ಭಾರತೀಯ ಚಿತ್ರರಂಗದಲ್ಲಿ ಪ್ರಸ್ತುತ ಇರುವ ಅತ್ಯುತ್ತಮ ಕಲಾವಿದರ ಪಟ್ಟಿಯಲ್ಲಿ ನವಾಜುದ್ದೀನ್ ಸಿದ್ದಿಕಿ ಹೆಸರು ಮೊದಲ ಸಾಲಿನಲ್ಲಿ ಬರುತ್ತದೆ. ಯಾವ ಪಾತ್ರಕ್ಕೂ ಸೈ ಎನ್ನುವ ಅವರ ಅಭಿನಯಕ್ಕೆ ಮಾರುಹೋಗದವರು ವಿರಳ. ಇಂದು (ಮೇ.19) ನಟನ ಜನ್ಮದಿನ. 48ನೇ ವಸಂತಕ್ಕೆ ಕಾಲಿಡುತ್ತಿರುವ ನವಾಜುದ್ದೀನ್, ತಮ್ಮ ಅಭಿನಯದಿಂದ ಹಾಲಿವುಡ್ನಲ್ಲೂ ಛಾಪು ಮೂಡಿಸಿದವರು. ರಾಷ್ಟ್ರೀಯ ನಾಟಕ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ನಟ ಆಕ್ಷನ್ ಚಿತ್ರಗಳಲ್ಲಿ ಮಿಂಚಿದಷ್ಟೇ ರೊಮ್ಯಾಂಟಿಕ್ ಚಿತ್ರಗಳಲ್ಲೂ ಗಮನ ಸೆಳೆದಿದ್ದಾರೆ. ಓಟಿಟಿ ಕ್ಷೇತ್ರದಲ್ಲೂ ನವಾಜುದ್ದೀನ್ (Nawazuddin Siddiqui) ದೊಡ್ಡ ಹೆಸರು. ಕಾರಣ, ಭಾರತದಲ್ಲಿ ವೆಬ್ ಸೀರೀಸ್ ಜನಪ್ರಿಯತೆಗೆ ನಾಂದಿ ಹಾಡಿದ ಸರಣಿಗಳಲ್ಲಿ ಪ್ರಮುಖವಾದ ‘ಸೇಕ್ರೆಡ್ ಗೇಮ್ಸ್’ನ ಪ್ರಮುಖ ಆಕರ್ಷಣೆಯೇ ನವಾಜುದ್ದೀನ್! ಪ್ರಸ್ತುತ ಓಟಿಟಿಯಿಂದ ತುಸು ಅಂತರ ಕಾಯ್ದುಕೊಂಡಿರುವ ನವಾಜುದ್ದೀನ್ ಮತ್ತೆ ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಆದರೆ ನಟ ಕಿರುಚಿತ್ರಗಳಲ್ಲೂ ನಟಿಸಿ ಜನಮನ ಸೂರೆಗೊಂಡಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೇ? ಮಿಸ್ ಮಾಡಲೇಬಾರದ ನವಾಜುದ್ದೀನ್ ನಟಿಸಿರುವ ಕಿರುಚಿತ್ರಗಳು ಇಲ್ಲಿವೆ.
ಬೈಪಾಸ್ (BYPASS)/ 2003: ನವಾಜುದ್ದೀನ್ ಈ ಕಿರುಚಿತ್ರದಲ್ಲಿ ಇರ್ಫಾನ್ ಖಾನ್ ಜತೆ ನಟಿಸಿದ್ದಾರೆ. ಯಾವುದೇ ಡೈಲಾಗ್‌ಗಳಿಲ್ಲದ ಈ ಕಿರುಚಿತ್ರ ನಿಮ್ಮನ್ನು ಮೋಡಿ ಮಾಡುವುದರಲ್ಲಿ ಅನುಮಾನವಿಲ್ಲ.
ಪತಂಗ್: ದಿ ಕೈಟ್/ 2011: ಇಡೀ ನಗರ ಗಾಳಿಪಟ ಉತ್ಸವದಲ್ಲಿ ತೊಡಗಿಸಿಕೊಂಡಿದ್ದಾಗ ಒಂದು ಕುಟುಂಬದ ಏರಿಳಿತದ ಕತೆಯನ್ನು ಇದು ಕಟ್ಟಿಕೊಡುತ್ತದೆ.
ಇದನ್ನೂ ಓದಿ: ‘ಹಿಂದಿ ನಮ್ಮ ರಾಷ್ಟ್ರ ಭಾಷೆ, ಅದಕ್ಕೆ ಗೌರವ ಕೊಡ್ಬೇಕು’: ಮತ್ತೆ ಅದೇ ವಾದ ಮುಂದಿಟ್ಟ ನಟ ಅರ್ಜುನ್ ರಾಮ್ಪಾಲ್
ಕಾರ್ಬನ್: ದಿ ಸ್ಟೋರಿ ಆಫ್ ಟುಮಾರೋ/ 2017: ಸೈನ್ಸ್ ಫಿಕ್ಷನ್ ಮಾದರಿಯ ಈ ಕಿರುಚಿತ್ರವು ಜಾಗತಿಕ ತಾಪಮಾನ ಏರಿಕೆಯ ಕುರಿತ ಕತೆಯನ್ನು ಹೊಂದಿದೆ. ಜಾಕಿ ಭಗ್ನಾನಿ ಮತ್ತು ಪ್ರಾಚಿ ದೇಸಾಯಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಾಲ್ಟ್ ಆಂಡ್ ಪೆಪ್ಪರ್ (SALT N PEPPER): ಮೊಹಿಂದರ್ ಪ್ರತಾಪ್ ಸಿಂಗ್ ನಿರ್ದೇಶನದ ಈ ಚಿತ್ರವು ಶ್ರೀಮಂತರು ಮತ್ತು ಬಡವರು ವಿವಿಧ ವಿಷಯಗಳ ಮೇಲೆ ಹೊಂದಿರುವ ವಿವಿಧ ದೃಷ್ಟಿಕೋನಗಳನ್ನು ಕಟ್ಟಿಕೊಡುತ್ತದೆ. ಇದರಲ್ಲಿ ತೇಜಸ್ವನಿ ಕೊಲ್ಹಾಪುರೆ ಕೂಡ ನಟಿಸಿದ್ದಾರೆ.
ಮೆಹಫುಜ್ (MEHFUZ)/ 2011: ನವಾಜುದ್ದೀನ್ ಚಿತ್ರದಲ್ಲಿ ಶವವನ್ನು ಸುಡುವವನ ಪಾತ್ರದಲ್ಲಿ ನಟಿಸಿದ್ದಾರೆ. ಸಾವಿನ ಕುರಿತ ಆ ಪಾತ್ರದ ಆಲೋಚನೆಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ನವಾಜುದ್ದೀನ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 am, Thu, 19 May 22