‘ಆರ್ಯನ್ ಖಾನ್ ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಯ್ತು’: ನವಾಬ್ ಮಲಿಕ್ ಗಂಭೀರ ಆರೋಪ
Nawab Malik: ಬಿಜೆಪಿ ಮುಖಂಡ ಮೋಹಿತ್ ಕಂಬೋಜ್ ಅವರು ಶನಿವಾರ (ನ.6) ಸುದ್ದಿಗೋಷ್ಠಿ ನಡೆಸಿ ಎನ್ಸಿಪಿ ನಾಯಕರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಅದರ ಬೆನ್ನಲ್ಲೇ ನವಾಬ್ ಮಲಿಕ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಡ್ರಗ್ಸ್ ಕೇಸ್ ಅಂತಿಮವಾಗಿ ಏನಾಗಲಿದೆಯೋ ಗೊತ್ತಿಲ್ಲ. ಕೆಲವೇ ದಿನಗಳ ಹಿಂದೆ ಆರ್ಯನ್ ಖಾನ್ ಜಾಮೀನು ಪಡೆದುಕೊಂಡು ಹೊರಬಂದಿದ್ದಾರೆ. ಅದರ ಬೆನ್ನಲ್ಲೇ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆಗೆ ಈ ಪ್ರಕರಣದಿಂದ ಹೊರಗುಳಿಯುವಂತೆ ಆದೇಶಿಸಲಾಗಿದೆ. ಸಮೀರ್ ವಾಂಖೆಡೆ ಮೇಲೆ ಅನೇಕ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಲೇ ಇವೆ. ಈಗ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮುಖಂಡ ನವಾಬ್ ಮಲಿಕ್ ಅವರು ಕೆಲವು ಗಂಭೀರ ಆರೋಪ ಮಾಡಿದ್ದಾರೆ. ಆರ್ಯನ್ ಖಾನ್ ಅವರನ್ನು ಕಿಡ್ನಾಪ್ ಮಾಡಿ, ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಮುಖಂಡ ಮೋಹಿತ್ ಕಂಬೋಜ್ ಅಲಿಯಾಸ್ ಮೋಹಿತ್ ಭಾರತೀಯ ಅವರು ಶನಿವಾರ (ನ.6) ಸುದ್ದಿಗೋಷ್ಠಿ ನಡೆಸಿ ಎನ್ಸಿಪಿ ನಾಯಕರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಅದರ ಬೆನ್ನಲ್ಲೇ ನವಾಬ್ ಮಲಿಕ್ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ‘ಆರ್ಯನ್ ಖಾನ್ ಅರೆಸ್ಟ್ ಹಿಂದೆ ಮಾಸ್ಟರ್ ಮೈಂಡ್ ಆಗಿ ಮೋಹಿತ್ ಕೆಲಸ ಮಾಡಿದ್ದಾರೆ. ಹಣಕ್ಕಾಗಿ ಶಾರುಖ್ಗೆ ಬೇಡಿಕೆ ಇಡುವಲ್ಲಿ ಸಮೀರ್ ವಾಂಖೆಡೆ ಮತ್ತು ಮೋಹಿತ್ ಪಾರ್ಟ್ನರ್ ಆಗಿದ್ದಾರೆ’ ಎಂದು ನವಾಬ್ ಮಲಿಕ್ ಹೇಳಿದ್ದಾರೆ.
‘ಡ್ರಗ್ಸ್ ಪಾರ್ಟಿ ನಡೆದಿತ್ತು ಎನ್ನಲಾದ ಐಷಾರಾಮಿ ಹಡಗಿನಲ್ಲಿ ಆರ್ಯನ್ ಖಾನ್ ಅಂದು ಟಿಕೆಟ್ ಪಡೆದಿರಲಿಲ್ಲ. ಪ್ರತೀಕ್ ಗಾಬಾ ಮತ್ತು ಆಮಿರ್ ಫರ್ನೀಚರ್ವಾಲ್ ಅವರು ಆರ್ಯನ್ನನ್ನು ಹಡಗಿಗೆ ಕರೆದುಕೊಂಡು ಹೋಗಿದ್ದರು. ಇದು ಕಿಡ್ನಾಪ್ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಆಗಿದೆ. ಇದರ ಹಿಂದಿರುವ ಮಾಸ್ಟರ್ ಮೈಂಡ್ ಮೋಹಿತ್’ ಎಂದು ನವಾಬ್ ಮಲಿಕ್ ಆರೋಪ ಹೊರಿಸಿದ್ದಾರೆ.
‘ಆರ್ಯನ್ ಅರೆಸ್ಟ್ ಆದ ಬಳಿಕ ನಡೆದ ಘಟನೆಗಳಿಂದ ಸಮೀರ್ ವಾಂಖೆಡೆ ಭಯಗೊಂಡರು. ಹಾಗಾಗಿ ಅ.7ರಂದು ಓಶಿವಾರಾ ಸ್ಮಶಾನದ ಬಳಿ ಮೋಹಿತ್ ಮತ್ತು ಸಮೀರ್ ಭೇಟಿ ಆಗಿದ್ದರು. ಅವರ ಅದೃಷ್ಟಕ್ಕೆ ಅಲ್ಲಿನ ಸಿಸಿಟಿವಿ ಹಾಳಾಗಿತ್ತು. ಹಾಗಾಗಿ ಅದಕ್ಕೆ ಸೂಕ್ತ ಸಾಕ್ಷಿ ಸಿಗಲಿಲ್ಲ’ ಎಂದು ನವಾಬ್ ಮಲಿಕ್ ಹೇಳಿದ್ದಾರೆ.
ಹೀಗೆ ಅನೇಕ ಆರೋಪಗಳನ್ನು ಹೊರಿಸುತ್ತಿರುವ ನವಾಬ್ ಮಲಿಕ್ ವಿರುದ್ಧ ಸಮೀರ್ ವಾಂಖೆಡೆ ತಂದೆ ಧ್ಯಾನದೇವ್ ಕಚ್ರುಜಿ ವಾಂಖೆಡೆ ಅವರು 1.25 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ‘ನವಾಬ್ ಮಲ್ಲಿಕ್ ಅವರು, ಸಮೀರ್ ವಾಂಖೆಡೆ ಕುಟುಂಬವನ್ನು ವಂಚಕ ಕುಟುಂಬ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲ, ಅವರ ಧಾರ್ಮಿಕ ನಂಬಿಕೆಯನ್ನೇ ಪ್ರಶ್ನಿಸಿದ್ದಾರೆ. ವಾಂಖೆಡೆ ಕುಟುಂಬದವನ್ನು ಹಿಂದೂಗಳಲ್ಲ ಎಂದು ಹೇಳಿದ್ದಾರೆ. ಅವರ ಇಡೀ ಕುಟುಂಬದ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ಸಮೀರ್ ವಾಂಖೆಡೆಯ ಕುಟುಂಬದ ಗೌರವ, ಸಾಮಾಜಿಕ ಗೌರವ ಮತ್ತು ಅವರೆಲ್ಲರ ಹೆಸರಿಗೆ ಹಾನಿ ಉಂಟಾಗಿದೆ. ಇದು ಸರಿಪಡಿಸಲಾಗದ ನಷ್ಟವಾಗಿದೆ’ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
ವಿದೇಶಿ ಮಾಧ್ಯಮಗಳಿಂದ ಬಿಗ್ ಪ್ಲ್ಯಾನ್: ಮಗನ ಡ್ರಗ್ಸ್ ಕೇಸ್ ಹಿಂದಿನ ರಹಸ್ಯ ಬಿಚ್ಚಿಡ್ತಾರಾ ಶಾರುಖ್?
Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್ ಖಾನ್ಗೆ ಈಗ ಮನೆಯವರಿಂದಲೇ ಬ್ಲಡ್ ಟೆಸ್ಟ್; ಕಾರಣ ಏನು?