ಸಾಯಿ ಪಲ್ಲವಿ ಅಥವಾ ಜಾನ್ವಿ ಕಪೂರ್; ಯಾರಿಗೆ ಒಲಿಯಲಿದೆ ಸೀತಾ ಮಾತೆ ಪಾತ್ರ?
ಜಾನ್ವಿ ಕಪೂರ್ ಅವರು ಈ ಹಿಂದೆ ‘ಬವಾಲ್’ ಸಿನಿಮಾದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಜೊತೆ ಕೆಲಸ ಮಾಡಿದ್ದರು. ಹಾಗಾಗಿ ರಾಮಾಯಣ ಆಧರಿತ ಸಿನಿಮಾದಲ್ಲಿ ಅವರನ್ನೇ ಈಗ ಸೀತಾ ಮಾತೆಯ ಪಾತ್ರಕ್ಕೆ ಪರಿಗಣಿಸಲಾಗುತ್ತಿದೆ ಎಂಬ ಸುದ್ದಿ ಹಬ್ಬಿದೆ. ಇನ್ನೊಂದೆಡೆ ಸಾಯಿ ಪಲ್ಲವಿ ಅವರು ಹೆಸರ ಕೂಡ ಕೇಳಿಬರುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿಗಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ.
ರಾಮಾಯಣದ ಕಥೆಯನ್ನು ಆಧರಿಸಿ ಈಗಾಗಲೇ ಹಲವು ಸಿನಿಮಾಗಳು ಮೂಡಿಬಂದಿವೆ. ಹಾಗಿದ್ದರೂ ಈ ಕಥೆಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಪುರಾಣಗಳನ್ನು ಆಧರಿಸಿದ ಸಿನಿಮಾಗಳನ್ನು ಪ್ರೇಕ್ಷಕರು ಯಾವಾಗಲೂ ಇಷ್ಟಪಡುತ್ತಾರೆ. ಹಾಗಾಗಿ ಬಾಲಿವುಡ್ನಲ್ಲಿ ಈಗ ರಾಮಾಯಣ (Ramayan) ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ನಿತೇಶ್ ತಿವಾರಿ ಅವರು ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಪಾತ್ರವರ್ಗದ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ಸೀತಾ ಮಾತೆಯ ಪಾತ್ರಕ್ಕೆ ಯಾರು ಆಯ್ಕೆ ಆಗುತ್ತಾರೆ ಎಂಬ ಕೌತುಕ ಮೂಡಿದೆ. ಸಾಯಿ ಪಲ್ಲವಿ (Sai Pallavi) ಮತ್ತು ಜಾನ್ವಿ ಕಪೂರ್ (Janhvi Kapoor) ಅವರ ಹೆಸರುಗಳು ಕೇಳಿಬರುತ್ತಿವೆ.
ರಾಮನ ಪಾತ್ರ ಮಾಡಲು ಈಗಾಗಲೇ ರಣಬೀರ್ ಕಪೂರ್ ಆಯ್ಕೆ ಆಗಿದ್ದಾರೆ. ಇನ್ನುಳಿದ ಪಾತ್ರಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಪಾತ್ರವರ್ಗದಲ್ಲಿ ಬದಲಾವಣೆ ಆಗಿದೆ ಎಂಬ ಸುದ್ದಿ ಕೇಳಿಬಂದಿದೆ. ಸಾಯಿ ಪಲ್ಲವಿ ಬದಲಿಗೆ ಜಾನ್ವಿ ಕಪೂರ್ ಅವರನ್ನು ಆಯ್ಕೆ ಮಾಡಿಕೊಳ್ಳಲು ನಿರ್ದೇಶಕ ನಿತೇಶ್ ತಿವಾರಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾದಲ್ಲಿ ವಿಭೀಷಣನ ಪಾತ್ರ ಮಾಡ್ತಾರಾ ವಿಜಯ್ ಸೇತುಪತಿ?
ಜಾನ್ವಿ ಕಪೂರ್ ಮತ್ತು ನಿತೇಶ್ ತಿವಾರಿ ಅವರು ಈಗಾಗಲೇ ‘ಬವಾಲ್’ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಹಾಗಾಗಿ ಅವರಿಬ್ಬರ ನಡುವೆ ಹೊಂದಾಣಿಕೆ ಇದೆ. ಆ ಕಾರಣದಿಂದಲೇ ನಿತೇಶ್ ಅವರು ಸೀತಾ ಮಾತೆಯ ಪಾತ್ರಕ್ಕೆ ಜಾನ್ವಿ ಕಪೂರ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ‘ಪಿಂಕ್ ವಿಲ್ಲಾ’ ವರದಿ ಮಾಡಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: ಹನುಮಂತನ ಪಾತ್ರ ಮಾಡ್ತಾರಾ ಸನ್ನಿ ಡಿಯೋಲ್? ‘ರಾಮಾಯಣ’ ಚಿತ್ರದ ಬಗ್ಗೆ ಬಿಗ್ ನ್ಯೂಸ್
ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಾರೆ ಎಂಬ ಗಾಸಿಪ್ ಇದೆ. ವಿಭೀಷಣನ ಪಾತ್ರದಲ್ಲಿ ವಿಜಯ್ ಸೇತುಪತಿ, ಆಂಜನೇಯನಾಗಿ ಸನ್ನಿ ಡಿಯೋಲ್, ಕೈಕೇಯಿ ಪಾತ್ರದಲ್ಲಿ ಲಾರಾ ದತ್ತ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿದೆ. ಈ ಯಾವ ವಿಚಾರಗಳ ಬಗ್ಗೆಯೂ ನಿರ್ದೇಶಕ ನಿತೇಶ್ ತಿವಾರಿ ಅವರು ಬಾಯಿ ಬಿಟ್ಟಿಲ್ಲ. ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡಬಾರದು ಎಂದು ಕೆಲವರು ತಕರಾರು ತೆಗೆದಿದ್ದಾರೆ. ಕಂಗನಾ ರಣಾವತ್ ಅವರು ಈ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ