ವಿವಾದಗಳಿಂದ ಕುಖ್ಯಾತಿ ಪಡೆದ ವಿಮರ್ಶಕ, ನಟ ಕಮಾಲ್ ಆರ್. ಖಾನ್ (Kamaal R Khan) ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಇತ್ತೀಚೆಗೆಷ್ಟೇ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಸೆಲೆಬ್ರಿಟಿಗಳು ಮತ್ತು ಮಹಿಳೆಯರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಆರೋಪ ಅವರ ಮೇಲಿದೆ. ದುಬೈಗೆ ತೆರಳಿದ್ದ ಕಮಾಲ್ ಆರ್. ಖಾನ್ ಅವರು ಭಾರತಕ್ಕೆ ವಾಪಸ್ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಅರೆಸ್ಟ್ (KRK Arrest) ಮಾಡಲಾಯಿತು. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಕೋರ್ಟ್ ಆದೇಶ ನೀಡಿದೆ. ಆ ಬಳಿಕ ಕಮಾಲ್ ಆರ್. ಖಾನ್ (ಕೆಆರ್ಕೆ) ಅವರಿಗೆ ಎದೆನೋವು (Chest Pain) ಕಾಣಿಸಿಕೊಂಡಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಶತಾಬ್ದಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ ಎಂದು ವರದಿ ಆಗಿದೆ. ‘ಹಿಂದಿಯ ‘ಲಕ್ಷ್ಮೀ’ ಸಿನಿಮಾಗೆ ಸಂಬಂಧಿಸಿದಂತೆ ನಟ ಅಕ್ಷಯ್ ಕುಮಾರ್ ಮತ್ತು ಚಿತ್ರದ ನಿರ್ಮಾಪಕರ ವಿರುದ್ಧ ಟ್ವೀಟ್ ಮಾಡಿದ್ದಕ್ಕಾಗಿ ಕಮಾಲ್ ಆರ್. ಖಾನ್ ಅವರನ್ನು ಅರೆಸ್ಟ್ ಮಾಡಲಾಗಿದೆ’ ಎಂದು ಕೆಆರ್ಕೆ ಪರ ವಕೀಲರು ಹೇಳಿಕೆ ನೀಡಿದ್ದಾರೆ.
ಅನೇಕ ವಿವಾದಾತ್ಮಕ ಟ್ವೀಟ್ ಮತ್ತು ವಿಡಿಯೋಗಳ ಮೂಲಕ ಕಮಾಲ್ ಆರ್. ಖಾನ್ ಕಿರಿಕ್ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಅದರಿಂದ ಈಗ ಅವರಿಗೆ ಬ್ಯಾಕ್ ಟು ಬ್ಯಾಕ್ ಸಂಕಷ್ಟ ಎದುರಾಗುತ್ತಿದೆ. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್ಗಳನ್ನು ಮಾಡಿದ್ದಕ್ಕಾಗಿ ಕೆಆರ್ಕೆ ವಿರುದ್ಧ ದೂರು ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಮುಂಬೈ ಪೊಲೀಸರಿಗೆ ತಿಳಿಸಿದೆ.
ನಟನಾಗಬೇಕು ಎಂಬುದು ಕಮಾಲ್ ಆರ್. ಖಾನ್ ಅವರ ಉದ್ದೇಶ ಆಗಿತ್ತು. ಆದರೆ ಚಿತ್ರರಂಗದಲ್ಲಿ ಅವರಿಗೆ ಸಕ್ಸಸ್ ಸಿಗಲಿಲ್ಲ. ಅವರೇ ನಿರ್ಮಿಸಿ, ನಟಿಸಿದ್ದ ‘ದೇಶದ್ರೋಹಿ’ ಸಿನಿಮಾ ಹೀನಾಯವಾಗಿ ಸೋತಿತು. ಬಳಿಕ ಬೇರೆಯವರ ಸಿನಿಮಾಗಳನ್ನು ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡುವುದನ್ನೇ ಅವರು ಕಾಯಕ ಮಾಡಿಕೊಂಡಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ಗೆ 10 ಲಕ್ಷಕ್ಕೂ ಅಧಿಕ subscribes ಇದ್ದಾರೆ. ಪದೇಪದೇ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡುವ ಚಾಳಿ ಕಮಾಲ್ ಆರ್. ಖಾನ್ ಅವರಿಗೆ ಇದೆ. ಅದೇ ಕಾರಣಕ್ಕಾಗಿ ಅವರು ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ಕಂಗನಾ ರಣಾವತ್, ಅಭಿಷೇಕ್ ಬಚ್ಚನ್, ಆಮಿರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮುಂತಾದ ಸೆಲೆಬ್ರಿಟಿಗಳ ಬಗ್ಗೆ ಅವರು ಕೆಟ್ಟದಾಗಿ ಟ್ವೀಟ್ ಮಾಡಿದ ಉದಾಹರಣೆಗಳಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:25 am, Wed, 31 August 22