವ ಪಂಜಾಬಿನಲ್ಲಿ ನೆಲೆಸಿದ್ದ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ತೆರಳುವಂತೆ ಬಲವಂತ ಮಾಡಲಾಗಿತ್ತು, ಆ ಸಮಯದಲ್ಲಿ ಹಲವಾರು ಮುಸ್ಲಿಂ ಕುಟುಂಬಗಳು ಇದ್ದ ಎಲ್ಲವನ್ನೂ ತೊರೆದು ಪಾಕಿಸ್ತಾನಕ್ಕೆ ತೆರಳಿದ್ದವು, ಹೀಗೆ ತೆರಳುತ್ತಿದ್ದ ಗುಂಪುಗಳ ಮೇಲೆ ಅಲ್ಲಲ್ಲಿ ಹಿಂಸಾಚಾರವೂ ಆಗುತ್ತಿತ್ತು. ಆ ರೀತಿಯ ಗುಂಪಿನಲ್ಲಿದ್ದ ಜುಬೈನ್ ಹೆಸರಿನ ಮಹಿಳೆಯರನ್ನು ಬೂಟಾ ಸಿಂಗ್ ರಕ್ಷಿಸಿದ್ದ. ಹೀಗೆ ತಾನು ರಕ್ಷಿಸಿದ್ದ ಮಹಿಳೆಯ ಮೇಲೆ ಬೂಟಾ ಸಿಂಗ್ಗೆ ಪ್ರೀತಿಯಾಗಿ ಆಕೆಯನ್ನೇ ವರಿಸಿದ ಅವರಿಗೆ ತನ್ವೀರ್ ಹಾಗೂ ದಿಲ್ವೀರ್ ಹೆಸರಿನ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು.
ಇದನ್ನೂ ಓದಿ:ಗದರ್ 2: ಮತ್ತೆ ಲಾಹೋರ್ಗೆ ನುಗ್ಗಿದ ತಾರಾ ಸಿಂಗ್, ಈ ಬಾರಿ ಏನು ಕಿತ್ತೊಗೆಯುತ್ತಾನೆ?
ಬಳಿಕ 1957ರಲ್ಲಿ ಸರ್ಕಾರವು ಹೊಸ ಯೋಜನೆಯೊಂದನ್ನು ಆರಂಭಿಸಿ, ತಮ್ಮ ಕುಟುಂಬದಿಂದ ದೂರಾದ ಮುಸ್ಲಿಂ ಮಹಿಳೆಯರು ಪಾಕಿಸ್ತಾನದಲ್ಲಿನ ತಮ್ಮ ಕುಟುಂಬವನ್ನು ಭೇಟಿ ಮಾಡಲು, ಸೇರಲು ಅವಕಾಶ ಮಾಡಿಕೊಟ್ಟಿತು. ಇದೇ ಕಾರಣಕ್ಕೆ ಜುಬೈನ್ ಒಬ್ಬ ಮಗಳೊಟ್ಟಿಗೆ ಪಾಕಿಸ್ತಾನದ ನುರ್ಪುರ ಹೆಸರಿನ ಹಳ್ಳಿಗೆ ತಮ್ಮ ಕುಟುಂಬವನ್ನು ಭೇಟಿಯಾಗಲು ತೆರಳಿದ್ದರು. ಆದರೆ ಅಲ್ಲಿ ಅವರ ಕುಟುಂಬದವರು ಜುಬೈನ್ ಅನ್ನು ಮತ್ತೆ ಭಾರತಕ್ಕೆ ಬರಲು ಬಿಡಲಿಲ್ಲ. ಜುನೈದ್ಗೆ ಎರಡನೇ ಮದುವೆ ಆಗಲಿದೆ ಎಂಬ ಸುದ್ದಿ ಇದೇ ಸಂದರ್ಭದಲ್ಲ ಬೂಟಾ ಸಿಂಗ್ಗೆ ಆಘಾತ ತಂದಿತ್ತು.
ಬೂಟಾ ಸಿಂಗ್, ಪಾಕಿಸ್ತಾನಕ್ಕೆ ತೆರಳಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಮರಳಿ ಪಡೆಯಲು ಹಲವು ಯತ್ನಗಳನ್ನು ಮಾಡಿದರು ಆದರೆ ಯಾವುದೂ ಫಲಿಸಲಿಲ್ಲ, ಕೊನೆಗೆ ಇಸ್ಲಾಂ ಧರ್ಮ ಸ್ವೀಕರಿಸಿ ಕಾನೂನು ಬಾಹಿರವಾಗಿ ಪಾಕಿಸ್ತಾನ ಪ್ರವೇಶಿಸಿದ್ದು ಮಾತ್ರವಲ್ಲದೆ ಪಾಕಿಸ್ತಾನದಲ್ಲಿ ಜುನೈದ್ ಕುಟುಂಬವನ್ನು ಭೇಟಿ ಮಾಡಿ ಪತ್ನಿಯನ್ನು ಕಳಿಸಿಕೊಡುವಂತೆ ಮನವಿ ಮಾಡಿದ. ಆದರೆ ಜುನೈದ್ ಕುಟುಂಬದವರು ಬೂಟಾ ಸಿಂಗ್ ಮೇಲೆ ಹಲ್ಲೆ ಮಾಡಿ ಪೊಲೀಸರಿಗೆ ಒಪ್ಪಿಸಿದರು. ನ್ಯಾಯಾಲಯದಲ್ಲಿ ಜುನೈದ್ ಕುಟುಂಬದ ಒತ್ತಡದಿಂದ ಬೂಟಾ ಸಿಂಗ್ ಅನ್ನು ಗುರುತು ಹಿಡಿಯಲು ನಿರಾಕರಿಸಿದರು.
ಇದರಿಂದ ತೀವ್ರವಾಗಿ ಮನನೊಂದ ಬೂಟಾ ಸಿಂಗ್ ಪಾಕಿಸ್ತಾನದ ಶನಾದ್ ರೈಲ್ವೆ ಸ್ಟೇಷನ್ನಲ್ಲಿ ತನ್ನ ಕಿರಿಯ ಪುತ್ರಿಯೊಡನೆ ರೈಲು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ, ಆ ಅಪಘಾತದಲ್ಲಿ ಬೂಟಾ ಸಿಂಗ್ ಮಗಳು ಬದುಕುಳಿದಳು. ಬೂಟಾ ಸಿಂಗ್ ನ ಈ ಪ್ರೇಮಕತೆ ‘ಗದರ್’ ಮಾತ್ರವೇ ಅಲ್ಲದೆ ‘ವೀರ್ ಜಾರಾ’ ಸೇರಿದಂತೆ ಇನ್ನೂ ಹಲವು ಸಿನಿಮಾಗಳಿಗೆ ಪ್ರೇರಣೆ ಒದಗಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:11 pm, Fri, 11 August 23