Saeed Akhtar Mirza: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಕಸ ಎಂದ ನಿರ್ದೇಶಕ ಸಯಿದ್ ಅಖ್ತರ್ ಮಿರ್ಜಾ; ಮತ್ತೆ ಜೋರಾಯ್ತು ಚರ್ಚೆ
The Kashmir Files | Vivek Agnihotri: ಸಯಿದ್ ಅಖ್ತರ್ ಮಿರ್ಜಾ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಡಿಫರೆಂಟ್ ಸಿನಿಮಾಗಳ ಮೂಲಕ ಅವರು ಗಮನಾರ್ಹ ಪ್ರಯತ್ನಗಳನ್ನು ಮಾಡಿದ್ದಾರೆ.
2022ರಲ್ಲಿ ಭಾರಿ ಚರ್ಚೆಗೆ ಒಳಗಾದ ಸಿನಿಮಾ ಎಂದರೆ ಅದು ‘ದಿ ಕಾಶ್ಮೀರ್ ಫೈಲ್ಸ್’. ಈ ಸಿನಿಮಾ ಬಗ್ಗೆ ಅನೇಕರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಇಷ್ಟಾದರೂ ಇದರ ಕುರಿತ ಪರ-ವಿರೋಧದ ಮಾತುಕತೆ ಇನ್ನೂ ನಿಂತಿಲ್ಲ. ಒಂದಿಲ್ಲೊಂದು ಕಾರಣಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾದ ವಿಷಯ ಮತ್ತೆ ಮುನ್ನೆಲೆಗೆ ಬರುತ್ತಿದೆ. ಕೆಲವೇ ದಿನಗಳ ಹಿಂದೆ ಗೋವಾ ಸಿನಿಮೋತ್ಸವದ ಜ್ಯೂರಿ ಕಮಿಟಿ ಅಧ್ಯಕ್ಷ ನಡಾವ್ ಲಪಿಡ್ ಅವರು ಈ ಚಿತ್ರದ ಬಗ್ಗೆ ಕಟು ಟೀಕೆ ಮಾಡಿದ್ದರು. ಆ ಕುರಿತ ಚರ್ಚೆ ಮುಕ್ತಾಯ ಆಗುತ್ತಿದ್ದಂತೆಯೇ ಖ್ಯಾತ ನಿರ್ದೇಶಕ ಸಯಿದ್ ಅಖ್ತರ್ ಮಿರ್ಜಾ (Saeed Akhtar Mirza) ಅವರು ಮತ್ತೊಂದು ಕಿಡಿ ಹೊತ್ತಿಸಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಅವರು ಕಸ (garbage) ಎಂದು ಕರೆದಿದ್ದಾರೆ! ತಾವು ಈ ರೀತಿ ಹೇಳುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
ಸಯಿದ್ ಅಖ್ತರ್ ಮಿರ್ಜಾ ಅವರಿಗೆ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಪ್ಯಾರಲಲ್ ಸಿನಿಮಾಗಳ ಪ್ರಕಾರದಲ್ಲಿ ಅವರು ಗಮನಾರ್ಹ ಪ್ರಯತ್ನಗಳನ್ನು ಮಾಡಿದ್ದಾರೆ. ಕೆಲವು ಧಾರಾವಾಹಿಗಳನ್ನೂ ಅವರು ನಿರ್ದೇಶಿಸಿದ್ದಾರೆ. ‘ದಿ ಇಂಡಿಯನ್ ಎಕ್ಸ್ಪ್ರೆಸ್’ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕುರಿತು ಅವರು ಮಾತನಾಡಿದ್ದಾರೆ. ಪ್ರಸ್ತುತ ಸಿನಿಮಾ ಜಗತ್ತು ಯಾವ ರೀತಿ ಆಗಿದೆ ಎಂಬ ವಿಚಾರದ ಕುರಿತು ಅನಿಸಿಕೆ ಹಂಚಿಕೊಳ್ಳುವಾಗ ಈ ವಿಷಯ ಪ್ರಸ್ತಾಪ ಮಾಡಿದ್ದಾರೆ.
ಸಯಿದ್ ಅಖ್ತರ್ ಮಿರ್ಜಾ ಹೇಳಿದ್ದೇನು?
‘ನನ್ನ ಪ್ರಕಾರ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಒಂದು ಕಸ. ಹಾಗಂತ ಕಾಶ್ಮೀರಿ ಪಂಡಿತರ ವಿಷಯ ಕಸವೇ? ಖಂಡಿತಾ ಇಲ್ಲ. ಆ ವಿಷಯ ನಿಜ. ಮುಸ್ಲಿಮರು ಕೂಡ ಗುಪ್ತಚರ ಸಂಸ್ಥೆಗಳ ಬಲೆಗೆ ಸಿಲುಕಿದ್ದರು. ಮುಖ್ಯ ವಿಷಯ ಏನೆಂದರೆ, ಪಕ್ಷಪಾತ ಮಾಡಬಾರದು. ಮನುಷ್ಯರಾಗಿ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ’ ಎಂದು ಸಯಿದ್ ಅಖ್ತರ್ ಮಿರ್ಜಾ ಹೇಳಿದ್ದಾರೆ. ಇವರ ಹೇಳಿಕೆಗೆ ಅನೇಕರಿಂದ ಖಂಡನೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Swara Bhasker: ‘ದಿ ಕಾಶ್ಮೀರ್ ಫೈಲ್ಸ್’ ಕೆಟ್ಟ ಸಿನಿಮಾ ಎಂಬ ಹೇಳಿಕೆಗೆ ಸಹಮತ ಸೂಚಿಸಿದ ನಟಿ ಸ್ವರಾ ಭಾಸ್ಕರ್
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಗ್ಗೆ ಅನೇಕ ಸೆಲೆಬ್ರಿಟಿಗಳು ಅಸಮಾಧಾನ ವ್ಯಕ್ತಪಡಿಸಿದ ನಿದರ್ಶನ ಇದೆ. ಪ್ರತಿ ಬಾರಿ ಈ ರೀತಿ ಆದಾಗಲೂ ಚಿತ್ರತಂಡದವರು ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಈ ಬಾರಿ ಸಯಿದ್ ಅಖ್ತರ್ ಮಿರ್ಜಾ ಅವರ ಹೇಳಿಕೆಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:36 pm, Mon, 19 December 22