Rajat Bedi: ಬಾಲಿವುಡ್​ ನಟ ರಜತ್​ ಬೇಡಿ ಕಾರು ಡಿಕ್ಕಿ; ಚಿಂತಾಜನಕ ಸ್ಥಿತಿಯಲ್ಲಿ ಪಾದಚಾರಿ: ಕೇಸ್​ ದಾಖಲು

| Updated By: ಮದನ್​ ಕುಮಾರ್​

Updated on: Sep 07, 2021 | 1:30 PM

Rajat Bedi | Car Accident: ರಾಜೇಶ್​ ಎಂಬ ಪಾದಚಾರಿಗೆ ನಟ ರಜತ್​ ಬೇಡಿ ಕಾರು ಡಿಕ್ಕಿ ಹೊಡೆದಿದೆ. ರಾಜೇಶ್​ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

Rajat Bedi: ಬಾಲಿವುಡ್​ ನಟ ರಜತ್​ ಬೇಡಿ ಕಾರು ಡಿಕ್ಕಿ; ಚಿಂತಾಜನಕ ಸ್ಥಿತಿಯಲ್ಲಿ ಪಾದಚಾರಿ: ಕೇಸ್​ ದಾಖಲು
ರಜತ್ ಬೇಡಿ
Follow us on

ಬಾಲಿವುಡ್​ನ ಖ್ಯಾತ ನಟ ರಜತ್​ ಬೇಡಿ ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಮುಂಬೈನಲ್ಲಿ ಪಾದಚಾರಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ 40ರ ಪ್ರಾಯದ ವ್ಯಕ್ತಿಯ ಸ್ಥಿತಿ ಚಿಂತಾಜನಕ ಆಗಿದೆ. ಕೂಡಲೇ ಅವರನ್ನು ಕೂಪರ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎನ್​ ನಗರ್​ ಪೊಲೀಸ್​ ಠಾಣೆಯಲ್ಲಿ ರಜತ್​ ಬೇಡಿ ವಿರುದ್ಧ ಕೇಸ್​ ದಾಖಲಾಗಿದೆ. ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ರಾಜೇಶ್​ ಎಂದು ಗುರುತಿಸಲಾಗಿದೆ. ಇದುವರೆಗೂ ಪೊಲೀಸರು ರಜತ್​ ಬೇಡಿಯನ್ನು ಬಂಧಿಸಿಲ್ಲ.

ಅಪಘಾತ ನಡೆದ ತಕ್ಷಣ ಗಾಯಾಳುವನ್ನು ರಜತ್​ ಬೇಡಿಯವರೇ ಕೂಪರ್​ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಡಿಎನ್​ ನಗರ್​ ಪೊಲೀಸ್​ ಠಾಣೆಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿದರು ಎನ್ನಲಾಗಿದೆ. ಅಪಘಾತಕ್ಕೆ ಒಳಗಾಗಿರುವ ರಾಜೇಶ್​ ಕುಟುಂಬಕ್ಕೆ ಸಹಾಯ ಮಾಡುವುದಾಗಿ ರಜತ್​ ಬೇಡಿ ಭರವಸೆ ನೀಡಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಿ ಹೋದ ಬಳಿಕ ಅವರು ಮತ್ತೆ ಆಸ್ಪತ್ರೆಯ ಕಡೆಗೆ ತಲೆ ಹಾಕಿಲ್ಲ ಎಂದು ಕುಟುಂಬದವರು ದೂರಿದ್ದಾರೆ.

‘ಸದ್ಯ ಗಾಯಾಳು ರಾಜೇಶ್​ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕ್ಸಿಜನ್​ ಸಪೋರ್ಟ್​ನಲ್ಲಿ ಇದ್ದಾರೆ. ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇದೆ’ ಎಂದು ಕೂಪರ್​ ಆಸ್ಪತ್ರೆಯ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ಸ್ವಲ್ಪ ಹೊತ್ತಿನಲ್ಲಿ ವಾಪಸ್​ ಬರುತ್ತೇನೆ ಅಂತ ಹೇಳಿಹೋದ ರಜತ್​ ಬೇಡಿ ಅವರು ನಂತರ ಮರಳಿ ಬಂದಿಲ್ಲ’ ಎಂದು ರಾಜೇಶ್​ ಪತ್ನಿ ಹೇಳಿದ್ದಾರೆ. ರಾಜೇಶ್​ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

‘ಡಿಎನ್​ ನಗರ್​ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಇನ್ನೂ ಅವರು ರಜತ್​ ಬೇಡಿಯನ್ನು ಬಂಧಿಸಿಲ್ಲ. ನನ್ನ ಗಂಡನಿಗೆ ಏನಾದರೂ ಆದರೆ ಅದಕ್ಕೆ ರಜತ್​ ಬೇಡಿಯೇ ಕಾರಣ’ ಎಂದು ರಾಜೇಶ್​ ಪತ್ನಿ ಅಳಲು ತೋಡಿಕೊಂಡಿದ್ದಾರೆ. ‘ಕೊಯಿ ಮಿಲ್​ ಗಯಾ’, ‘ಖಾಮೋಶ್​’, ‘ದಿ ಟ್ರೇನ್​’, ‘ಪಾರ್ಟ್ನರ್​’, ‘ಅಕ್ಸರ್​’ ಸೇರಿದಂತೆ 40ಕ್ಕೂ ಅಧಿಕ ಸಿನಿಮಾಗಳಲ್ಲಿ ರಜತ್​ ಬೇಡಿ ನಟಿಸಿದ್ದಾರೆ. ಕನ್ನಡದ ‘ಜಗ್ಗುದಾದ’ ಸಿನಿಮಾದಲ್ಲೂ ಅವರೊಂದು ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:

ಖ್ಯಾತ ನಟಿ ಯಶಿಕಾ ಆನಂದ್​ ಭೀಕರ ಕಾರು ಅಪಘಾತ; ಸ್ನೇಹಿತೆ ಸ್ಥಳದಲ್ಲೇ ಸಾವು

ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್​