ಗೋಮಾಂಸ ತಿನ್ನುವ ರಣಬೀರ್ ಕಪೂರ್​ಗೆ ರಾಮನ ಪಾತ್ರ: ಶುರುವಾಯ್ತು ಟ್ರೋಲ್

ನಟ ರಣಬೀರ್ ಕಪೂರ್ ಅವರು ಗೋಮಾಂಸ ತಿನ್ನುವುದಾಗಿ ಒಪ್ಪಿಕೊಂಡಿದ್ದರು. ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಆದ್ದರಿಂದ ‘ರಾಮಾಯಣ’ ಸಿನಿಮಾದಲ್ಲಿ ಅವರು ರಾಮನ ಪಾತ್ರ ಮಾಡುತ್ತಿರುವುದನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಗಾಯಕಿ ಚಿನ್ಮಯಿ ಶ್ರೀಪಾದ್ ಅವರು ಟ್ವೀಟ್ ಮಾಡುತ್ತಿದ್ದಾರೆ. ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಗೋಮಾಂಸ ತಿನ್ನುವ ರಣಬೀರ್ ಕಪೂರ್​ಗೆ ರಾಮನ ಪಾತ್ರ: ಶುರುವಾಯ್ತು ಟ್ರೋಲ್
Ranbir Kapoor, Sai Pallavi

Updated on: Jul 06, 2025 | 8:33 AM

ದೊಡ್ಡ ಬಜೆಟ್​ನಲ್ಲಿ ‘ರಾಮಾಯಣ’ (Ramayana) ಸಿನಿಮಾ ಮೂಡಿಬರುತ್ತಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಆಯಿತು. ಈ ಚಿತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಅವರು ರಾಮನ ಪಾತ್ರವನ್ನು ಮಾಡುತ್ತಿದ್ದಾರೆ. ಈ ಪಾತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಾಗಲೇ ಕೆಲವರು ತಕರಾರು ತೆಗೆದಿದ್ದರು. ರಣಬೀರ್ ಕಪೂರ್ ಅವರ ರಿಯಲ್ ಲೈಫ್ ವ್ಯಕ್ತಿತ್ವವೇ ಅದಕ್ಕೆ ಕಾರಣ. ನಟಿ ಕಂಗನಾ ರಣಾವತ್ ಕೂಡ ರಣಬೀರ್ ಕಪೂರ್ ಆಯ್ಕೆಯನ್ನು ವಿರೋಧಿಸಿದ್ದರು. ಈಗ ಇನ್ನೊಂದು ವಿವಾದ ಶುರುವಾಗಿದೆ. ತಾನು ಗೋಮಾಂಸ (Beef) ಪ್ರಿಯ ಎಂದು ರಣಬೀರ್ ಕಪೂರ್ ಹೇಳಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ.

ಈ ಮೊದಲು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಣಬೀರ್ ಕಪೂರ್ ಅವರು ಈ ಬಗ್ಗೆ ಮಾತನಾಡಿದ್ದರು. ತಮಗೆ ಗೋಮಾಂಸ ಇಷ್ಟ ಎಂದು ಅವರು ಹೇಳಿದ್ದರು. ಈ ವಿಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. ಅದನ್ನು ಇಟ್ಟುಕೊಂಡು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿಂತೆ ಪರ-ವಿರೋಧದದ ಚರ್ಚೆ ಶುರುವಾಗಿದೆ.

ಗೋಮಾಂಸ ತಿನ್ನುವ ನಟನಿಂದ ರಾಮನ ಪಾತ್ರ ಮಾಡಿಸುವುದು ಎಷ್ಟು ಸರಿ? ಬಾಲಿವುಡ್ ಮಂದಿಗೆ ಏನಾಗಿದೆ ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ರಣಬೀರ್ ಕಪೂರ್ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಚಿತ್ರತಂಡದವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸಿನಿಮಾಗೆ ನಿತೇಶ್ ತಿವಾರಿ ನಿರ್ದೇಶನ ಮಾಡುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಬಂಡವಾಳ ಹೂಡಿದ್ದಾರೆ. ನಿರ್ಮಾಣದಲ್ಲಿ ಯಶ್ ಪಾಲುದಾರರಾಗಿದ್ದಾರೆ.

ಗಾಯಕಿ ಚಿನ್ಮಯಿ ಶ್ರೀಪಾದ್ ಅವರು ರಣಬೀರ್ ಕಪೂರ್ ಪರವಾಗಿ ಪೋಸ್ಟ್ ಮಾಡಿದ್ದಾರೆ. ‘ದೇವರ ಹೆಸರನ್ನು ಬಳಸಿಕೊಳ್ಳುವ ಒಬ್ಬ ಬಾಬಾಜೀ ಅತ್ಯಾಚಾರಿ ಆಗಬಹುದು ಹಾಗೂ ಆತ ಆಗಾಗ ಪೆರೋಲ್ ಪಡೆಯಬಹುದು. ಆದರೂ ಯಾರು ಏನು ತಿನ್ನುತ್ತಾರೆ ಎಂಬುದೇ ದೊಡ್ಡ ಸಮಸ್ಯೆ’ ಎಂದು ಅವರು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 1000 ಕೋಟಿ ಬಜೆಟ್, ‘ರಾಮಾಯಣ’ ನಿರ್ಮಾಪಕ ನಮಿತ್ ಮಲ್ಹೋತ್ರಾ ಯಾರು ಗೊತ್ತೆ?

‘ರಾಮಾಯಣ’ ಸಿನಿಮಾ 2 ಪಾರ್ಟ್​ಗಳಲ್ಲಿ ಮೂಡಿಬರುತ್ತಿದೆ. 2026ರ ದೀಪಾವಳಿ ಹಬ್ಬಕ್ಕೆ ಮೊದಲ ಪಾರ್ಟ್ ತೆರೆಕಾಣಲಿದೆ. 2ನೇ ಪಾರ್ಟ್ 2027ರ ದೀಪಾವಳಿಗೆ ಬರಲಿದೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ರವಿ ದುಬೆ, ಸನ್ನಿ ಡಿಯೋಲ್, ಕಾಜಲ್ ಅಗರ್​ವಾಲ್, ವಿವೇಕ್ ಅಗ್ನಿಹೋತ್ರಿ, ಅರುಣ್ ಗೋವಿಲ್ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.