ಇತ್ತೀಚೆಗೆ ಅತಿ ಹೆಚ್ಚು ಟೀಕೆಗೆ ಒಳಗಾದ ಸಿನಿಮಾ ಎಂದರೆ ಅದು ‘ಅನಿಮಲ್’. ರಣಬೀರ್ ಕಪೂರ್ ನಟನೆಯ ಈ ಚಿತ್ರದಲ್ಲಿ ನೆಗೆಟಿವ್ ಗುಣಗಳು ಇರುವ ವ್ಯಕ್ತಿಯನ್ನು ಹೀರೋ ಪಾತ್ರದಲ್ಲಿ ವೈಭವೀಕರಿಸಲಾಗಿದೆ. ಕೊಲೆ ಮಾಡುವುದು ಎಂದರೆ ಈ ಚಿತ್ರದ ಕಥಾನಾಯಕನಿಗೆ ನೀರು ಕುಡಿದಷ್ಟೇ ಸಲೀಸು. ಮಹಿಳೆಯರನ್ನು ಅವಹೇಳನ ಮಾಡುವುದು, ಅವರ ಮೇಲೆ ಕೈ ಎತ್ತುವುದು ಕೂಡ ಈ ಹೀರೋಗೆ ಭಾರಿ ಸುಲಭ. ಇದನ್ನೆಲ್ಲ ಮಾಡಿದ್ದಕ್ಕೆ ಆತನಿಗೆ ಪಶ್ಚಾತ್ತಾಪ ಕೂಡ ಇರುವುದಿಲ್ಲ. ‘ಅನಿಮಲ್’ (Animal) ಸಿನಿಮಾವನ್ನು ಅನೇಕ ಸೆಲೆಬ್ರಿಟಿಗಳು ಟೀಕಿಸಿದ್ದಾರೆ. ಈಗ ಶಾರುಖ್ ಖಾನ್ (Shah Rukh Khan) ಕೂಡ ಖಂಡನೆ ವ್ಯಕ್ತಪಡಿಸಿದ್ದಾರಾ ಎಂಬ ಪ್ರಶ್ನೆ ಮೂಡಿದೆ.
ಇತ್ತೀಚೆಗೆ ಖಾಸಗಿ ಸಮಾರಂಭವೊಂದರಲ್ಲಿ ಶಾರುಖ್ ಖಾನ್ ಮಾತನಾಡಿದರು. ಅವರು ತಮ್ಮ ಭಾಷಣದಲ್ಲಿ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಅವುಗಳನ್ನು ಗಮನಿಸಿದರೆ ‘ಅನಿಮಲ್’ ಸಿನಿಮಾದ ಕುರಿತಾಗಿಯೇ ಹೇಳಿದ್ದು ಎಂದು ಅನಿಸುತ್ತಿದೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ತಮ್ಮ ಸಿನಿಮಾಗಳಲ್ಲಿನ ನೆಗೆಟಿವ್ ಪಾತ್ರಗಳ ಕುರಿತು ಶಾರುಖ್ ಖಾನ್ ಮಾತನಾಡಿದ್ದಾರೆ.
‘ನಾನು ಖುಷಿಯ ಕಥೆಗಳನ್ನು ಹೇಳುವ ಆಶಾವಾದಿ ವ್ಯಕ್ತಿ. ನಾನು ನಿಭಾಯಿಸುವ ಹೀರೋ ಪಾತ್ರಗಳು ಒಳ್ಳೆಯ ಕೆಲಸ ಮಾಡುತ್ತವೆ. ಒಂದು ವೇಳೆ ನಾನು ಕೆಟ್ಟ ವ್ಯಕ್ತಿಯ ಪಾತ್ರ ಮಾಡಿದರೆ ಆ ಪಾತ್ರ ತುಂಬ ಕಷ್ಟ ಎದುರಿಸುತ್ತದೆ. ನಾಯಿ ರೀತಿ ಆ ಪಾತ್ರ ಸಾಯುತ್ತದೆ. ಯಾಕೆಂದರೆ, ಒಳ್ಳೆಯದಕ್ಕೆ ಒಳ್ಳೆಯದೇ ಆಗುತ್ತದೆ ಎಂಬುದನ್ನು ನಂಬಿರುವವನು ನಾನು. ಕೆಟ್ಟತನವನ್ನು ಒದ್ದು ಓಡಿಸಬೇಕು’ ಎಂದು ಶಾರುಖ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ: ‘ವರ್ಷದ ಭಾರತೀಯ 2023’: ಕುಟುಂಬದ ಕಡುಕಷ್ಟದ ಬಳಿಕ ಶಾರುಖ್ ಖಾನ್ಗೆ ಸಿಕ್ತು ಪ್ರಶಸ್ತಿ
ತಮ್ಮ ಭಾಷಣದಲ್ಲಿ ಶಾರುಖ್ ಖಾನ್ ಅವರು ಒಮ್ಮೆಯೂ ‘ಅನಿಮಲ್’ ಸಿನಿಮಾದ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೂ ಕೂಡ ಅವರು ಆ ಚಿತ್ರದ ಕುರಿತಾಗಿಯೇ ಇಷ್ಟೆಲ್ಲ ಹೇಳಿರಬಹುದು ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗ ಅವರು ‘ಅನಿಮಲ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಖ್ಯಾತ ಗೀತರಚನಾಕಾರ ಜಾವೇದ್ ಅಖ್ತರ್ ಕೂಡ ಈ ಸಿನಿಮಾವನ್ನು ಕಟುವಾಗಿ ಟೀಕಿಸಿದ್ದರು. ಇಂಥ ಸಿನಿಮಾಗಳ ಯಶಸ್ಸು ತುಂಬ ಅಪಾಯಕಾರಿ ಎಂದು ಅವರು ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ