ಸನ್ನಿ ಡಿಯೋಲ್ ಚಿತ್ರದಿಂದ ಅಚಾತುರ್ಯ; ‘ಜಾಟ್’ ಚಿತ್ರಕ್ಕೆ ಬೈಕಾಟ್ ಬಿಸಿ
ಸನ್ನಿ ಡಿಯೋಲ್ ಅವರ ‘ಜಾಟ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಎಲ್‌ಟಿಟಿಇ ಸಂಘಟನೆಯನ್ನು ತಪ್ಪಾಗಿ ಚಿತ್ರಿಸಿದ ಆರೋಪದಿಂದ ವಿವಾದಕ್ಕೆ ಸಿಲುಕಿದೆ. ಈ ಚಿತ್ರದಲ್ಲಿ ಎಲ್‌ಟಿಟಿಇಯನ್ನು ಉಗ್ರ ಸಂಘಟನೆಯಾಗಿ ತೋರಿಸಿರುವುದು ತಮಿಳು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿವಾದದಿಂದ ಚಿತ್ರದ ಯಶಸ್ಸಿನ ಮೇಲೆ ಏನು ಪರಿಣಾಮ ಬೀರಲಿದೆ.

ಬಾಲಿವುಡ್ ನಟ ಸನ್ನಿ ಡಿಯೋಲ್ (Sunny Deoal) ಅವರು ಕಳೆದ ವರ್ಷ ರಿಲೀಸ್ ಆದ ‘ಗದರ್ 2’ ಚಿತ್ರದಿಂದ ದೊಡ್ಡ ಯಶಸ್ಸು ಕಂಡರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ಚಿತ್ರದಿಂದಾಗಿ ಅವರ ಮೇಲೆ ನಿರ್ಮಾಪಕರಿಗೂ ನಂಬಿಕೆ ಬಂದಿದೆ. ಹೀಗಾಗಿ, ಅನೇಕ ನಿರ್ಮಾಪಕರು ಅವರ ಚಿತ್ರಗಳಿಗೆ ಬಂಡವಾಳ ಹೂಡಲು ಮುಂದೆ ಬರುತ್ತಿದ್ದಾರೆ. ಈಗ ಅವರ ನಟನೆಯ ‘ಜಾಟ್’ ಸಿನಿಮಾ ಏಪ್ರಿಲ್ 10ರಂದು ತೆರೆಗೆ ಬಂದಿದೆ. ಈ ಚಿತ್ರದಲ್ಲಿ ತಂಡದವರು ಮಾಡಿದ ತಪ್ಪು ವಿವಾದಕ್ಕೆ ಕಾರಣಾಗಿದೆ.
ಏಪ್ರಿಲ್ 10ರಂದು ‘ಜಾಟ್’ ಸಿನಿಮಾ ರಿಲೀಸ್ ಆಯಿತು. ತೆಲುಗು ನಿರ್ದೇಶಕ ಗೋಪಿಚಂದ್ ಮಲಿನೇನಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಥಿಯೇಟರ್ನಲ್ಲಿ ಐದು ದಿನಕ್ಕೆ 44 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಾಲಿವುಡ್ ಚಿತ್ರಗಳು ಇತ್ತೀಚೆಗೆ ಕುಂಟುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಅವುಗಳಿಗೆ ಹೋಲಿಕೆ ಮಾಡಿದರೆ ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಈ ಚಿತ್ರದಲ್ಲಿ ‘ದಿ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಲಂ’ ಅಥವಾ ಎಲ್ಟಿಟಿಇನ ಉಗ್ರ ಸಂಘಟನೆ ಆಗಿ ತೋರಿಸಲಾಗಿದೆ.
ಎಲ್ಟಿಟಿಇನ ಬೇರೆ ರೀತಿಯಲ್ಲಿ ತೋರಿಸಿರುವುದಕ್ಕೆ ಈ ಚಿತ್ರವನ್ನು ಬೈಕಾಟ್ ಮಾಡುವ ಆಗ್ರಹವು ಕೇಳಿ ಬಂದಿದೆ. ‘ಶ್ರೀಲಂಕಾದಲ್ಲಿ ತಮಿಳರ ವಿರುದ್ಧದ ವ್ಯವಸ್ಥಿತ ದಬ್ಬಾಳಿಕೆ ಮತ್ತು ನರಮೇಧ ತಡೆಯಲು ಎಲ್‌ಟಿಟಿಇ ಹುಟ್ಟಿಕೊಂಡಿತು. ನಿಮ್ಮ ನಿರೂಪಣೆಗೆ ಸರಿಹೊಂದುವಂತೆ ನಮ್ಮ ಇತಿಹಾಸವನ್ನು ಪುನಃ ಬರೆಯುವುದನ್ನು ನಿಲ್ಲಿಸಿ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಎಲ್‌ಟಿಟಿಇ ಭಯೋತ್ಪಾದಕ ಗುಂಪು ಅಲ್ಲ. ಅದು ದಬ್ಬಾಳಿಕೆಯಿಂದ ಹುಟ್ಟಿದ ಪ್ರತಿರೋಧ ಶಕ್ತಿ. ಈ ಸಂಘಟನೆ ತಮಿಳು ಹಕ್ಕುಗಳು ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿತ್ತು. ಜಾಟ್ ಸ್ವಾತಂತ್ರ್ಯ ಹೋರಾಟವನ್ನು ನಾಚಿಕೆಯಿಲ್ಲದೆ ರಾಕ್ಷಸೀಕರಿಸುತ್ತದೆ. ಇತಿಹಾಸವನ್ನು ತಿರುಚಿದಾಗ ತಮಿಳರು ಮೌನವಾಗಿರುವುದಿಲ್ಲ’ ಎಂದು ಬರೆಯಲಾಗಿದೆ.
ಇದನ್ನೂ ಓದಿ: ಸನ್ನಿ ಡಿಯೋಲ್ ನಿಜವಾದ ಹೆಸರೇನು? ಈ ಹೆಸರು ಬಂದಿದ್ದೇಕೆ?
ಈ ಬಗ್ಗೆ ‘ಜಾಟ್’ ಸಿನಿಮಾ ತಂಡದವರು ಇನ್ನೂ ಪ್ರತಿಕ್ರಿಯಿಸಿಲ್ಲ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ರಣದೀಪ್ ಹೂಡ ಅವರು ರಣತುಂಗ ಹೆಸರಿನ ಶ್ರೀಲಂಕಾ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.