
ಟಾಲಿವುಡ್ ನಟ, ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಅವರು ಹಿಂದಿ ಚಿತ್ರರಂಗದ ಹೀರೋಗಳ ಬಗ್ಗೆ ಗರಂ ಆಗಿ ಮಾತನಾಡಿದ್ದಾರೆ. ವಿಜಯವಾಡದಲ್ಲಿ ತಿರಂಗ ಯಾತ್ರೆಯಲ್ಲಿ ಭಾಗಿಯಾದ ಅವರು ಬಾಲಿವುಡ್ (Bollywood) ನಟರ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಅವರು ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ. ದೇಶಭಕ್ತಿಯ ವಿಚಾರದಲ್ಲಿ ಬಾಲಿವುಡ್ ಹೀರೋಗಳು ಮಾದರಿ ಅಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ‘ಆಪರೇಷನ್ ಸಿಂದೂರ್’ (Operation Sindoor) ಬಗ್ಗೆ ಬಿ-ಟೌನ್ ನಟರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದನ್ನು ಉಲ್ಲೇಖಿಸಿ ಪವನ್ ಕಲ್ಯಾಣ್ ಈ ರೀತಿ ಮಾತನಾಡಿದ್ದಾರೆ.
‘ಬಾಲಿವುಡ್ ಸ್ಟಾರ್ ನಟರು ಆಪರೇಷನ್ ಸಿಂದೂರ್ ಬಗ್ಗೆ ಒಂದೇ ಒಂದು ಮಾತನ್ನೂ ಹೇಳಲಿಲ್ಲ. ಅವರಿಂದ ದೇಶಭಕ್ತಿ ನಿರೀಕ್ಷಿಸಬೇಡಿ. ಅವರು ನಮ್ಮ ದೇಶವನ್ನು ನಡೆಸುವುದಿಲ್ಲ. ಅವರು ಕೇವಲ ಮನರಂಜನೆ ನೀಡುವವರು ಮಾತ್ರ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮುರಳಿ ನಾಯಕ್ ಅವರಂತಹ ಹುತಾತ್ಮರು ಮಾತ್ರ ನಿಜವಾದ ದೇಶಭಕ್ತರು. ಅಂತಹ ಹೀರೋಗಳಿಂದ ನಾವು ಸ್ಫೂರ್ತಿ ಪಡೆಯಬೇಕು’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
ಭಾರತದ ಒಳಗೆ ನಡೆಯುವ ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನ ನೇರವಾಗಿ ಬೆಂಬಲ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಆ ಬಗ್ಗೆಯೂ ಪವನ್ ಕಲ್ಯಾಣ್ ಅವರು ಮಾತಾಡಿದ್ದಾರೆ. ‘ಕೊಯಮತ್ತೂರ್ ಮತ್ತು ಹೈದರಾಬಾದ್ನಲ್ಲಿ ಹಲವು ವರ್ಷಗಳ ಹಿಂದೆ ಬಾಂಬ್ ಬ್ಲಾಸ್ಟ್ ಆಗಿದ್ದರ ಹಿಂದೆ ಪಾಕಿಸ್ತಾನದ ಕೈವಾಡ ಇತ್ತು. ಈಗ ಆಪರೇಷನ್ ಸಿಂದೂರ್ ಮೂಲಕ ಭಾರತದ ಸೇನೆಯು ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದೆ. ಈ ಸಂದರ್ಭದಲ್ಲಿ ಇಡೀ ದೇಶ ಒಗ್ಗಟ್ಟಿನಿಂದ ನಮ್ಮ ಸೈನ್ಯದ ಜೊತೆ ನಿಲ್ಲಬೇಕು’ ಎಂದಿದ್ದಾರೆ ಪವನ್ ಕಲ್ಯಾಣ್.
ಪಹಲ್ಗಾಮ್ನಲ್ಲಿ ಪಾಕ್ ಉಗ್ರರು ನಡೆಸಿದ ದಾಳಿಗೆ ಭಾರತದ ಅನೇಕರು ಮೃತರಾದರು. ಅದಕ್ಕೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂದೂರ್’ ಹೆಸರಿನಲ್ಲಿ ಪಾಕ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿತು. ಈ ಘಟನೆ ಬಗ್ಗೆ ಬಾಲಿವುಡ್ನ ಹಲವರು ಮಾತನಾಡಲೇ ಇಲ್ಲ. ಟೀಕೆ ಕೇಳಿಬಂದ ಬಳಿಕ ಕೆಲವು ಹೀರೋಗಳು ತಡವಾಗಿ ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಸಿನಿಮಾಗೆ ಬಹಿಷ್ಕಾರದ ಭಯ; ರಾಷ್ಟ್ರ ಧ್ವಜದ ಡಿಪಿ ಹಾಕಿದ ಆಮಿರ್ ಖಾನ್ ನಿರ್ಮಾಣ ಸಂಸ್ಥೆ
ಪಹಲ್ಗಾಮ್ ಉಗ್ರರ ದಾಳಿ ಹಾಗೂ ಆಪರೇಷನ್ ಸಿಂದೂರ್ ಬಗ್ಗೆ ಮೌನ ವಹಿಸಿದ ಹೀರೋಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತವಾಗಿದೆ. ಅಂತಹ ಹೀರೀಗಳ ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.