ತನ್ನ ಐಶಾರಾಮಿ ಮನೆ ಬಾಡಿಗೆ ಕೊಟ್ಟ ನಟ, ತಿಂಗಳ ಬಾಡಿಗೆ ಎಷ್ಟು ಲಕ್ಷ?
ಬಾಲಿವುಡ್ನ ಜನಪ್ರಿಯ ನಟ ಕಾರ್ತಿಕ್ ಆರ್ಯನ್ ಒಳ್ಳೆಯ ನಟರಾಗಿರುವ ಜೊತೆಗೆ ಹೂಡಿಕೆದಾರರೂ ಹೌದು. ಮುಂಬೈನಲ್ಲಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿರುವ ಕಾರ್ತಿಕ್ ಆರ್ಯನ್, ಇತ್ತೀಚೆಗೆ ತಮ್ಮ ಐಶಾರಾಮಿ ಮನೆಯೊಂದನ್ನು ಬಾಡಿಗೆಗೆ ನೀಡಿದ್ದಾರೆ. ಬಾಡಿಗೆ ಮೊತ್ತ ಎಷ್ಟು ಲಕ್ಷ?
ಸಿನಿಮಾ ನಟರು ಈಗ ಕೇವಲ ನಟರುಗಳು ಮಾತ್ರವಲ್ಲ ಅವರು ಉದ್ಯಮಿಗಳೂ ಹೌದು. ಬಾಲಿವುಡ್ನಲ್ಲಿ ಈಗ ಚಾಲ್ತಿಯಲ್ಲಿರುವ ಹಲವಾರು ನಟ, ನಟಿಯರು ಕೆಲವು ಸಿನಿಮಾಗಳಲ್ಲಿ ನಟಿಸಿದ ಕೂಡಲೇ ತಾವೇ ಒಂದು ಬ್ಯುಸಿನೆಸ್ಗೆ ಕೈ ಹಾಕಿ ಬಿಡುತ್ತಾರೆ. ಇಲ್ಲವಾದರೆ ಯಾವುದಾದರೂ ಕೆಲವು ಒಳ್ಳೆಯ ಸ್ಟಾರ್ಟ್ ಅಪ್ಗಳನ್ನು ಹುಡುಕಿ ಅದರಲ್ಲಿ ಹಣ ತೊಡಗಿಸುತ್ತಾರೆ. ರಿಯಲ್ ಎಸ್ಟೇಟ್ ಅಂತೂ ಸಿನಿಮಾ ನಟ-ನಟಿಯರ ನೆಚ್ಚಿನ ಹೂಡಿಕೆ ಕ್ಷೇತ್ರ. ನಟ ಕಾರ್ತಿಕ್ ಆರ್ಯನ್ ಸಹ ಮುಂಬೈನಲ್ಲಿ ಹಲವು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಅದರಲ್ಲಿ ಒಂದನ್ನು ಇದೀಗ ಬಾಡಿಗೆಗೆ ನೀಡಿದ್ದಾರೆ.
‘ಪ್ಯಾರ್ ಕಾ ಪಂಚ್ ನಾಮ’ ಸಿನಿಮಾದ ಮೂಲಕ ಎಂಟ್ರಿ ಕೊಟ್ಟು ಆರಂಭದಲ್ಲಿಯೇ ಯಶಸ್ಸು ಕಂಡ ನಟ ಕಾರ್ತಿಕ್ ಆರ್ಯನ್ ಆ ನಂತರ ಹಿಟ್ ಕೊಡಲು ಸೋತಿದ್ದರು. ಆದರೆ ಇತ್ತೀಚೆಗೆ ‘ಭೂಲ್ ಭುಲಯ್ಯ 2’, ‘ಚಂದು ಚಾಂಪಿಯನ್’ ಸಿನಿಮಾಗಳ ಮೂಲಕ ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ. ಪ್ರತಿಭಾವಂತ ನಟ ಕಾರ್ತಿಕ್ ಆರ್ಯನ್, ಉದ್ಯಮಿಯೂ ಆಗಿದ್ದು, ಕೆಲವು ಸಂಸ್ಥೆಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇದರ ಜೊತೆಗೆ ರಿಯಲ್ ಎಸ್ಟೇಟ್ ಮೇಲೂ ಹೂಡಿಕೆ ಮಾಡಿದ್ದಾರೆ.
ಮುಂಬೈನ ಪ್ರಮುಖ ಏರಿಯಾ ಆಗಿರುವ ಜುಹುವಿನಲ್ಲಿರುವ ಸಿದ್ದಿ ವಿನಾಯಕ ಪ್ರೆಸಿಡೆನ್ಸಿ ಹೌಸಿಂಗ್ ಸೊಸೈಟಿ ಅಪಾರ್ಟ್ಮೆಂಟ್ನಲ್ಲಿ ಭವ್ಯವಾದ ಫ್ಲ್ಯಾಟ್ ಒಂದನ್ನು ಕಾರ್ತಿಕ್ ಆರ್ಯನ್ ಖರೀದಿ ಮಾಡಿದ್ದರು. ಈ ಫ್ಲ್ಯಾಟ್ ಅನ್ನು ತಾಯಿ ಮಾಲತಿ ಹಾಗೂ ಕಾರ್ತಿಕ್ ಜಂಟಿಯಾಗಿ ಖರೀದಿ ಮಾಡಿದ್ದರು. ಇದೇ ವರ್ಷಾರಂಭದಲ್ಲಿ ಖರೀದಿಸಿದ್ದ ಈ ಪ್ಲ್ಯಾಟ್ಗೆ ಕಾರ್ತಿಕ್ 17.50 ಕೋಟಿ ರೂಪಾಯಿ ಹಣ ತೆತ್ತಿದ್ದರು. ಇದೀಗ ಈ ಪ್ರಾಪರ್ಟಿಯನ್ನು ತಿಂಗಳ ಬಾಡಿಗೆಗೆ ನೀಡಿದ್ದಾರೆ. ಬಾಡಿಗೆ ಕರಾರು ನೊಂದಣಿ ಆಗಿದ್ದು, ಕಾರ್ತಿಕ್, ತಮ್ಮ ಪ್ರಾಪರ್ಟಿಯನ್ನು 5 ಲಕ್ಷ ರೂಪಾಯಿ ತಿಂಗಳ ಮೊತ್ತಕ್ಕೆ ಬಾಡಿಗೆಗೆ ನೀಡಿದ್ದಾರೆ. ದೊಡ್ಡ ಮೊತ್ತದ ಅಡ್ವಾನ್ಸ್ ಹಣವನ್ನು ಸಹ ಬಾಡಿಗೆದಾರರಿಂದ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಕಾಲ್ಶೀಟ್ ಕೊಡಿಸೋದಾಗಿ ಮೋಸ; ಕರ್ನಾಟಕದಲ್ಲಿ ವಂಚಕ ಅರೆಸ್ಟ್
ಕಳೆದ ವರ್ಷ ಕಾರ್ತಿಕ್ ಆರ್ಯನ್ ಹಾಗೂ ಅವರ ತಾಯಿ ಮಾಲತಿ ಬಾಲಿವುಡ್ನ ಮತ್ತೊಬ್ಬ ಸ್ಟಾರ್ ನಟ ಶಾಹಿದ್ ಕಪೂರ್ ಒಡೆತನದ ಐಶಾರಾಮಿ ಪ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಆ ಫ್ಲ್ಯಾಟ್ನ ತಿಂಗಳ ಬಾಡಿಗೆ ಮೊತ್ತ 7.50 ಲಕ್ಷ ರೂಪಾಯಿಯಾಗಿತ್ತು. ಮೂರು ವರ್ಷಗಳ ಕಾಲಕ್ಕೆ ಬಾಡಿಗೆ ಕರಾರನ್ನು ಮಾಡಿಕೊಳ್ಳಲಾಗಿತ್ತು. ಈಗಲೂ ಸಹ ಕಾರ್ತಿಕ್ ಮತ್ತು ತಾಯಿ ಮಾಲತಿ ಅದೇ ಮನೆಯಲ್ಲಿದ್ದಾರೆ. ಖ್ಯಾತ ಚಿತ್ರ ಸಾಹಿತಿ ಜಾವೆದ್ ಅಖ್ತರ್ ಸಹ ಇದೇ ಅಪಾರ್ಟ್ಮೆಂಟ್ನಲ್ಲಿದ್ದು, ಕಾರ್ತಿಕ್ ಹಾಗೂ ಜಾವೇದ್ ನೆರೆ-ಹೊರೆಯವರು.
ಕಾರ್ತಿಕ್ ಆರ್ಯನ್ ಪ್ರಸ್ತುತ ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಾರ್ತಿಕ್ ಜೊತೆಗೆ ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ. ಈ ಹಿಂದೆ ಕಾರ್ತಿಕ್ ಆರ್ಯನ್, ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಸಂಭಾವನೆ ಹೆಚ್ಚು ಕೇಳಿದರು ಎಂಬ ಕಾರಣಕ್ಕೆ ಕರಣ್ ಜೋಹರ್, ಕಾರ್ತಿಕ್ ಆರ್ಯನ್ ಅನ್ನು ತಮ್ಮ ಚಿತ್ರದಿಂದ ತೆಗೆದು ಹಾಕಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು. ಈಗ ಕಾರ್ತಿಕ್ ಸಹ ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡಿ, ತಾವು ಭರವಸೆಯ ನಾಯಕ ನಟ ಎಂಬುದನ್ನು ಸಾಬೀತು ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ