ಸದಾ ಕಾಂಟ್ರವರ್ಸಿ ಮೂಲಕ ಸುದ್ದಿ ಮಾಡುವ ನಟ, ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್. ಖಾನ್ (Kamaal R Khan) ಅವರನ್ನು ಬಂಧಿಸಲಾಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಇಂದು (ಆಗಸ್ಟ್ 30) ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಾಲಿವುಡ್ ನಟ ರಿಷಿ ಕಪೂರ್ (Rishi Kapoor) ಅವರ ಬಗ್ಗೆ ಕಮಾಲ್ ಆರ್. ಖಾನ್ ಆಕ್ಷೇಪಾರ್ಹವಾಗಿ ಟ್ವೀಟ್ ಮಾಡಿದ್ದನ್ನು ಖಂಡಿಸಿ ಶಿವ ಸೇನಾ ಪಕ್ಷದ ರಾಹುಲ್ ಎನ್. ಕನಲ್ ಅವರು ದೂರು ನೀಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಾಲ್ ಆರ್. ಖಾನ್ (Kamaal R Khan Arrest) ಅವರ ಬಂಧನವಾಗಿದೆ. ಸದ್ಯಕ್ಕೆ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ಮಾಡಿದ ಒಂದು ಟ್ವೀಟ್ನಿಂದ ಅವರೀಗ ಸಂಕಷ್ಟ ಎದುರಿಸುವಂತಾಗಿದೆ.
ಚಿತ್ರರಂಗದಲ್ಲಿ ಕಮಾಲ್ ಆರ್. ಖಾನ್ ಅವರಿಗೆ ಯಾವುದೇ ರೀತಿಯ ಯಶಸ್ಸು ಸಿಕ್ಕಿಲ್ಲ. ಹಾಗಾಗಿ ಅವರು ಬೇರೆಯವರ ಸಿನಿಮಾಗಳನ್ನು ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡುವುದನ್ನೇ ಕಾಯಕ ಆಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಅನೇಕ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡುವ ಚಾಳಿಯೂ ಅವರಿಗೆ ಇದೆ. ಇದರಿಂದ ಹತ್ತು ಹಲವು ವಿವಾದಗಳನ್ನು ಅವರು ಮೈ ಮೇಲೆ ಎಳೆದುಕೊಂಡಿದ್ದಾರೆ. ಹಿಂದಿ ಚಿತ್ರರಂಗದ ಲೆಜೆಂಡರಿ ನಟ ರಿಷಿ ಕಪೂರ್ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿದ ತಪ್ಪಿಗೆ ಈಗ ಕಮಾಲ್ ಆರ್. ಖಾನ್ ಬಂಧನ ಆಗಿದೆ.
ಕಮಾಲ್ ಆರ್. ಖಾನ್ ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಅವರು ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ‘ದೇಶದ್ರೋಹಿ’ ಎಂಬ ಸಿನಿಮಾ ಮಾಡಿ, ಅದರಲ್ಲಿ ತಾವೇ ನಟಿಸಿದ್ದರು. ಆದರೆ ಆ ಚಿತ್ರ ಹೀನಾಯವಾಗಿ ಸೋಲು ಕಂಡಿತ್ತು. ಬಾಲಿವುಡ್ನ ಅತಿ ಕೆಟ್ಟ ಸಿನಿಮಾ ಎಂದು ವಿಮರ್ಶಕರು ಟೀಕೆ ಮಾಡಿದ್ದರು.
ಕಂಗನಾ ರಣಾವತ್, ಅಭಿಷೇಕ್ ಬಚ್ಚನ್, ಆಮಿರ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಅನೇಕರ ಬಗ್ಗೆ ಕಮಾಲ್ ಆರ್. ಖಾನ್ ಇಲ್ಲಸಲ್ಲದ ರೀತಿಯಲ್ಲಿ ಟ್ವೀಟ್ ಮಾಡಿದ ಉದಾಹರಣೆ ಇದೆ. ಅವರನ್ನು ಕೆಆರ್ಕೆ ಎಂದು ಕೂಡ ಕರೆಯಲಾಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಅವರು ಪ್ರತಿ ದಿನ ಹಲವು ಪೋಸ್ಟ್ಗಳನ್ನು ಮಾಡುತ್ತಾರೆ. ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಸಿನಿಮಾ ವಿಮರ್ಶೆ ಮಾಡುತ್ತಾರೆ. ‘ರಾಧೆ’ ಚಿತ್ರದ ಬಗ್ಗೆ ಕೆಟ್ಟ ವಿಮರ್ಶೆ ಮಾಡಿದ್ದಕ್ಕೆ ಕೆಆರ್ಕೆ ವಿರುದ್ಧ ಸಲ್ಮಾನ್ ಖಾನ್ ಅವರು ಈ ಹಿಂದೆ ಮಾನನಷ್ಟ ಮೊಕದ್ದಮ್ಮೆ ದಾಖಲಿಸಿದ್ದರು. ಇಂಥ ಲೆಕ್ಕವಿಲ್ಲದಷ್ಟು ಕಿರಿಕ್ಗಳನ್ನು ಕಮಾಲ್ ಆರ್. ಖಾನ್ ಮಾಡಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:31 pm, Tue, 30 August 22