‘ಸೈರಾಟ್’ ಸುಂದರಿಗೆ ಅಭಿಮಾನಿಗಳಿಂದ ಕಿರಿಕಿರಿ, ಹಾಗೇನಿಲ್ಲ ಎಂದ ನಟಿ, ನಿಜಕ್ಕೂ ನಡೆದಿದ್ದೇನು?
Rinku Rajguru: ‘ಸೈರಾಟ್’ ಸಿನಿಮಾದ ನಟಿ ರಿಂಕು ರಾಜ್ಗುರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಅಭಿಮಾನಿಗಳಿಗೆ ಕಿರುಕುಳ ಅನುಭವಿಸಿದ್ದಾರೆ. ಘಟನೆ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮರಾಠಿಯ ‘ಸೈರಾಟ್’ (Sairat) ಸಿನಿಮಾ ಬಗ್ಗೆ ತಿಳಿಯದ ಸಿನಿಮಾ ಪ್ರೇಮಿಗಳು ಕಡಿಮೆ. ನಾಗರಾಜ್ ಮಂಜುಳೆ ನಿರ್ದೇಶಿಸಿ ರಿಂಕು ರಾಜ್ಗುರು ಹಾಗೂ ಆಕಾಶ್ ನಟಿಸಿದ್ದ ಈ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಮಹಾರಾಷ್ಟ್ರ ಮಾತ್ರವೇ ಅಲ್ಲದೆ ಹಲವು ರಾಜ್ಯಗಳಲ್ಲಿ ಇಂದಿಗೂ ಈ ಸಿನಿಮಾದ ಅಭಿಮಾನಿಗಳಿದ್ದಾರೆ. ಸಿನಿಮಾದ ನಾಯಕಿ ರಿಂಕು ಅಂತೂ ಒಂದೇ ದಿನಕ್ಕೆ ಸ್ಟಾರ್ ಆಗಿಬಿಟ್ಟರು. ‘ಸೈರಾಟ್’ ಸಿನಿಮಾದಲ್ಲಿ ನಟಿಸಿದಾಗ ರಿಂಕು ಇನ್ನೂ ಹತ್ತನೇ ತರಗತಿಗೆ ಕಾಲಿಟ್ಟಿರಲಿಲ್ಲ. ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಸ್ಟಾರ್ ಆದ ರಿಂಕು, ಸಿನಿಮಾದಲ್ಲಿನ ತಮ್ಮ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು (ತೀರ್ಪುಗಾರರ ವಿಶೇಷ ಪ್ರಶಸ್ತಿ) ಸಹ ಪಡೆದುಕೊಂಡರು.
ಈಗ ಮರಾಠಿ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ರಿಂಕು ರಾಜ್ಗುರು ಒಬ್ಬರು. ಇತ್ತೀಚೆಗಷ್ಟೆ ರಿಂಕು ರಾಜ್ಗುರುಗೆ ತಮ್ಮ ಅಭಿಮಾನಿಗಳಿಂದಲೇ ಕಿರಿ-ಕಿರಿ ಉಂಟಾಗಿದೆ. ರಿಂಕು ರಾಜ್ಗುರು ಇತ್ತೀಚೆಗೆ ಮಹಾರಾಷ್ಟ್ರದ ಜಲಗಾವ್ನಲ್ಲಿ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ರಿಂಕು ಬರುತ್ತಾರೆಂದು ತಿಳಿದು ಭಾರಿ ದೊಡ್ಡ ಸಂಖ್ಯೆಯಲ್ಲಿ ಜನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ರಿಂಕು ಕಾರ್ಯಕ್ರಮಕ್ಕೆ ಬರುವಾಗ ಅಭಿಮಾನಿಗಳು ಅವರಿಗೆ ಮುತ್ತಿಗೆ ಹಾಕಿದರು. ಈ ವೇಳೆ ಭಾರಿ ನೂಕಾಟ-ತಳ್ಳಾಟ ಸಹ ಆಗಿ ರಿಂಕು ಕೆಳಗೆ ಬಿದ್ದರು ಎನ್ನಲಾಗುತ್ತಿದೆ.
ಇದರಿಂದ ಸಿಟ್ಟಾದ ರಿಂಕು ಅಭಿಮಾನಿಗಳ ಮೇಲೆ ತುಸು ಖಾರವಾಗಿ ಮಾತನಾಡಿದ್ದಾರೆ, ಈ ಘಟನೆಯ ವಿಡಿಯೋ ಸಹ ಹರಿದಾಡುತ್ತಿದ್ದು, ರಿಂಕು ತುಸು ಗಂಭೀರವಾಗಿ, ‘ನಿಮ್ಮ ಮಗಳು, ತಂಗಿ ಆಗಿದ್ದಿದ್ದರೆ ನೀವು ಹೀಗೆ ಮಾಡುತ್ತಿದ್ದಿರಾ? ಎಂದು ಗುಂಪಿನಲ್ಲಿರುವ ವ್ಯಕ್ತಿಯೊಬ್ಬರನ್ನು ಪ್ರಶ್ನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ:Rinku Rajguru: ಸೈರಾಟ್ ಚೆಲುವೆ ರಿಂಕು ಈಗ ಹೀಗೆ ಬದಲಾಗಿದ್ದಾರೆ ನೋಡಿ
ಇದೀಗ ಘಟನೆ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಿಂಕು ರಾಜ್ಗುರು, ‘ನಾನು ಇತ್ತೀಚೆಗೆ ಜಲಗಾವ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದೆ. ಅಲ್ಲಿ ನಾನು ಅಭಿಮಾನಿಗಳ ಮೇಲೆ ಕಿರುಚಾಡಿದೆ, ಬೈದೆ ಎಂದೆಲ್ಲ ಸುದ್ದಿಗಳು ಹರಿದಾಡುತ್ತಿವೆ. ನಿಜವಾಗಿಯೂ ಹಾಗೇನೂ ಆಗಿಲ್ಲ. ವೇದಿಕೆ ಮೇಲೆ, ಕಾರ್ಯಕ್ರಮದಲ್ಲಿ ನನಗೆ ಕೆಟ್ಟ ಅನುಭವವೇನೂ ಆಗಲಿಲ್ಲ. ಆದರೆ ಪ್ರತಿನಿಧಿಯೊಬ್ಬ ನನ್ನ ಕೈ ಹಿಡಿದು ಎಳೆದಿದ್ದಕ್ಕೆ ಆತನಿಗೆ ನಾನು ಗೌರವಪೂರ್ವಕವಾಗಿಯೇ ತಿಳಿಸಿ ಹೇಳಿದೆ. ನನ್ನ ಪ್ರೇಕ್ಷಕರ ಮೇಲೆ, ಅಭಿಮಾನಿಗಳ ಮೇಲೆ ನನಗೆ ಪೂರ್ತಿ ನಂಬಿಕೆ ಇದೆ. ನಾನು ಅವರನ್ನು ಸದಾ ಗೌರವಿಸುತ್ತೇನೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ’ ಎಂದು ರಿಂಕು ಮನವಿ ಮಾಡಿದ್ದಾರೆ.
ರಿಂಕು ರಾಜ್ಗುರು, ಕನ್ನಡದಲ್ಲಿ ‘ಮನಸು ಮಲ್ಲಿಗೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ‘ಸೈರಾಟ್’ನ ರೀಮೇಕ್ ಆಗಿದೆ. ರಿಂಕು ರಾಜ್ಗುರು ಪ್ರಸ್ತುತ ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ‘ಕಿಲ್ಲಾರ್’ ಹೆಸರಿನ ಮರಾಠಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹಿಂದಿಯ ‘ಪಿಂಗಾ’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ‘ಆಶಾ’ ಎಂಬ ಮರಾಠಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:07 am, Thu, 7 March 24