ಪ್ರಚಾರದ ಭರದಲ್ಲಿ ಖಾನ್​ ಮತ್ತು ಕಪೂರ್​ಗಳನ್ನು ಕೆಣಕಿದ ಕಂಗನಾ ರಣಾವತ್​

|

Updated on: May 07, 2024 | 9:25 PM

ಬಿಜೆಪಿ ಅಭ್ಯರ್ಥಿಯಾಗಿ ಮಂಡಿ ಲೋಕಸಭಾ ಕ್ಷೇತ್ರದಿಂದ ನಟಿ ಕಂಗನಾ ರಣಾವತ್​ ಅವರು ಸ್ಪರ್ಧಿಸಿದ್ದಾರೆ. ಚುನಾವಣಾ ಪ್ರಚಾರದ ಭರದಲ್ಲಿ ಅವರು ಕೆಲವೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಿಂದಾಗಿ ಸೋಶಿಯಲ್​ ಮೀಡಿಯಾದಲ್ಲಿ ಅವರು ಟ್ರೋಲ್​ ಆಗಿದ್ದಾರೆ. ಮೊದಲು ಅಮಿತಾಭ್​ ಬಚ್ಚನ್​ ಬಗ್ಗೆ ಹೇಳಿಕೆ ನೀಡಿದ್ದ ಅವರು ಈಗ ಖಾನ್​ ಮತ್ತು ಕಪೂರ್​ ಕುಟುಂಬಗಳ ಕಲಾವಿದರ ತಂಟೆಗೂ ಬಂದಿದ್ದಾರೆ.

ಪ್ರಚಾರದ ಭರದಲ್ಲಿ ಖಾನ್​ ಮತ್ತು ಕಪೂರ್​ಗಳನ್ನು ಕೆಣಕಿದ ಕಂಗನಾ ರಣಾವತ್​
ಕಂಗನಾ ರಣಾವತ್​
Follow us on

ನಟಿ ಕಂಗನಾ ರಣಾವತ್ (Kangana Ranaut) ಇದ್ದಲ್ಲಿ ವಿವಾದಗಳು ಇದ್ದೇ ಇರುತ್ತವೆ. ಈಗ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಹಾಗಾಗಿ ಸಹಜವಾಗಿಯೇ ವಿವಾದಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಅವರು ಅಮಿತಾಭ್​ ಬಚ್ಚನ್​ (Amitabh Bachchan) ಬಗ್ಗೆ ನೀಡಿದ್ದ ಒಂದು ಹೇಳಿಕೆಗೆ ಜನರಿಂದ ವಿರೋಧ ವ್ಯಕ್ತವಾಗಿತ್ತು. ‘ಚಿತ್ರರಂಗದಲ್ಲಿ ಅಮಿತಾಭ್​ ಬಚ್ಚನ್​ ಬಳಿಕ ಅತಿ ಹೆಚ್ಚು ಗೌರವ ಸಿಕ್ಕಿದ್ದು ನನಗೆ’ ಎಂದು ಕಂಗನಾ ಹೇಳಿದ್ದರು. ಅದನ್ನು ನೆಟ್ಟಿಗರು ಒಪ್ಪಿಕೊಂಡಿಲ್ಲ. ಈಗ ಕಂಗನಾ ಮತ್ತೆ ತಕರಾರು ತೆಗೆದಿದ್ದಾರೆ. ಈ ವಾದದಲ್ಲಿ ಖಾನ್​ ಮತ್ತು ಕಪೂರ್​ ಫ್ಯಾಮಿಲಿಯ ನಟ-ನಟಿಯರನ್ನು ಕೂಡ ಕೆಣಕಿದ್ದಾರೆ.

ಕಂಗನಾ ಏನು ಹೇಳಿದ್ದರು?

‘ಇಡೀ ದೇಶಕ್ಕೆ ಅಚ್ಚರಿ ಆಗಿದೆ. ನಾನು ರಾಜಸ್ಥಾನ, ಪಶ್ಚಿಮ ಬಂಗಾಳ, ದೆಹಲಿ, ಮಣಿಪುರ ಎಲ್ಲಿಗೇ ಹೋದರೂ ಭರಪೂರ ಪ್ರೀತಿ ಮತ್ತು ಗೌರವ ಸಿಗುತ್ತಿದೆ. ಹಾಗಾಗಿ ಚಿತ್ರರಂಗದಲ್ಲಿ ಅಮಿತಾಭ್​ ಬಚ್ಚನ್​ ಅವರ ಬಳಿಕ ಹೆಚ್ಚು ಪ್ರೀತಿ ಮತ್ತು ಗೌರವ ಪಡೆದ ವ್ಯಕ್ತಿ ನಾನು ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ’ ಎಂದು ಕಂಗನಾ ರಣಾವತ್​ ಹೇಳಿದ್ದರು.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಕಂಗನಾ ರಣಾವತ್​ ಅವರ ಈ ಹೇಳಿಕೆಯನ್ನು ಅನೇಕರು ಲೇವಡಿ ಮಾಡಿದ್ದರು. ಕಂಗನಾ ಅವರು ತಮ್ಮನ್ನು ತಾವು ಅಮಿತಾಭ್​ ಬಚ್ಚನ್​ಗೆ ಹೋಲಿಸಿಕೊಂಡಿದ್ದನ್ನು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ. ಅದು ಕಂಗನಾ ಅವರ ಗಮನಕ್ಕೂ ಬಂದಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಸೇರಿದ ಬಳಿಕ 2.46 ಕೋಟಿ ರೂಪಾಯಿ ಬೆಲೆಯ ಕಾರು ಖರೀದಿಸಿದ ಕಂಗನಾ

ಟ್ರೋಲ್​ಗಳಿಗೆ ಕಂಗನಾ ಪ್ರತಿಕ್ರಿಯೆ:

‘ಭಾರತದ ವಿವಿಧ ರಾಜ್ಯಗಳಲ್ಲಿ ನನ್ನ ಕಲೆ ಮತ್ತು ರಾಷ್ಟ್ರವಾದಿ ಗುಣಕ್ಕೆ ಗೌರವ ಸಿಗುತ್ತಿದೆ ಎಂದು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕೇವಲ ನನ್ನ ನಟನೆ ಮಾತ್ರವಲ್ಲ, ಮಹಿಳಾ ಸಬಲೀಕರಣಕ್ಕಾಗಿ ನನ್ನ ಕೆಲಸಗಳನ್ನು ಕೂಡ ಜನರು ಹೊಗಳಿದ್ದಾರೆ. ಈ ವಿಚಾರದಲ್ಲಿ ತಕರಾರು ಹೊಂದಿರುವವರಿಗೆ ನಾನೊಂದು ಪ್ರಶ್ನೆ ಕೇಳುತ್ತೇನೆ. ಈ ದೇಶದಲ್ಲಿ ಅಮಿತಾಭ್​ ಬಚ್ಚನ್ ಅವರ ಬಳಿಕ ಅತಿ ಹೆಚ್ಚು ಗೌರವ ಮತ್ತು ಪ್ರೀತಿ ಪಡೆಯುವ ವ್ಯಕ್ತಿ ನಾನು ಅಲ್ಲ ಎಂಬುದಾದರೆ ಮತ್ಯಾರು? ಖಾನ್​ಗಳಾ ಅಥವಾ ಕಪೂರ್​ಗಳಾ? ನಾನು ಕೂಡ ತಿಳಿದುಕೊಳ್ಳಬಹುದು? ನನ್ನನ್ನು ನಾನು ಸರಿಪಡಿಸಿಕೊಳ್ಳುತ್ತೇನೆ’ ಎಂದು ಕಂಗನಾ ಅವರು ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.