ಬಾಲಿವುಡ್ ನಟ ಶಾರುಖ್ ಖಾನ್ಗೆ (Shah Rukh Khan) ದೊಡ್ಡ ಅಭಿಮಾನಿ ಬಳಗವಿದೆ. ಅವರ ಪುತ್ರ ಆರ್ಯನ್ ಖಾನ್ (Aryan Khan) ಕೆಲವು ಸಮಯದ ಹಿಂದೆ ವಿವಾದಾತ್ಮಕ ಕಾರಣಗಳಿಗೆ ಸುದ್ದಿಯಾಗಿದ್ದರು. ನಂತರದಲ್ಲಿ ಆರ್ಯನ್ ಹೆಚ್ಚಾಗಿ ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಐಪಿಎಲ್ ಆಕ್ಷನ್ ಸಂದರ್ಭದಲ್ಲಿ ಆರ್ಯನ್ ಹಾಗೂ ಅವರ ಸಹೋದರಿ ಸುಹಾನಾ ಖಾನ್ ಕೆಕೆಆರ್ ತಂಡದೊಂದಿಗೆ ಕಾಣಿಸಿಕೊಂಡಿದ್ದರು. ಅದು ಸಖತ್ ಸುದ್ದಿಯಾಗಿತ್ತು. ಇದೀಗ ಆರ್ಯನ್ ಖಾನ್ ಮತ್ತೆ ಸುದ್ದಿಯಾಗುತ್ತಿದ್ದಾರೆ. ಈ ಬಾರಿ ಅವರು ಸುದ್ದಿಯಾಗುತ್ತಿರುವುದು ಸಿನಿಮಾ ಸಂಬಂಧಿತ ವಿಚಾರಕ್ಕೆ. ಈ ಕುರಿತು ಪಿಂಕ್ವಿಲ್ಲಾ ವರದಿ ಮಾಡಿದ್ದು, ಆರ್ಯನ್ ಆಪ್ತಮೂಲಗಳನ್ನು ಉಲ್ಲೇಖಿಸಿ ಒಂದಷ್ಟು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದೆ. ಈ ಸುದ್ದಿಗಳನ್ನು ಕೇಳಿದ ಶಾರುಖ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಶಾರುಖ್ ತಮ್ಮ ನಟನೆಯ ಮೂಲಕ ದೇಶ- ವಿದೇಶದಲ್ಲಿ ಹೆಸರು ಮಾಡಿದ್ದರೂ ಕೂಡ ಆರ್ಯನ್ಗೆ ನಟನೆಯಲ್ಲಿ ಅಷ್ಟೇನೂ ಒಲವಿಲ್ಲ. ಅವರು ಸಿನಿಮಾದ ತಾಂತ್ರಿಕ ವಿಭಾಗದಲ್ಲಿ ಇದೀಗ ಅಂಬೆಗಾಲಿಡುತ್ತಿದ್ದಾರೆ.
ಪುತ್ರ ಆರ್ಯನ್ ಕುರಿತು ಈ ಹಿಂದೆ ಶಾರುಖ್ ಹಲವು ಬಾರಿ ಮಾತನಾಡಿದ್ದಾರೆ. ಅದರಲ್ಲಿ ಅವರು ಆರ್ಯನ್ಗೆ ನಟನೆಗಿಂತ ಸಿನಿಮಾದ ಇತರ ವಿಭಾಗಗಳಾದ ನಿರ್ದೇಶನ, ಬರವಣಿಗೆ ಮೊದಲಾದ ತಾಂತ್ರಿಕ ವಿಚಾರಗಳ ಬಗ್ಗೆ ಹೆಚ್ಚು ಒಲವಿದೆ ಎಂದು ತಿಳಿಸಿದ್ದರು. ಇದಕ್ಕೆ ಪೂರಕವೆಂಬಂತೆ ಆರ್ಯನ್ ಖಾನ್ ಇತ್ತೀಚೆಗೆ ಸಿನಿಮಾ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಆರ್ಯನ್ ಖಾನ್ ಯಾವ ವಿಭಾಗದಲ್ಲಿ ಕೆಲಸ ಆರಂಭಿಸಿದ್ದಾರೆ?
ವರದಿಗಳ ಪ್ರಕಾರ ಆರ್ಯನ್ ಖಾನ್ ತಮ್ಮ ಕನಸನ್ನು ಸಾಕಾರಗೊಳಿಸಿಕೊಳ್ಳಲು ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ. ಇದೀಗ ಬರಹಗಾರನಾಗಿರುವ ಅವರು, ತಮ್ಮ ಕಲ್ಪನೆ, ಯೋಚನೆಗಳನ್ನು ಬರಹ ರೂಪಕ್ಕಿಳಿಸುವ ತಯಾರಿ ನಡೆಸಿದ್ದಾರಂತೆ. ವೆಬ್ ಸೀರೀಸ್ ಹಾಗೂ ಸಿನಿಮಾ ಆಗುವ ಸಾಮರ್ಥ್ಯವಿರುವ ಕತೆಯ ತಯಾರಿಯಲ್ಲಿ ಅವರು ನಿರತರಾಗಿದ್ದಾರೆ ಎಂದು ವರದಿಯಾಗಿದೆ.
ಆರ್ಯನ್ ಖಾನ್ ಯೋಚನೆಗಳೆಲ್ಲವೂ ಇನ್ನೂ ಬರವಣಿಗೆಯ ಹಂತದಲ್ಲಿದ್ದಾಗಲೇ ದೊಡ್ಡ ವೇದಿಕೆಯಲ್ಲಿ ತೆರೆ ಕಾಣುವ ನಿರೀಕ್ಷೆಯನ್ನೂ ಹುಟ್ಟುಹಾಕಿವೆ. ಒಟಿಟಿ ದೈತ್ಯ ಅಮೆಜಾನ್ ಪ್ರೈಮ್ನಲ್ಲಿ ವೆಬ್ ಸೀರೀಸ್ ಹಾಗೂ ಶಾರುಖ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್’ ಬ್ಯಾನರ್ನಲ್ಲಿ ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಪ್ರೈಮ್ನಲ್ಲಿ ಸೆಟ್ಟೇರಲಿರುವ ಸೀರೀಸ್ನಲ್ಲಿ ಒಬ್ಬ ಅಭಿಮಾನಿಯ ಜೀವನದ ಕುರಿತು ಕತೆ ಇರಲಿದೆ ಎನ್ನಲಾಗಿದೆ. ಸಿನಿಮಾದ ಕತೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಈ ಎಲ್ಲಾ ಬೆಳವಣಿಗೆಯನ್ನು ಬಲ್ಲ ಆಪ್ತ ಮೂಲದವರೊಬ್ಬರು ಹೇಳಿರುವಂತೆ, ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷವೇ ಯಾವುದಾದರೂ ಸಿನಿಮಾ ಸೆಟ್ಟೇರಲಿದೆ ಎಂದು ಪಿಂಕ್ವಿಲ್ಲಾಗೆ ಹೇಳಿದ್ದಾರೆ. ಪ್ರಸ್ತುತ ಕೆಲವು ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಪ್ರೈಮ್ ಕಡೆಯಿಂದ ಎಲ್ಲವೂ ಓಕೆಯಾದರೆ ಸೆಟ್ಟೇರಲಿದೆಯಂತೆ. ಇತ್ತ ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆಗೆ ಬಿಲಾಲ್ ಸಿದ್ದಿಕಿ ಜತೆ ಆರ್ಯನ್ ಖಾನ್ ಬರವಣಿಗೆ ನಡೆಸುತ್ತಿದ್ದಾರೆ ಎಂದೂ ಹೇಳಲಾಗಿದೆ. ಒಟ್ಟಿನಲ್ಲಿ ಈ ಕುರಿತ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಬಾಲಿವುಡ್ಗೆ ಪದಾರ್ಪಣೆ ಮಾಡಲು ಸಿದ್ಧತೆ ನಡೆಸುತ್ತಿರುವ ಸುಹಾನಾ:
ಶಾರುಖ್ ಪುತ್ರಿ ಸುಹಾನಾ ಖಾನ್ ನಟನೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಅವರೂ ಕೂಡ ಬಾಲಿವುಡ್ಗೆ ಪದಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಜೋಯಾ ಅಖ್ತರ್ ನಿರ್ದೇಶನದ, ನೆಟ್ಫ್ಲಿಕ್ಸ್ಗೆ ತಯಾರಾಗುತ್ತಿರುವ ವೆಬ್ ಸೀರೀಸ್ ಒಂದರಲ್ಲಿ ಸುಹಾನಾ ನಟಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಸುಹಾನಾಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಆಗಾಗ ಅವರು ಫೋಟೋಗಳನ್ನು ಹಂಚಿಕೊಂಡು ಸಖತ್ ಸುದ್ದಿಯಾಗುತ್ತಾರೆ. ಪ್ರಸ್ತುತ ಶಾರುಖ್ ಕುಟುಂಬದ ಕುಡಿಗಳು ಬಾಲಿವುಡ್ ಪದಾರ್ಪಣೆಗೆ ಸಿದ್ಧತೆ ನಡೆಸಿರುವುದು ಬಿಟೌನ್ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಇದನ್ನೂ ಓದಿ:
ರಶ್ಮಿಕಾ ಜತೆಗಿನ ಮದುವೆಯ ಗಾಸಿಪ್ಗೆ ಕೊನೆಗೂ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ; ನಟ ಹೇಳಿದ್ದೇನು?
Samantha: ಕೀಳು ಭಾಷೆಯಲ್ಲಿ ಸಮಂತಾಗೆ ಪ್ರಶ್ನಿಸಿದ ಅಭಿಮಾನಿ; ನಟಿಯ ಉತ್ತರ ಏನಿತ್ತು?
Published On - 12:44 pm, Tue, 22 February 22