ಖ್ಯಾತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ (Raju Srivastava) ಅವರು ಬುಧವಾರ (ಸೆ.21) ಇಹಲೋಕ ತ್ಯಜಿಸಿದರು. ಅವರ ನಿಧನದಿಂದಾಗಿ ಅಭಿಮಾನಿಗಳಿಗೆ, ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ತೀವ್ರ ನೋವಾಗಿದೆ. ಸಾವಿನ (Raju Srivastava Death) ಸಂದರ್ಭದಲ್ಲಿ ಸಾಮಾನ್ಯವಾಗಿ ಯಾರೂ ಕೂಡ ಕೆಟ್ಟದಾಗಿ ಮಾತನಾಡುವುದಿಲ್ಲ. ಆದರೆ ಅದೇಕೋ ಗೊತ್ತಿಲ್ಲ ಕಾಮಿಡಿಯನ್ ರೋಹನ್ ಜೋಶಿ (Rohan Joshi) ಅವರು ರಾಜು ಶ್ರೀವಾಸ್ತವ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ತುಂಬ ಕೆಟ್ಟ ಪದಗಳನ್ನು ಬಳಸಿ ಅವರು ನಿಂದಿಸಿದ್ದಾರೆ. ಅವರ ಈ ವರ್ತನೆಗೆ ನೆಟ್ಟಿಗರು ಛಾಟಿ ಬೀಸಿದ್ದಾರೆ. ನಿಮಗೆ ಕನಿಷ್ಠ ಸೌಜನ್ಯವೂ ಇಲ್ಲವಲ್ಲ ಎಂದು ಜನರು ಕಿಡಿಕಾರಿದ್ದಾರೆ. ಬಳಿಕ ತಮ್ಮ ಕಮೆಂಟ್ ಬಗ್ಗೆ ರೋಹನ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.
ಸ್ಟ್ಯಾಂಡಪ್ ಕಾಮಿಡಿ ಲೋಕದಲ್ಲಿ ರಾಜು ಶ್ರೀವಾಸ್ತವ ಅವರು ತುಂಬ ಫೇಮಸ್ ಆಗಿದ್ದರು. ಆದರೆ ಅವರು ಹೊಸ ಕಲಾವಿದರ ಬಗ್ಗೆ ಉತ್ತಮ ಭಾವನೆ ಹೊಂದಿರಲಿಲ್ಲ ಎಂಬುದು ರೋಹನ್ ಜೋಶಿ ಅವರ ತಕರಾರು. ‘ಹೊಸ ಅಲೆಯ ಸ್ಟ್ಯಾಂಡಪ್ ಕಾಮಿಡಿ ಬಗ್ಗೆ ಅವರಿಗೆ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಅವಹೇಳನ ಮಾಡುತ್ತಿದ್ದರು. ಅವರು ಕೆಲವು ಒಳ್ಳೆಯ ಜೋಕ್ಗಳನ್ನು ಹೇಳಿರಬಹುದು. ಆದರೆ ಹಾಸ್ಯದ ಸ್ಪಿರಿಟ್ ಏನೆಂಬುದು ಅವರಿಗೆ ಅರ್ಥ ಆಗಲಿಲ್ಲ. ಅವರು ತೊಲಗಲಿ’ ಎಂದು ರೋಹನ್ ಜೋಶಿ ಕಮೆಂಟ್ ಮಾಡಿದ್ದರು.
ಸಾವಿನ ಸಂದರ್ಭದಲ್ಲಿ ಈ ರೀತಿ ಕಟುವಾಗಿ ಕಮೆಂಟ್ ಮಾಡಿದ್ದನ್ನು ನೆಟ್ಟಿಗರು ವಿರೋಧಿಸಿದ್ದಾರೆ. ಭಾರಿ ವಿರೋಧ ವ್ಯಕ್ತವಾದ ಬಳಿಕ ಆ ಕಮೆಂಟ್ ಅನ್ನು ರೋಹನ್ ಜೋಶಿ ಡಿಲಿಟ್ ಮಾಡಿದ್ದಾರೆ. ‘ಒಂದು ನಿಮಿಷದ ಕೋಪದ ನಂತರ ಇದು ನನ್ನ ವೈಯಕ್ತಿಕ ಭಾವನೆಯ ದಿನ ಅಲ್ಲ ಎಂಬುದನ್ನು ತಿಳಿದುಕೊಂಡು ಕಮೆಂಟ್ ಡಿಲಿಟ್ ಮಾಡಿದ್ದೇನೆ. ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ’ ಎಂದು ರೋಹನ್ ಜೋಶಿ ಸ್ಪಷ್ಟನೆ ನೀಡಿದ್ದಾರೆ.
ರಾಜು ಶ್ರೀವಾಸ್ತವ ನಿಧನಕ್ಕೆ ಕಾರಣ:
ಆಗಸ್ಟ್ 10ರಂದು ಜಿಮ್ನಲ್ಲಿ ವರ್ಕೌಟ್ ಮಾಡುವಾಗ ರಾಜುಗೆ ಹೃದಯಾಘಾತ ಆಯಿತು. ನಂತರ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಒಟ್ಟು 41 ದಿನಗಳ ಕಾಲ ರಾಜು ಶ್ರೀವಾಸ್ತವ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ದಾಖಲಾದ ತಕ್ಷಣವೇ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಕೆಲವು ದಿನಗಳ ಬಳಿಕ ಅವರ ಮಿದುಳು ನಿಷ್ಕ್ರಿಯವಾಗಿದೆ ಎಂಬುದು ತಿಳಿದುಬಂದಿತು. ಆ ಬಳಿಕ ಅಭಿಮಾನಿಗಳಲ್ಲಿ ಮತ್ತು ಕುಟುಂಬದವರಲ್ಲಿ ಚಿಂತೆ ಹೆಚ್ಚಿತ್ತು. ಕಡೆಗೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:38 am, Thu, 22 September 22