ಸಹಾಯ ಮಾಡಿದವರ ಹೆಸರು ಹೇಳಲ್ಲ: ಖಡಕ್ ಆಗಿ ತಿಳಿಸಿದ ರಾಜ್​ಪಾಲ್ ಯಾದವ್

ಸಾಲ ತೀರಿಸಲು ಸಾಧ್ಯವಾಗದೇ ಜೈಲು ಸೇರಿದ್ದ ರಾಜ್​ಪಾಲ್ ಯಾದವ್ ಅವರಿಗೆ ಹಲವರು ಸಹಾಯ ಮಾಡಿದ್ದಾರೆ. ಆದರೆ ಯಾರು ಸಹಾಯ ಮಾಡಿದರು? ಎಷ್ಟು ಹಣ ನೀಡಿದರು ಎಂಬುದನ್ನು ರಾಜ್​ಪಾಲ್ ಯಾದವ್ ಬಹಿರಂಗ ಪಡಿಸಿಲ್ಲ. ತಮಗೆ ಸಿಂಪಥಿ ಬೇಡ ಎಂದು ಅವರು ಹೇಳುತ್ತಿದ್ದಾರೆ. ಜಾಮೀನು ಪಡೆದು ಅವರು ಹೊರಗೆ ಬಂದಿದ್ದಾರೆ.

ಸಹಾಯ ಮಾಡಿದವರ ಹೆಸರು ಹೇಳಲ್ಲ: ಖಡಕ್ ಆಗಿ ತಿಳಿಸಿದ ರಾಜ್​ಪಾಲ್ ಯಾದವ್
Rajpal Yadav

Updated on: Feb 19, 2026 | 9:04 PM

ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್ (Rajpal Yadav) ಅವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದರು. ಸದ್ಯಕ್ಕೆ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅವರ ಮೇಲೆ ಬರೋಬ್ಬರಿ 9 ಕೋಟಿ ರೂಪಾಯಿ ಸಾಲ ಇದೆ. ರಾಜ್​ಪಾಲ್ ಯಾದವ್ ಅವರು ಜೈಲಿಗೆ ಹೋಗಿದ್ದಾಗ ಅನೇಕ ಸೆಲೆಬ್ರಿಟಿಗಳು ಹಣದ ನೆರವು ನೀಡಿದರು. ಅದರಿಂದಾಗಿ ಅವರು 1.5 ಕೋಟಿ ರೂಪಾಯಿ ಮರುಪಾವತಿ ಮಾಡಿ, ಜಾಮೀನು (Bail) ಪಡೆಯಲು ಸಾಧ್ಯವಾಯಿತು. ಆದರೆ ತಮಗೆ ಸಹಾಯ ಮಾಡಿದ ಸೆಲೆಬ್ರಿಟಿಗಳ ಹೆಸರನ್ನು ಬಹಿರಂಗಪಡಿಸಲು ರಾಜ್​ಪಾಲ್ ಯಾದವ್ ಅವರು ಹಿಂದೇಟು ಹಾಕಿದ್ದಾರೆ.

ವರದಿಗಳ ಪ್ರಕಾರ ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್, ಅಜಯ್ ದೇವಗನ್, ಸೋನು ಸೂದ್, ಮಿಕಾ ಸಿಂಗ್ ಮುಂತಾದವರು ರಾಜ್​ಪಾಲ್ ಯಾದವ್​ಗೆ ಸಹಾಯ ಮಾಡಿದ್ದಾರೆ. ಆದರೆ ಅವರ ಹೆಸರನ್ನು ರಾಜ್​ಪಾಲ್ ಯಾದವ್ ಬಹಿರಂಗಪಡಿಸಿಲ್ಲ. ಚಿತ್ರರಂಗದ ಸಹಾಯವನ್ನು ಸಾರ್ವಜನಿಕವಾಗಿ ಸಾಬೀತು ಮಾಡುವ ಅವಶ್ಯಕತೆ ಇಲ್ಲ ಎಂದು ರಾಜ್​ಪಾಲ್ ಯಾದವ್ ಹೇಳಿದ್ದಾರೆ.

‘2012ರಲ್ಲಿ ಈ ವಿಷಯ ಮೊದಲು ಮಾಧ್ಯಮಗಳಲ್ಲಿ ಬಂತು. ರಾಜ್​ಪಾಲ್ ಯಾದವ್ ಮೋಸಗಾರ ಅಂತ ಸುದ್ದಿ ಬರೆದರು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ ತಲಾ ಹತ್ತು ಸಿನಿಮಾಗಳಲ್ಲಿ ನಾನು ನಟಿಸಿದ್ದೇವೆ. ಒಂದು ವೇಳೆ ನಾನು ಮೋಸಗಾರ ಆಗಿದ್ದರೆ ಯಾಕೆ ಎಲ್ಲರೂ ನನ್ನ ಜೊತೆ ಕೆಲಸ ಮಾಡುತ್ತಿದ್ದರು? ಅವರೆಲ್ಲ ನನ್ನ ಜೊತೆ ಇದ್ದಾರೆ ಎಂಬುದನ್ನು ಸಾಬೀತು ಮಾಡಬೇಕಿಲ್ಲ. ಎಲ್ಲರೂ ನನ್ನ ಜೊತೆ ಇದ್ದಾರೆ ಎಂಬ ನಂಬಿಕೆ ನನಗಿದೆ’ ಎಂದಿದ್ದಾರೆ ರಾಜ್​ಪಾಲ್ ಯಾದವ್.

ಯಾರೆಲ್ಲ ಸಹಾಯ ಮಾಡಿದ್ದಾರೆ? ಎಷ್ಟು ಹಣವನ್ನು ನೀಡಲಾಗಿದೆ? ಈ ಯಾವುದೇ ಪ್ರಶ್ನೆಗಳಿಗೆ ರಾಜ್​ಪಾಲ್ ಯಾದವ್ ಅವರು ಉತ್ತರ ನೀಡಿಲ್ಲ. ‘ನನಗೆ ಎಲ್ಲರೂ ಮಾಡಿದ ಸಹಾಯವನ್ನು ನಾನು ಗೌರವಿಸುತ್ತೇನೆ. ಆದರೆ ನನಗೆ ಸಿಂಪಥಿ ಬೇಡ’ ಎಂದು ರಾಜ್​ಪಾಲ್ ಯಾದವ್ ಅವರು ಖಡಕ್ ಆಗಿ ಹೇಳಿದ್ದಾರೆ. ಮಾರ್ಚ್ 18ರ ತನಕ ಅವರಿಗೆ ಜಾಮೀನು ನೀಡಲಾಗಿದೆ.

ಇದನ್ನೂ ಓದಿ: ಇಂದಿನ ಹಲವು ಸ್ಟಾರ್​​ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್​ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ?

ಇತ್ತೀಚೆಗೆ ಜೈಲಿನ ಅನುಭವ ಹಂಚಿಕೊಂಡಿದ್ದ ರಾಜ್​ಪಾಲ್ ಯಾದವ್ ಅವರು, ‘ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಇರುವಂತೆ ಜೈಲಿನ ಒಳಗೆ ಧೂಮಪಾನ ಮಾಡಲು ಪ್ರತ್ಯೇಕವಾದ ಜಾಗ ಇರಬೇಕು. ಜೈಲುಗಳನ್ನು ಬದಲಾವಣೆಯ ಕೇಂದ್ರದ ರೀತಿ ಪರಿಗಣಿಸಬೇಕು. ತಮ್ಮನ್ನು ಬದಲಾಯಿಸಿಕೊಳ್ಳಲು ಖೈದಿಗಳಿಗೆ ಅವಕಾಶ ನೀಡಬೇಕು’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.