ಭಾರತೀಯ ಸಂಗೀತ ಲೋಕಕ್ಕೆ ಪದೇಪದೇ ಕೆಟ್ಟ ಸುದ್ದಿ ಕೇಳಿಬರುತ್ತಿದೆ. ಹಲವು ಗಾಯಕರ ನಿಧನದಿಂದ ಶೋಕದ ವಾತಾವರಣ ನಿರ್ಮಾಣ ಆಗಿದೆ. ಕೆಲವೇ ದಿನಗಳ ಹಿಂದೆ ಕೇರಳದಲ್ಲಿ ಗಾಯಕ ಎಡವ ಬಿಶೀರ್ ಅವರು ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆಯಿತು. ಈಗ ಖ್ಯಾತ ಗಾಯಕ ಕೆಕೆ (ಕೃಷ್ಣಕುಮಾರ್ ಕುನ್ನತ್ ) ಅವರು ಕೂಡ ಹೃದಯಾಘಾತದಿಂದ ನಿಧನರಾಗಿರುವುದು (KK Death) ನೋವಿನ ಸಂಗತಿ. ಹಲವು ಭಾಷೆಗಳಲ್ಲಿ ಹಾಡಿ ಫೇಮಸ್ ಆಗಿದ್ದ ಅವರು ಮಂಗಳವಾರ (ಮೇ 31) ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಆಗ ಅವರಿಗೆ ಆರೋಗ್ಯದಲ್ಲಿ ಏರುಪೇರು ಆಯಿತು. ಕೂಡಲೇ ಅವರು ಹೋಟೆಲ್ಗೆ ಬಂದು ವಿಶ್ರಾಂತಿ ಪಡೆಯಲು ನಿರ್ಧರಿಸಿದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂಬುದು ತಿಳಿದುಬಂದಿದೆ. ಅವರ ನಿಧನಕ್ಕೆ ಕೋಟ್ಯಂತರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ವೃತ್ತಿಬದುಕಿನ ಬಗ್ಗೆ ಕೆಕೆ (Krishnakumar Kunnath) ಅವರು ತಮ್ಮದೇ ನಿಲುವು ಹೊಂದಿದ್ದರು. 1 ಕೋಟಿ ರೂಪಾಯಿ ಸಂಭಾವನೆ (KK Remuneration) ಕೊಟ್ಟರೂ ಕೂಡ ಮದುವೆ ಸಮಾರಂಭಗಳಲ್ಲಿ ಹಾಡುವುದಿಲ್ಲ ಎಂದು ಅವರು ಈ ಹಿಂದೆ ಹೇಳಿದ್ದರು.
ದೊಡ್ಡ ದೊಡ್ಡ ಉದ್ಯಮಿಗಳ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಟಿಗಳು, ಖ್ಯಾತ ಗಾಯಕರು ಮನರಂಜನಾ ಕಾರ್ಯಕ್ರಮ ನೀಡುತ್ತಾರೆ. ಅದಕ್ಕಾಗಿ ಅವರಿಗೆ ಕೈ ತುಂಬ ಸಂಭಾವನೆ ಕೂಡ ಸಿಗುತ್ತದೆ. ಆದರೆ ಕೆಲವು ಸೆಲೆಬ್ರಿಟಿಗಳು ಈ ರೀತಿಯ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವುದಿಲ್ಲ. ಗಾಯಕ ಕೆಕೆ ಕೂಡ ಅದೇ ಸಾಲಿಗೆ ಸೇರುವವರಾಗಿದ್ದರು. ಈ ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಅವರು ಈ ಹಿಂದೆಯೇ ಸ್ಪಷ್ಟವಾಗಿ ತಿಳಿಸಿದ್ದರು.
2008ರಲ್ಲಿ ಹಿಂದುಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಕೆಕೆ ಅವರು ಈ ವಿಚಾರ ತಿಳಿಸಿದ್ದರು. ‘ನೀವು ಯಾವುದಾದರೂ ಆಫರ್ ಅನ್ನು ತಿರಸ್ಕರಿಸಿದ್ದು ಇದೆಯೇ?’ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಕೆಕೆ ಅವರು, ‘ಹೌದು, ಒಂದು ಕೋಟಿ ರೂಪಾಯಿ ಸಂಭಾವನೆ ನೀಡಿದರೂ ಕೂಡ ಮದುವೆ ಸಮಾರಂಭಗಳಲ್ಲಿ ಹಾಡಲು ನಾನು ಒಪ್ಪಿಕೊಳ್ಳುವುದಿಲ್ಲ’ ಎಂದು ಹೇಳಿದ್ದರು.
ಅನೇಕ ಗಾಯಕರು ಸಿನಿಮಾದಲ್ಲಿ ಹೀರೋ ಆದ ಉದಾಹರಣೆ ಇದೆ. ಆದರೆ ಕೆಕೆ ಅವರು ಅಂಥ ಒಂದು ಅವಕಾಶವನ್ನು ಕೂಡ ಸ್ವೀಕರಿಸಿರಲಿಲ್ಲ. ‘ಸಿನಿಮಾದಲ್ಲಿ ನಟಿಸುವಂತೆ ಒಮ್ಮೆ ನನಗೆ ಆಫರ್ ಬಂದಿತ್ತು. ಕಡಿಮೆ ಹಣಕ್ಕಾಗಿ ನಾನು ನಟಿಸಲಾರೆ. ಹಾಗಾಗಿ ಅಂಥ ಆಫರ್ ಅನ್ನು ನಾನು ತಿರಸ್ಕರಿಸಿದ್ದೆ’ ಎಂದು ಕೆಕೆ ಹೇಳಿದ್ದರು. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಹಾಡುಗಳನ್ನು ಹೇಳಿದ್ದ ಕೆಕೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:21 am, Wed, 1 June 22