ಕೇವಲ ಒಂದೂವರೆ ತಿಂಗಳ ಹಿಂದೆ ನಟಿ ಸುಶ್ಮಿತಾ ಸೇನ್ ಮತ್ತು ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ (Lalit Modi) ಅವರು ಅಚ್ಚರಿಯ ಸುದ್ದಿ ನೀಡಿದ್ದರು. ತಾವಿಬ್ಬರು ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಲಲಿತ್ ಮೋದಿ ಬಹಿರಂಗ ಪಡಿಸಿದ್ದರು. ಅದನ್ನು ಕೇಳಿ ಎಲ್ಲರೂ ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದರು. ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ (Sushmita Sen) ಅವರು ಸಿಕ್ಕಾಪಟ್ಟೆ ಆತ್ಮೀಯವಾಗಿ ಪೋಸ್ ನೀಡಿದ ಒಂದಷ್ಟು ಫೋಟೋಗಳು ವೈರಲ್ ಆಗಿದ್ದವು. ಆದರೆ ಈಗ ಇಬ್ಬರ ನಡುವೆ ಬ್ರೇಕಪ್ (Breakup) ಆಗಿದೆ ಎಂದು ಗಾಸಿಪ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿಯನ್ನೂ ನೆಟ್ಟಿಗರು ಹುಡುಕಿದ್ದಾರೆ. ಅಷ್ಟಕ್ಕೂ ಈ ಜೋಡಿ ಹಕ್ಕಿಗಳ ನಡುವೆ ಅಂಥದ್ದೇನಾಯ್ತು ಎಂಬ ಪ್ರಶ್ನೆ ಮೂಡಿದೆ.
ಸುಶ್ಮಿತಾ ಸೇನ್ ಜೊತೆ ಪ್ರೀತಿ ಚಿಗುರಿದಾಗ ಲಲಿತ್ ಮೋದಿ ಸಿಕ್ಕಾಪಟ್ಟೆ ಸಂಭ್ರಮಿಸಿದ್ದರು. ಪ್ರಿಯತಮೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದರು. ಅಷ್ಟೇ ಅಲ್ಲ, ತಮ್ಮ ಪ್ರೊಫೈಲ್ Bio ಸೆಕ್ಷನ್ನಲ್ಲಿ ‘ನನ್ನ ಕ್ರೈಮ್ ಪಾರ್ಟ್ನರ್ ಸುಶ್ಮಿತಾ ಸೇನ್ ಜೊತೆ ಕೊನೆಗೂ ಹೊಸ ಜೀವನ ಪ್ರಾರಂಭಿಸುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು. ಈಗ ಏಕಾಏಕಿ ಆ ಸಾಲನ್ನು ಅವರು ಡಿಲೀಟ್ ಮಾಡಿದ್ದಾರೆ! ಅದನ್ನು ಕಂಡು ಎಲ್ಲರಿಗೂ ಅನುಮಾನ ಮೂಡಿದೆ. ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂಬ ಗಾಸಿಪ್ ಹರಡಲು ಇದೇ ಕಾರಣವಾಗಿದೆ.
46ರ ಪ್ರಾಯದ ಸುಶ್ಮಿತಾ ಸೇನ್ ಅವರು ಇನ್ನೂ ಮದುವೆ ಆಗಿಲ್ಲ. ಆದರೆ ಅವರ ಪ್ರೇಮ ಪುರಾಣ ದೊಡ್ಡದಿದೆ. ಹಲವರ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದರು. ಅವರ ಬಾಳಿನಲ್ಲಿ ಲಲಿತ್ ಮೋದಿ ಎಂಟ್ರಿ ನೀಡುವುದಕ್ಕೂ ಮುನ್ನ 31 ವರ್ಷದ ರೋಹ್ಮನ್ ಶಾಲ್ ಜೊತೆ ಅವರು ರಿಲೇಷನ್ಶಿಪ್ನಲ್ಲಿ ಇದ್ದರು. ನಂತರ ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಅಚ್ಚರಿ ಎಂದರೆ ಕೆಲವೇ ದಿನಗಳ ಹಿಂದೆ ಮತ್ತೆ ಸುಶ್ಮಿತಾ ಸೇನ್ ಹಾಗೂ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆಯಾಗಿ ಕಾಣಿಸಿಕೊಂಡಿದ್ದರು. ‘ಲಲಿತ್ ಮೋದಿ ಎಲ್ಲಿ’ ಎಂದು ಕಮೆಂಟ್ಗಳ ಮೂಲಕ ನೆಟ್ಟಿಗರು ಪ್ರಶ್ನೆ ಮಾಡಿದ್ದರು.
ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ನಡುವಿನ ಸಂಬಂಧ ಮುರಿದು ಬಿದ್ದಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಅವರಿಬ್ಬರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅವರು ಯಾವಾಗ ಮೌನ ಮುರಿಯಲಿದ್ದಾರೆ ಎಂಬ ಕೌತುಕ ಮೂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:15 am, Tue, 6 September 22