ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅವರು ಇತ್ತೀಚೆಗೆ ಸಾಲುಸಾಲು ಸೋಲು ಕಾಣುತ್ತಿದ್ದಾರೆ. ‘ರಾಮ್ ಸೇತು’ ಚಿತ್ರದಿಂದ ದೊಡ್ಡ ಗೆಲುವು ಕಾಣಬೇಕು ಎಂದು ಅವರು ಅಂದುಕೊಂಡಿದ್ದರು. ಆದರೆ, ಇದು ಸಾಧ್ಯವಾಗುವ ಸೂಚನೆ ಸಿಗುತ್ತಿಲ್ಲ. ಈ ಚಿತ್ರ ಆರಂಭದಲ್ಲಿ ಒಳ್ಳೆಯ ಗಳಿಕೆ ಮಾಡಿತ್ತಾದರೂ ಇತ್ತೀಚೆಗೆ ಸಿನಿಮಾ ಡಲ್ ಹೊಡೆದಿದೆ. ಕನ್ನಡದ ‘ಕಾಂತಾರ’ ಚಿತ್ರದ (Kantara Movie) ಅಬ್ಬರದ ಮುಂದೆ ಅಕ್ಷಯ್ ಕುಮಾರ್ ಚಿತ್ರ ಮಾರುಕಟ್ಟೆ ಕಳೆದುಕೊಳ್ಳುತ್ತಿದೆ. ‘ರಾಮ್ ಸೇತು’ ಜತೆಯಲ್ಲಿ ರಿಲೀಸ್ ಆದ ‘ಥ್ಯಾಂಕ್ ಗಾಡ್’ ಚಿತ್ರಕ್ಕೂ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿದ್ದು ‘ಕಾಂತಾರ’ ಚಿತ್ರಕ್ಕೆ ವರದಾನವಾಗಿದೆ.
‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ರಿಲೀಸ್ ಆಯಿತು. ಈ ಚಿತ್ರಕ್ಕೆ ಕನ್ನಡ ಪ್ರೇಕ್ಷಕರಿಂದ ಸಿಕ್ಕ ಪ್ರತಿಕ್ರಿಯೆ ನೋಡಿ ಪರಭಾಷೆಯವರಿಗೂ ಕುತೂಹಲ ಮೂಡಿತು. ಈ ಚಿತ್ರವನ್ನು ಅವರು ಕನ್ನಡದಲ್ಲೇ ಕಣ್ತುಂಬಿಕೊಳ್ಳುವ ಪ್ರಯತ್ನ ಮಾಡಿದರು. ಬಳಿಕ ಪರಭಾಷೆಯಲ್ಲೂ ಈ ಚಿತ್ರವನ್ನು ರಿಲೀಸ್ ಮಾಡಬೇಕು ಎಂಬ ಒತ್ತಾಯ ಹೆಚ್ಚಿತು. ಈ ಕಾರಣಕ್ಕೆ ಸಿನಿಮಾವನ್ನು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡಲಾಯಿತು.
ಹಿಂದಿ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಹಿಂದಿಯಲ್ಲಿ ಮೂರನೇ ವಾರಾಂತ್ಯಕ್ಕೆ 42.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಭಾನುವಾರ (ಅಕ್ಟೋಬರ್ 30) ಈ ಚಿತ್ರ ನಾಲ್ಕು ಕೋಟಿ ರೂಪಾಯಿ ಬಾಚಿಕೊಂಡಿದೆ. ‘ರಾಮ್ ಸೇತು’ ಹಾಗೂ ‘ಥ್ಯಾಂಕ್ ಗಾಡ್’ ಚಿತ್ರದ ಕಲೆಕ್ಷನ್ ದಿನಕಳೆದಂತೆ ಕುಗ್ಗಿದರೆ ರಿಷಬ್ ಚಿತ್ರದ ಕಲೆಕ್ಷನ್ ಹೆಚ್ಚುತ್ತಿದೆ. ಶೀಘ್ರದಲ್ಲೇ ‘ಕಾಂತಾರ’ ಸಿನಿಮಾ ‘ಕೆಜಿಎಫ್’ ಸಿನಿಮಾದ ಹಿಂದಿ ಕಲೆಕ್ಷನ್ ಅನ್ನು ಹಿಂದಿಕ್ಕಿಲಿದೆ.
#Kantara *#Hindi version* proves, yet again, content is KING and audiences are KING MAKERS… Has a rocking Weekend 3… Racing towards HALF-CENTURY… [Week 3] Fri 2.75 cr, Sat 4.10 cr, Sun 4.40 cr. Total: ₹ 42.95 cr. #India biz. Nett BOC. pic.twitter.com/gCu2N4zsBQ
— taran adarsh (@taran_adarsh) October 31, 2022
ಇದನ್ನೂ ಓದಿ: Kantara: ರಜನಿಕಾಂತ್ ಭೇಟಿ ಮಾಡಿ ಆಶೀರ್ವಾದ ಪಡೆದ ರಿಷಬ್ ಶೆಟ್ಟಿ; ‘ಕಾಂತಾರ’ ಟೀಮ್ ಫುಲ್ ಖುಷ್
‘ರಾಮ್ ಸೇತು’ ಹಾಗೂ ‘ಥ್ಯಾಂಕ್ ಗಾಡ್’ ಚಿತ್ರಕ್ಕೆ ವೀಕೆಂಡ್ನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿಲ್ಲ. ಈ ಕಾರಣಕ್ಕೆ ಈ ಚಿತ್ರಗಳ ಬದಲು ‘ಕಾಂತಾರ’ ಚಿತ್ರವನ್ನು ಪ್ರದರ್ಶನ ಮಾಡಲು ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಈಗಲೂ ‘ಕಾಂತಾರ’ ಸಿನಿಮಾ ಮುಂಬೈ ಮೊದಲಾದ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನೂ ಕೆಲ ವಾರ ಸಿನಿಮಾದ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ.