ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರಿಗೆ ಕೊಲೆ ಬೆದರಿಕೆ ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನವರು ಸಲ್ಮಾನ್ ಖಾನ್ಗೆ ಕೊಲೆ ಹಾಕುವ ಬೆದರಿಕೆ ಹಾಕಿದ್ದಾರೆ. 2018ರಲ್ಲಿ ಲಾರೆನ್ಸ್ ಗ್ಯಾಂಗ್ನಿಂದ ಸಲ್ಮಾನ್ ಅವರನ್ನು ಹತ್ಯೆ ಮಾಡುವ ಪ್ರಯತ್ನವೂ ನಡೆದಿತ್ತು. ಈ ಕಾರಣಕ್ಕೆ ಸಲ್ಮಾನ್ ಖಾನ್ ಅವರು ಈ ಬಾರಿ ಸಾಕಷ್ಟು ಎಚ್ಚರಿಕೆಯಿಂದ ಇದ್ದಾರೆ. ಅವರು ಗನ್ ಇಟ್ಟುಕೊಳ್ಳಲು ಲೈಸೆನ್ಸ್ ಪಡೆದಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬಳಿ ಇರುವ ದುಬಾರಿ ಕಾರನ್ನು ಬುಲೆಟ್ಪ್ರೂಫ್ ಆಗಿ ಬದಲಾಯಿಸಿದ್ದಾರೆ ಸಲ್ಮಾನ್ ಖಾನ್. ಇದೇ ಕಾರಿನಲ್ಲಿ ಅವರು ಎಲ್ಲ ಕಡೆಗಳಲ್ಲೂ ಓಡಾಡುತ್ತಿದ್ದಾರೆ.
ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರನ್ನು ಹತ್ಯೆ ಮಾಡಲಾಗಿತ್ತು. ಅವರು ತಮ್ಮ ವಾಹನದಲ್ಲಿ ಓಡಾಡುತ್ತಿರುವಾಗಲೇ ಹತ್ಯೆ ಮಾಡಲಾಗಿತ್ತು. ಈ ಘಟನೆ ಬಳಿಕ ಸಲ್ಲುಗೆ ಕೊಲೆ ಬೆದರಿಕೆ ಬಂದಿತ್ತು. ಈ ಕಾರಣದಿಂದ ಸಲ್ಮಾನ್ ಖಾನ್ ಅವರು ತಮ್ಮ ಸುರಕ್ಷತಾ ದೃಷ್ಟಿಯಿಂದ ಗನ್ ಲೈಸೆನ್ಸ್ ಪಡೆದಿದ್ದಾರೆ. ಈಗ ಬುಲೆಟ್ ಪ್ರೂಫ್ ಕಾರಿನಲ್ಲಿ ಓಡಾಡಲು ಪ್ರಾರಂಭಿಸಿದ್ದಾರೆ.
ಸಲ್ಮಾನ್ ಖಾನ್ ಬಳಿ ಟೊಯಾಟೋ ಲ್ಯಾಂಡ್ ಕ್ರೂಸ್ ಎಸ್ಯುವಿ ಇದೆ. ಇದರ ಎಕ್ಸ್ ಶೋರೂಂ ಬೆಲೆ 1.50-1.80 ಕೋಟಿ ರೂಪಾಯಿ ಇದೆ. ತೆರಿಗೆಯನ್ನೂ ಸೇರಿಸಿದರೆ ಇದರ ಬೆಲೆ 2 ಕೋಟಿ ರೂಪಾಯಿ ಆಗಲಿದೆ. ಈ ಕಾರನ್ನು ಈಗ ಅವರು ಬುಲೆಟ್ಪ್ರೂಫ್ ಆಗಿ ಬದಲಾಯಿಸಿದ್ದಾರೆ. ಈ ಕಾರಿನಲ್ಲಿ ಸಲ್ಮಾನ್ ಖಾನ್ ಅವರು ಮುಂಬೈ ಏರ್ಪೋರ್ಟ್ಗೆ ಬಂದಿದ್ದಾರೆ. ಈ ವಿಡಿಯೋಗಳನ್ನು ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಬೆನ್ನಲ್ಲೇ ಸಲ್ಮಾನ್ ಖಾನ್ ಜತೆಗಿನ ಸಿನಿಮಾ ಬಗ್ಗೆ ಅಪ್ಡೇಟ್ ನೀಡಿದ ಸುದೀಪ್
ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಮಾನ್ ಖಾನ್ ಅವರಿಗೆ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ‘ಕಭಿ ಈದ್ ಕಭಿ ದಿವಾಲಿ’ ಹಾಗೂ ‘ಟೈಗರ್ 3’ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಈ ಎರಡು ಚಿತ್ರದ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ವಿಕ್ರಾಂತ್ ರೋಣ’ ಚಿತ್ರವನ್ನು ಅವರು ಹಿಂದಿಯಲ್ಲಿ ಪ್ರೆಸೆಂಟ್ ಮಾಡಿದ್ದಾರೆ.