Riteish Deshmukh: ‘ನಾನು ಅಂಥ ಸಿನಿಮಾಗಳನ್ನು ಮಾಡಿದ್ದೀನಿ, ಆದರೆ ನಾಚಿಕೆ ಅನಿಸಿಲ್ಲ’: ರಿತೇಶ್ ದೇಶಮುಖ್ ನೇರನುಡಿ
ಅಡಲ್ಟ್ ಕಾಮಿಡಿ ಸಿನಿಮಾ ಮಾಡಿದಾಗ ತಮ್ಮ ಮನೆಯ ಸದಸ್ಯರು ಏನಂದುಕೊಳ್ಳುತ್ತಾರೆ ಎಂಬ ಚಿಂತೆಯನ್ನು ರಿತೇಶ್ ದೇಶಮುಖ್ ಮಾಡಿಲ್ಲ. ಆ ಬಗ್ಗೆ ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.
ನಟ ರಿತೇಶ್ ದೇಶಮುಖ್ (Riteish Deshmukh) ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬಾಲಿವುಡ್ನಲ್ಲಿ (Bollywood) ಅವರು ಸ್ಟಾರ್ ನಟನಾಗಿ ಮಿಂಚಿದ್ದಾರೆ. ಮರಾಠಿ ಚಿತ್ರರಂಗದಲ್ಲೂ ಅವರು ಫೇಮಸ್. ಎಲ್ಲ ಬಗೆಯ ಪ್ರೇಕ್ಷಕರನ್ನೂ ರಂಜಿಸಬೇಕು ಎಂಬುದು ಅವರ ಪಾಲಿಸಿ. ಬರೀ ಹೀರೋ ಆಗಿ ಕಾಣಿಸಿಕೊಳ್ಳಲಷ್ಟೇ ಅವರು ಸೀಮಿತ ಆಗಿಲ್ಲ. ವಿಲನ್ ಪಾತ್ರದಲ್ಲಿಯೂ ಮಿಂಚಿದ್ದಾರೆ. ಅದೂ ಸಾಲದೆಂಬಂತೆ ಅಡಲ್ಟ್ ಕಾಮಿಡಿ (Adult Comedy) ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಇವುಗಳನ್ನು ಸೆxಕ್ಸ್ ಕಾಮಿಡಿ ಸಿನಿಮಾ ಎಂದೂ ಕರೆಯುತ್ತಾರೆ. ಲೈಂಗಿಕತೆಗೆ ಸಂಬಂಧಿಸಿದ ಕಥೆಯನ್ನೇ ಇಟ್ಟುಕೊಂಡು ಪ್ರೇಕ್ಷಕರನ್ನು ನಗಿಸುವುದು ಇಂಥ ಚಿತ್ರಗಳ ಸೂತ್ರ. ರಿತೇಶ್ ದೇಶಮುಖ್ ಕೂಡ ಅಡಲ್ಟ್ ಕಾಮಿಡಿ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಆ ಬಗ್ಗೆ ತಮಗೆ ನಾಚಿಕೆ ಇಲ್ಲ ಎಂದು ಅವರು ಹೇಳಿದ್ದಾರೆ.
ಕೆಲವು ನಟರು ಸಿನಿಮಾ ಒಪ್ಪಿಕೊಳ್ಳುವಾಗ ತಮ್ಮ ಮನೆಯವರ ಅನುಮತಿಯನ್ನೂ ಪಡೆದುಕೊಳ್ಳುತ್ತಾರೆ. ಅಪ್ಪ-ಅಮ್ಮ, ಹೆಂಡತಿ-ಮಕ್ಕಳ ಅಭಿಪ್ರಾಯವನ್ನೂ ಪರಿಗಣಿಸುತ್ತಾರೆ. ಆದರೆ ರಿತೇಶ್ ದೇಶಮುಖ್ ಆ ರೀತಿ ಅಲ್ಲ. ಅಡಲ್ಟ್ ಕಾಮಿಡಿ ಸಿನಿಮಾ ಮಾಡಿದಾಗಲೂ ಕೂಡ ಮಕ್ಕಳು ಏನಂದುಕೊಳ್ಳುತ್ತಾರೆ ಎಂಬ ಚಿಂತೆಯನ್ನು ಅವರು ಮಾಡಿಲ್ಲ. ಆ ಬಗ್ಗೆ ಇತ್ತೀಚೆಗಿನ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.
‘ನಾಲ್ಕು-ಐದು ಸೆxಕ್ಸ್ ಕಾಮಿಡಿ ಸಿನಿಮಾದಲ್ಲಿ ಅಭಿನಯಿಸಿದ ನಟ ನಾನೊಬ್ಬನೇ. ಭವಿಷ್ಯದಲ್ಲಿ ಈ ಬಗ್ಗೆ ನನ್ನ ಮಗ ಏನು ಎಂದುಕೊಳ್ಳಬಹುದು ಅಂತ ನಾನು ಯೋಚಿಸಿಲ್ಲ. ನಾನು ಅಂಥ ಸಿನಿಮಾ ಮಾಡಿದಾಗ ನನ್ನ ತಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದರು. ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ನನ್ನ ತಂದೆ-ತಾಯಿ ಕೂಡ ನನಗೆ ಹೇಳಿಲ್ಲ. ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಅವರು ನನಗೆ ನೀಡಿದ್ದರು’ ಎಂದು ಇಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ರಿತೇಶ್ ದೇಶಮುಖ್ ಹೇಳಿದ್ದಾರೆ.
2003ರಿಂದಲೂ ರಿತೇಶ್ ದೇಶಮುಖ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಶೋಗಳನ್ನು ನಿರೂಪಿಸಿದ ಅನುಭವವೂ ಅವರಿಗೆ ಇದೆ. ‘ಮಸ್ತಿ’, ‘ಗ್ರ್ಯಾಂಡ್ ಮಸ್ತಿ’, ‘ಕ್ಯಾ ಕೂಲ್ ಹೈ ಹಮ್’, ‘ಕ್ಯಾ ಸೂಪರ್ ಕೂಲ್ ಹೈ ಹಮ್’ ಇವು ರಿತೇಶ್ ದೇಶಮುಖ್ ನಟಿಸಿದ ಅಡಲ್ಟ್ ಕಾಮಿಡಿ ಸಿನಿಮಾಗಳು.
2012ರಲ್ಲಿ ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಜೊತೆ ರಿತೇಶ್ ದೇಶಮುಖ್ ಮದುವೆ ಆದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶಮುಖ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಮದುವೆ ಬಳಿಕ ಜೆನಿಲಿಯಾ ಅವರು ನಟನೆಯಿಂದ ದೂರ ಉಳಿದಿದ್ದರು. ಈಗ ಅವರು ಕಮ್ಬ್ಯಾಕ್ ಮಾಡುತ್ತಿದ್ದಾರೆ.