ಕಿರಣ್ ರಾವ್ ಅವರು ನಿರ್ದೇಶನ ಮಾಡಿರುವ ‘ಲಾಪತಾ ಲೇಡೀಸ್’ (Laapataa Ladies) ಸಿನಿಮಾಗೆ ಅನೇಕರಿಂದ ಉತ್ತಮ ವಿಮರ್ಶೆ ಸಿಕ್ಕಿದೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಸಾಧಾರಣ ಕಲೆಕ್ಷನ್ ಮಾಡಿದೆ. ಆದರೆ ಹಲವು ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮಾರ್ಚ್ 1ರಂದು ಚಿತ್ರಮಂದಿರಗಳಲ್ಲಿ ‘ಲಾಪತಾ ಲೇಡೀಸ್’ ಸಿನಿಮಾ ತೆರೆಕಂಡಿತು. ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್ (Sachin Tendulkar) ಕೂಡ ಈಗ ಈ ಸಿನಿಮಾವನ್ನು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ನೋಡಿದ ಬಳಿಕ ಅವರು ತಮ್ಮ ವಿಮರ್ಶೆ (Laapataa Ladies Review) ಹಂಚಿಕೊಂಡಿದ್ದಾರೆ. ಇದು ಎಲ್ಲರೂ ನೋಡಲೇಬೇಕಾದ ಸಿನಿಮಾ ಎಂದು ಸಚಿನ್ ತೆಂಡುಲ್ಕರ್ ಅವರು ಶಿಫಾರಸು ಮಾಡಿದ್ದಾರೆ. ಅಷ್ಟರಮಟ್ಟಿಗೆ ಅವರಿಗೆ ಈ ಚಿತ್ರ ಇಷ್ಟವಾಗಿದೆ.
‘ಲಾಪತಾ ಲೇಡೀಸ್’ ಸಿನಿಮಾಗೆ ಆಮಿರ್ ಖಾನ್ ಅವರು ಬಂಡವಾಳ ಹೂಡಿದ್ದಾರೆ. ಅವರ ಮಾಜಿ ಪತ್ನಿ ಕಿರಣ್ ರಾವ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹಲವು ವರ್ಷಗಳ ಬಳಿಕ ಅವರು ಆ್ಯಕ್ಷನ್-ಕಟ್ ಹೇಳಿದ ಸಿನಿಮಾ ಎಂಬ ಕಾರಣದಿಂದಲೂ ಈ ಚಿತ್ರ ನಿರೀಕ್ಷೆ ಮೂಡಿಸಿತ್ತು. ಆಮಿರ್ ಖಾನ್ ಮತ್ತು ಕಿರಣ್ ರಾವ್ ಜೊತೆ ಸಚಿನ್ ತೆಂಡುಲ್ಕರ್ ಅವರಿಗೆ ಸ್ನೇಹ ಇದೆ. ತಮ್ಮ ಸ್ನೇಹಿತರ ಸಿನಿಮಾವನ್ನು ಅವರು ಹೊಗಳಿದ್ದಾರೆ.
A big-hearted fable set in small-town India that speaks to one at so many levels. I loved @LaapataaLadies for its delightful story, powerhouse performances and the subtlety with which it delivered important social messages so cleverly, without overt preaching. A must-watch for… pic.twitter.com/FDEb3KiS5Q
— Sachin Tendulkar (@sachin_rt) March 10, 2024
‘ಭಾರತದ ಸಣ್ಣ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ಇಟ್ಟುಕೊಂಡು ಮಾಡಿದ ಈ ಸಿನಿಮಾ ಹಲವು ವಿಷಯಗಳನ್ನು ಹೇಳುತ್ತದೆ. ನನಗೆ ಈ ಸಿನಿಮಾ ತುಂಬ ಇಷ್ಟವಾಯ್ತು. ಇದರ ಕಥೆ, ಕಲಾವಿದರ ಅಭಿನಯ ಹಾಗೂ ಬೋಧನೆ ಮಾಡದ ರೀತಿಯಲ್ಲಿ ಸೂಕ್ಷ್ಮವಾಗಿ ಸಾಮಾಜಿಕ ಸಂದೇಶ ನೀಡಿರುವುದು ಚೆನ್ನಾಗಿದೆ. ಇದು ಎಲ್ಲರೂ ನೋಡಬೇಕಿರುವ ಸಿನಿಮಾ. ನನ್ನನ್ನು ನಂಬಿ. ಈ ಸಿನಿಮಾ ನೋಡುವಾಗ ನೀವು ನಗುತ್ತೀರಿ, ಅಳುತ್ತೀರಿ. ಈ ಸಿನಿಮಾದಲ್ಲಿನ ಪಾತ್ರಗಳು ಗುರಿ ಮುಟ್ಟಿದಾಗ ನೀವು ಕೂಡ ಖುಷಿಪಡುತ್ತೀರಿ. ನನ್ನ ಸ್ನೇಹಿತರಾದ ಕಿರಣ್ ರಾವ್ ಮತ್ತು ಆಮಿರ್ ಖಾನ್ ಅವರಿಗೆ ದೊಡ್ಡ ಅಭಿನಂದನೆ’ ಎಂದು ಸಚಿನ್ ತೆಂಡುಲ್ಕರ್ ಎಕ್ಸ್ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: Laapataa Ladies Review: ಈ ಕಾಲಕ್ಕೆ ಬೇಕಾದ ಮಹತ್ವಪೂರ್ಣ ಸಿನಿಮಾ ‘ಲಾಪತಾ ಲೇಡೀಸ್’
ಕೆಲವೇ ದಿನಗಳ ಹಿಂದೆ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ‘ಲಾಪತಾ ಲೇಡೀಸ್’ ಸಿನಿಮಾವನ್ನು ಹೊಗಳಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ‘ಎಂಥ ಸುಂದರವಾದ, ತಮಾಷೆಯಾದ, ಪ್ರಾಮಾಣಿಕವಾದ ಚಿತ್ರವನ್ನು ಕಿರಣ್ ರಾವ್ ಅವರು ಮಾಡಿದ್ದಾರೆ. ಅನೇಕ ವಿಚಾರಗಳನ್ನು ಅವರು ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಅದಕ್ಕೂ ಮಿಗಿಲಾಗಿ ಇದು ಒಂದು ಭಾವನಾತ್ಮಕವಾದ ಸಿನಿಮಾ. ಅದ್ಭುತವಾದ ಲವ್ ಸ್ಟೋರಿ ಇದೆ. ಪ್ರತಿ 10 ನಿಮಿಷಕ್ಕೊಮ್ಮೆ ಸತ್ಯಗಳನ್ನು ಮುಖಕ್ಕೆ ಹೊಡೆದಂತೆ, ಹಾಸ್ಯದ ಧಾಟಿಯಲ್ಲಿ ಹೇಳಲಾಗಿದೆ. ಲಾಪತಾ ಲೇಡೀಸ್ ಸಿನಿಮಾ ನೋಡಿ ನಾನು ಪುಟ್ಟ ಮಗುವಿನಂತೆ ಅತ್ತಿದ್ದೇನೆ. ಈ ಅವಿಸ್ಮರಣೀಯ ಸಿನಿಮಾವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ’ ಎಂದು ಅನುರಾಗ್ ಕಶ್ಯಪ್ ಅವರು ಬರೆದುಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.