
ಬಾಲಿವುಡ್ನ ಅದ್ಭುತ ನಟ ನಾನಾ ಪಟೇಕರ್ ನಿನ್ನೆ (ಅಕ್ಟೋಬರ್ 08) ನಿಧನ ಹೊಂದಿದ್ದಾರೆ. ನಿನ್ನೆ ತಡರಾತ್ರಿ ಅವರ ಅಂತ್ಯಕ್ರಿಯೆಯನ್ನು ನಡೆಸಲಾಗಿದೆ. ಮಹಾರಾಷ್ಟ್ರದ ಕೆಲವು ಪ್ರಮುಖ ರಾಜಕಾರಣಿಗಳು, ನಾನಾ ಪಟೇಕರ್ ಕುಟುಂಬ ಸದಸ್ಯರು, ಚಿತ್ರರಂಗದ ಗಣ್ಯರು, ಇನ್ನೂ ವಿವಿಧ ಕ್ಷೇತ್ರಗಳ ಪ್ರಮುಖರು ನಾನಾ ಪಟೇಕರ್ ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು. ಅಂದಹಾಗೆ ನಾನಾ ಪಟೇಕರ್ ಅವರು ತಮ್ಮ ಅಂತ್ಯಕ್ರಿಯೆ ಹೇಗೆ ಆಗಬೇಕು ಎಂದು ಮೊದಲೇ ಹೇಳಿದ್ದರು. ನಾನಾ, ತಮ್ಮ ಅಂತ್ಯಕ್ರಿಯೆ ಹೇಗಿರಬೇಕೆಂದು ಹೇಳಿದ್ದ ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋ ನೋಡಿದರೆ ಕಣ್ಣಂಚಲ್ಲಿ ನೀರು ಜಿನುಗುವುದು ಖಾತ್ರಿ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾನಾ ಪಟೇಕರ್, ‘ನನ್ನ ಅಂತ್ಯಕ್ರಿಯೆಗೆ 12 ಮನ್ (447 ಕೆಜಿ) ಕಟ್ಟಿಗೆಗಳು ಬೇಕಾಗುತ್ತವೆ. ಅನ್ನು ನಾನು ಸಂಪಾದಿಸಿ ಇರಿಸಿಕೊಂಡಿದ್ದೇನೆ. ಅದೇ ನನ್ನ ಅಂತಿಮ ಆಸ್ತಿ. ಅದಾಗಲೇ ನಾನು ಅದರ (ಸುಡಲು ಕಟ್ಟಿಗೆಗಳು) ವ್ಯವಸ್ಥೆ ಮಾಡಿಕೊಂಡಿದ್ದೇನೆ. ಅವು ಚೆನ್ನಾಗಿವೆ ಒಣಗಿವೆ, ನನ್ನ ಅಂತ್ಯಕ್ರಿಯೆಗೆ ಅವುಗಳನ್ನೇ ಬಳಸಿ ಎಂದು ನಾನು ಈಗಾಗಲೇ ಹೇಳಿದ್ದೇನೆ’ ಎಂದಿದ್ದಾರೆ.
‘ನನ್ನ ಅಂತ್ಯಕ್ರಿಯೆಗೆ ಹಸಿ ಕಟ್ಟಿಗೆಗಳನ್ನು ಬಳಸಬೇಡಿ, ಹಸಿ ಕಟ್ಟಿಗೆಗಳಿಂದ ಹೆಚ್ಚು ಹೊಗೆ ಬರುತ್ತದೆ, ನನ್ನ ಅಂತ್ಯಕ್ರಿಯೆಗೆ ಬಂದ ಕೆಲವರ ಕಣ್ಣಿಗೆ ಅದು ಹೋಗುತ್ತದೆ, ಕಣ್ಣಿನಲ್ಲಿ ನೀರು ಬರುತ್ತದೆ. ನನಗಾಗಿ ಇವರು ಕಣ್ಣೀರು ಹಾಕುತ್ತಿದ್ದಾರೆ ಎಂದು ತಪ್ಪಾಗಿ ಭಾವಿಸಬಹುದು, ಸಾಯುವ ಸಮಯದಲ್ಲಿ ನನಗೆ ಅಂಥಹಾ ತಪ್ಪು ಭಾವನೆಗಳು ಬರುವುದು ಬೇಡ’ ಎಂದು ನಗುತ್ತಾ ಹೇಳಿದ್ದರು ನಾನಾ ಪಟೇಕರ್.
https://t.co/GLqT6VXcD5
— Ram Gopal Varma (@RGVzoomin) October 8, 2026
ಇಡೀ ಬಾಲಿವುಡ್ ಸೆಲೆಬ್ರಿಟಿಗಳು ಒಂದೆಡೆ ಆದರೆ ನಾನಾ ಪಟೇಕರ್ ಅದರ ವಿರುದ್ಧ ದಿಕ್ಕಿನಲ್ಲಿ ಇದ್ದವರಾಗಿದ್ದರು. ಇಂದಿನ ಬಹುತೇಕ ಸೆಲೆಬ್ರಿಟಿಗಳು ಹೆಸರು, ಆಸ್ತಿ, ಹಣ, ಗೌರವ ಎಂದೆಲ್ಲ ತಪಣ ಪಡುತ್ತಿದ್ದರೆ ನಾನಾ ಪಟೇಕರ್ ಅವರ ವ್ಯಕ್ತಿತ್ವ ಭಿನ್ನವಾಗಿತ್ತು. ಅವರಿಗೆ ಅದೆಲ್ಲವೂ ನಗಣ್ಯ ಎನಿಸುತ್ತಿತ್ತು. ತೋಟ, ಕೃಷಿ, ಶೂಟಿಂಗ್, ಸಮಾಜ ಸೇವೆ, ನಾಟಕ, ಸಾಹಿತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸರಳವಾಗಿ ಬದುಕಿದ್ದ, ಸರಳವಾಗಿ ಬದುಕುವುದೇ ಶ್ರೇಷ್ಠವೆಂದು ಹೇಳಿಕೊಟ್ಟಿದ್ದ ನಾನಾ ಪಟೇಕರ್ ಅವರು ತಮ್ಮ ಅಪಾರ ಅಭಿಮಾನಿ ವರ್ಗವನ್ನು, ಸ್ನೇಹಿತರನ್ನು ಅಗಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Fri, 9 October 26